ಮಹಿಳಾ ನ್ಯಾಯಾಧೀಶರಿಂದ ಪ್ರಮಾಣ ವಚನ

ಚೆನ್ನೈ, ಡಿ. 3: ನಾಲ್ಕು ಮಹಿಳಾ ನ್ಯಾಯಾಧೀಶರು ಸೇರಿದಂತೆ 10 ಹೊಸ ಹೆಚ್ಚುವರಿ ನ್ಯಾಯಾಧೀಶರಿಗೆ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಪಿ. ಸಾಹಿ ಅವರು ಗುರುವಾರ ಪ್ರಮಾಣ ವಚನ ಬೋಧಿಸಿದ್ದು, ಇದರೊಂದಿಗೆ, ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ 53 ರಿಂದ 63ಕ್ಕೆ ಏರಿದೆ. ಈ ಪೈಕಿ 13 ಮಹಿಳಾ ನ್ಯಾಯಾಧೀಶರಿದ್ದು, ದೇಶದ ಹೈಕೋರ್ಟ್‍ಗಳಲ್ಲಿ ಅತಿ ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ಹೊಂದಿದ ಗೌರವಕ್ಕೆ ಪಾತ್ರವಾಗಿದೆ. ಇಂದು ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಮುರಳಿ ಶಂಕರ್ ಕುಪ್ಪುರಾಜು ಮತ್ತು ನ್ಯಾಯಮೂರ್ತಿ ತಮಿಳ್ ಸೆಲ್ವಿ ಟಿ. ವಲಯಪಾಲಯ ಅವರು ದಂಪತಿಗಳಾಗಿರುವುದು ಮತ್ತೊಂದು ವಿಶೇಷ. ಹೊಸ ಹೆಚ್ಚುವರಿ ನ್ಯಾಯಾಧೀಶರನ್ನು ಸ್ವಾಗತಿಸಿದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು, ಮದ್ರಾಸ್ ಹೈಕೋರ್ಟ್‍ನಲ್ಲಿ ದಂಪತಿಗಳು ಒಂದೇ ದಿನ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಅಲ್ಲದೆ ನ್ಯಾಯಾಲಯದಲ್ಲಿ ಉಳಿದಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಅವರು ಒತ್ತಿ ಹೇಳಿದರು.

ಪಿಎಫ್‍ಐ ಕಚೇರಿ ಮೇಲೆ ಇಡಿ ದಾಳಿ

ನವದೆಹಲಿ, ಡಿ. 3: ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಕರ್ನಾಟಕ, ಸೇರಿದಂತೆ 9 ರಾಜ್ಯಗಳ 26 ಸ್ಥಳಗಳಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಕಚೇರಿ ಮತ್ತು ಪದಾಧಿಕಾರಿಗಳ ಮನೆ ಮೇಲೆ ಗುರುವಾರ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ಕೇರಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ತಾನ ಮತ್ತು ದೆಹಲಿಯಲ್ಲಿ ದಾಳಿ ಮಾಡಲಾಗಿದೆ. ಅಕ್ರಮ ಹಣಕಾಸು ವರ್ಗಾವಣೆ ಆರೋಪದ ಮೇರೆಗೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಕ್ರಮ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಕೇರಳದಲ್ಲಿ ಮಲಪ್ಪುರ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಪಿಎಫ್‍ಐ ಮುಖ್ಯಸ್ಥ ಒಎಂಎ ಸಲಾಮ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ನಸುರುದ್ದೀನ್ ಎಲಮರಂ ಅವರ ಮನೆಗಳಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಇಬ್ಬರು ಎನ್‍ಸಿಬಿ ಅಧಿಕಾರಿಗಳ ಅಮಾನತು

