ಮುಳ್ಳೂರು, ಡಿ. 4: ಎಸ್.ಸಿ-ಎಸ್.ಪಿ. ಮತ್ತು ಟಿ.ಎಸ್.ಪಿ. ಕಾಯ್ದೆ ಅಡಿಯಲ್ಲಿ ರಾಜ್ಯಮಟ್ಟದಲ್ಲಿರುವ ರೂ. 22 ಸಾವಿರ ಕೋಟಿ ಅನುದಾನವನ್ನು ಎಸ್.ಸಿ. ಮತ್ತು ಎಸ್.ಟಿ. ಸಮುದಾಯದ ಬೆಳವಣಿಗೆಗೆ ಉಪಯೋಗಿಸಬೇಕು. ಎಸ್.ಸಿ-ಎಸ್.ಪಿ. ಮತ್ತು ಟಿ.ಎಸ್.ಪಿ. ಕಾಯ್ದೆ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬಾಕಿ ಇರುವ ಪ್ರಗತಿಯನ್ನು ಸರಕಾರ ಮುಂದುವರೆಸಬೇಕೆಂದು ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಶನಿವಾರಸಂತೆ ಹೋಬಳಿ ಘಟಕದ ಸಂಚಾಲಕ ಸಿ.ಸಿ. ಲೋಕೇಶ್ ಸರಕಾರಕ್ಕೆ ಒತ್ತಾಯಿಸಿದರು.

ಶನಿವಾರಸಂತೆ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೋಕೇಶ್, ರಾಜ್ಯಮಟ್ಟದಲ್ಲಿರುವ ರೂ. 22 ಸಾವಿರ ಕೋಟಿ ಅನುದಾನವನ್ನು ಎಸ್.ಸಿ. ಹಾಗೂ ಎಸ್.ಟಿ. ಸಮುದಾಯದವರಿಗೆ ಸಂಬಂಧಪಟ್ಟ ಇಲಾಖೆಗಳಾದ ಅಂಬೇಡ್ಕರ್ ನಿಗಮ, ವಾಲ್ಮಿಕಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಾಲೆ ಮತ್ತು ವಸತಿ ಕಾಲೇಜುಗಳಿಗೆ ವರ್ಗಾಯಿಸಿ ಈ ಮೂಲಕ ವರ್ಷದ ಅವಧಿಯ ವೇಳೆಗೆ ಈ ಅನುದಾನವನ್ನು ಸದ್ಬಳಕೆ ಮಾಡುವಂತೆ ಒತ್ತಾಯಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರಕಾರದ ವತಿಯಿಂದ ಅಂಬೇಡ್ಕರ್ ಪ್ರತಿಮೆ ಮತ್ತು ಅಂಬೇಡ್ಕರ್ ಭವನ ಸ್ಥಾಪಿಸುವುದರ ಜೊತೆಯಲ್ಲಿ ರಾಜ್ಯ ಸರಕಾರ ಪ್ರತಿಯೊಂದು ತಾಲೂಕು, ಹೋಬಳಿ ಮತ್ತು ಕಂದಾಯ ಗ್ರಾಮಗಳಲ್ಲೂ ಅಂಬೇಡ್ಕರ್ ಪ್ರತಿಮೆ ಮತ್ತು ಭವನವನ್ನು ಸ್ಥಾಪಿಸಬೇಕು. ನಿವೇಶನ ಇಲ್ಲದವರಿಗೆ ಸರಕಾರ ನಿವೇಶನ ಮಂಜೂರು ಮಾಡುವುದು, ಉಚಿತ ಮನೆ ನಿರ್ಮಿಸಿಕೊಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭ ದ.ಸಂ.ಸ. (ಪ್ರೊ. ಕೃಷ್ಣಪ್ಪ ಸ್ಥಾಪಿತ) ಶನಿವಾರಸಂತೆ ಹೋಬಳಿ ಘಟಕದ ಆಲೂರು-ಸಿದ್ದಾಪುರ ವಲಯ ಸಂಚಾಲಕರಾಗಿ ಪ್ರೇಮ್‍ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ಗೋಷ್ಠಿಯಲ್ಲಿ ದ.ಸಂ.ಸ. ಜಿಲ್ಲಾ ಸಂಚಾಲಕ ಈರಪ್ಪ, ಶನಿವಾರಸಂತೆ ಹೋಬಳಿ ಘಟಕದ ಪ್ರಮುಖರಾದ ರಾಜೇಂದ್ರ, ಚಿಣ್ಣಪ್ಪ ಮುಂತಾದವರಿದ್ದರು.