*ಸಿದ್ದಾಪುರ, ಡಿ. 3: ರಸ್ತೆ ನಿರ್ಮಾಣ ಮತ್ತು ತಡೆಗೋಡೆ ಕಾಮಗಾರಿಗಾಗಿ ಬಿಡುಗಡೆಯಾದ ಅನುದಾನ ಬೇರೆಡೆಗೆ ಸ್ಥಳಾಂತರಗೊಂಡು ಎರಡೂ ಕಾಮಗಾರಿಗಳು ಅರ್ಧದಲ್ಲೇ ನಿಂತಿರುವ ಪ್ರಕರಣ ವಾಲ್ನೂರು ಗ್ರಾಮದ ಹೊಳೆಕರೆ ಪೈಸಾರಿಯಲ್ಲಿ ಬೆಳಕಿಗೆ ಬಂದಿದೆ.

ಮಳೆಹಾನಿ ಪರಿಹಾರವಾಗಿ ಸೋಮವಾರಪೇಟೆ ತಾಲೂಕಿಗೆ ಬಿಡುಗಡೆಯಾದ ಒಂದು ಕೋಟಿ ರೂ.ಗಳಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಯತ್ನದ ಫಲವಾಗಿ 10 ಲಕ್ಷ ರೂ.ಗಳನ್ನು ಪರಿಶಿಷ್ಟರೇ ಹೆಚ್ಚಿನ ಸಂಖ್ಯೆಯಲ್ಲಿರುವ ಹೊಳೆಕರೆ ಪೈಸಾರಿಯ ವಿವಿಧ ಕಾಮಗಾರಿಗಳಿಗಾಗಿ ಮೀಸಲಿಡಲಾಗಿತ್ತು. ಮಳೆಯಿಂದ ಜರಿದು ಹೋದ ರಸ್ತೆ ಮತ್ತು ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವಾಗಲೇ ಅನುದಾನ ರೂ. 10 ಲಕ್ಷ ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಲು ಸ್ಥಳಾಂತರಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಇದರಿಂದ ಪೈಸಾರಿಯ ಕಾಮಗಾರಿ ಸ್ಥಗಿತಗೊಂಡಿದ್ದು, ಮುಂದಿನ ಮಳೆಗಾಲದಲ್ಲಿ ರಸ್ತೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಲ್ಲದೆ ಗ್ರಾಮ ಅಪಾಯವನ್ನು ಎದುರಿಸಲಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ತಕ್ಷಣ ಶಾಸಕರು ಮಧ್ಯ ಪ್ರವೇಶಿಸಿ ಅನುದಾನವನ್ನು ಉಳಿಸಿಕೊಡುವ ಮೂಲಕ ಕಾಮಗಾರಿ ಪೂರ್ಣ ಗೊಳ್ಳಲು ಸಹಕರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

- ಅಂಚೆಮನೆ ಸುಧಿ