ನವದೆಹಲಿ, ಡಿ. 3: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಾಮೀನು ಸಿಗಲು ಸಹಕರಿಸಿದ್ದಾರೆ ಎಂಬ ಆರೋಪಿದ ಮೇಲೆ ಇಬ್ಬರು ಎನ್‍ಸಿಬಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮುಂಬೈ ವಲಯ ಘಟಕದ ಇಬ್ಬರು ಎನ್‍ಸಿಬಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಅವರ ಜಾಗಕ್ಕೆ ಹೊಸ ಅಧಿಕಾರಿಗಳನ್ನು ನೇಮಿಸಲಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಜಾಮೀನು ಪಡೆಯಲು ಸಹಕಾರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸ್ಯ ಕಲಾವಿದೆ ಭಾರತಿ ಸಿಂಗ್ ಹಾಗೂ ಇವರ ಪತಿ ಹರ್ಷ್ ಲಿಂಬಾಚಿಯಾ ಹಾಗೂ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಈ ಇಬ್ಬರು ತನಿಖಾಧಿಕಾರಿ(ಐಒ)ಗಳ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಇಬ್ಬರು ಅಧಿಕಾರಿಗಳು ಮಾತ್ರವಲ್ಲದೆ ಎನ್‍ಸಿಬಿಯ ಪ್ರಾಸಿಕ್ಯೂಟರ್ ಪಾತ್ರದ ಕುರಿತು ಸಹ ತನಿಖೆ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಎರಡೂ ಪ್ರಕರಣಗಳಲ್ಲಿ ನಿಗದಿತ ಜಾಮೀನು ವಿಚಾರಣೆ ವೇಳೆ ತನಿಖಾಧಿಕಾರಿಗಳು ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ಹಾಜರಾಗಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ಲವ್ ಜಿಹಾದ್ ವಿರುದ್ಧ ಕಾನೂನು

ಮಂಗಳೂರು, ಡಿ. 3: ಮತಾಂತರ ನಿಷೇಧ ಮತ್ತು ಲವ್ ಜಿಹಾದ್ ವಿರುದ್ಧ ಶೀಘ್ರವೇ ಕಾನೂನು ಜಾರಿ ಮಾಡುವುದು ನಿಶ್ಚಿತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಣಿಪಾಲದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಅಲಹಾಬಾದ್ ಹೈಕೋರ್ಟ್ ಆದೇಶದ ಹಿನ್ನೆಲೆ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ, ಹರಿಯಾಣದಲ್ಲಿ ಕಾನೂನು ಅಧ್ಯಯನ ಮಾಡಿ ಇನ್ನಷ್ಟು ಅಂಶಗಳನ್ನು ಸೇರ್ಪಡೆ ಮಾಡಲು ಉದ್ದೇಶಿ ಸಲಾಗಿದೆ ಎಂದರು. ಉತ್ತರ ಪ್ರದೇಶ ಸರ್ಕಾರ ಈಚೆಗೆ ಲವ್ ಜಿಹಾದ್ ಕಾನೂನು ಜಾರಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದ್ದು ಅದರ ಪ್ರತಿಯನ್ನು ಪಡೆದು ಪರಿಶೀಲಿಸಿ ಯಾವ ಅಂಶಗಳನ್ನು ಕಾನೂನಿನಲ್ಲಿ ಸೇರಿಸಬೇಕು ಎಂದು ಚರ್ಚಿಸಿ ನಿರ್ಧರಿಸಲಾಗುವುದು. ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ ಎಂದು ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದರು.

ಹೆಚ್. ವಿಶ್ವನಾಥ್ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ

ಬೆಂಗಳೂರು, ಡಿ. 3: ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ಸಿ.ಪಿ. ಯೋಗೇಶ್ವರ್, ಎನ್.ಆರ್. ಸಂತೋಷ್ ಹಾಗೂ ಹೆಚ್. ವಿಶ್ವನಾಥ್ ಅವರನ್ನು ಬಂಧಿಸಿ ತನಿಖೆ ನಡೆಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಆನಂದ್‍ರಾವ್ ವೃತ್ತದ ಬಳಿ ಇರುವ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ವಿರುದ್ಧ ಘೋಷಣೆ ಕೂಗಿದರು. ಇಬ್ಬರೂ ಬಿಜೆಪಿ ಸರ್ಕಾರ ರಚನೆ ಮಾಡುವ ವೇಳೆ, ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣ ಬಳಸಿರುವುದು ಬಹಿರಂಗಗೊಂಡಿದೆ. ಕೇಂದ್ರ ಸರ್ಕಾರ ಕಪ್ಪು ಹಣ ಹೊಂದಿರುವವರ ವಿರುದ್ಧ ಕ್ರಮ ಜರುಗಿಸುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರೆ. ಆದರೆ ತಮ್ಮ ಪಕ್ಷದ ನಾಯಕರ ವಿರುದ್ಧ ಮಾತ್ರ ದಿವ್ಯ ಮೌನ ವಹಿಸುತ್ತಾರೆ. ಬಿಜೆಪಿಯ ಹೆಚ್. ವಿಶ್ವನಾಥ್ ಇತ್ತೀಚೆಗೆ ಮಾತನಾಡಿದ ಸಂದರ್ಭದಲ್ಲಿ ತಮಗೆ ಸಿ.ಪಿ. ಯೋಗೇಶ್ವರ್ ಮತ್ತು ಎನ್.ಆರ್. ಸಂತೋಷ್ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರಿಂದ ತಲುಪಿಸಬೇಕಾಗಿದ್ದ ಹಣವನ್ನು ತಲುಪಿಸಿಲ್ಲ. ಈ ಇಬ್ಬರನ್ನು ತಕ್ಷಣ ಬಂಧಿಸಿ ಇವರುಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ ರಜನಿ

ಚೆನ್ನೈ, ಡಿ. 3: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುರುವಾರ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ದಶಕಗಳ ಉಹಾಪೋಹಕ್ಕೆ ತೆರೆ ಎಳೆದಿದ್ದಾರೆ. ತಮಿಳುನಾಡಿನಲ್ಲಿ ಬದಲಾವಣೆ ತರಲು ನಾನು ರಾಜಕೀಯವನ್ನು ಪ್ರವೇಶಿಸಲು ನಿರ್ಧರಿಸಿದ್ದೇನೆ. ನಾನು ಈ ಕಾರ್ಯಾಚರಣೆಯಲ್ಲಿ ಕೇವಲ ಒಂದು ಸಣ್ಣ ಸಾಧನ ಅಷ್ಟೆ. ನಾನು ಯಶಸ್ವಿಯಾದರೆ ಅದು ಜನರ ಯಶಸ್ಸು. ನಾನು ಸೋತರೆ (ನನ್ನ ಪ್ರಯತ್ನದಲ್ಲಿ), ಅದು ನಿಮ್ಮ ಸೋಲು. ರಾಜ್ಯದಲ್ಲಿ ಬದಲಾವಣೆ ತರಲು ನೀವು ನನ್ನೊಂದಿಗೆ ನಿಲ್ಲಬೇಕು ಎಂದು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ನಾವು ಎಲ್ಲವನ್ನೂ ಪರಿವರ್ತಿಸೋಣ. ಈಗ ಇಲ್ಲದಿದ್ದರೆ ಅದು ಎಂದಿಗೂ ಆಗುವುದಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. ಇಂದು ಪೋಯಸ್ ಗಾರ್ಡನ್‍ನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಜನಿ, ಪ್ರತಿಯೊಬ್ಬ ವ್ಯಕ್ತಿಗೂ ಒಂದು ಹಣೆಬರಹ ಇರುತ್ತದೆ. ಅಂತೆಯೇ, ದೇಶಕ್ಕೂ ಒಂದು ಹಣೆಬರಹವಿದೆ. ಆದ್ದರಿಂದ, ಈಗ ಇದು ತಮಿಳುನಾಡಿನ ಹಣೆಬರಹವನ್ನು ಬದಲಾಯಿಸುವ ಸಮಯ. ಖಂಡಿತವಾಗಿ, ತಮಿಳುನಾಡಿನ ಕಾವಲುಗಾರರ ಮತ್ತು ಅದರ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ ಎಂದಿದ್ದಾರೆ.

ಹೃದಯ ತಜ್ಞ ಶ್ರೀನಿವಾಸಮೂರ್ತಿ ನಿಧನ

ಬಳ್ಳಾರಿ, ಡಿ. 3: ಖ್ಯಾತ ಹೃದಯ ತಜ್ಞರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬಿ.ಕೆ. ಶ್ರೀನಿವಾಸಮೂರ್ತಿ (80) ಇಂದು ನಿಧನರಾದರು. ಬಳ್ಳಾರಿಯ ಸರಳ, ಸಜ್ಜನ ವೈದ್ಯರಾಗಿದ್ದ, ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಮೂರು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ವಿಧಿವಶರಾಗಿದ್ದಾರೆ. ಕೇಂದ್ರದ ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರು ಬಳ್ಳಾರಿಯಲ್ಲಿ ವರ ಮಹಾಲಕ್ಷ್ಮಿ ಪೂಜೆಯನ್ನು, ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ಮಾಡುತ್ತಿದ್ದರು. ಸುಮಾರು 15 ವರ್ಷಗಳ ಕಾಲ ಅವರು ಬಳ್ಳಾರಿಗೆ ಬಂದು, ವರ ಮಹಾಲಕ್ಷ್ಮಿ ಪೂಜೆಯನ್ನು ನೆರವೇರಿಸುತ್ತಿದ್ದರು. ಬಿ.ಕೆ. ಶ್ರೀನಿವಾಸಮೂರ್ತಿ ನಗರದಲ್ಲಿ ಬಿ.ಕೆ.ಎಸ್. ಆಸ್ಪತ್ರೆಯ ಮೂಲಕ ಜನ ಸೇವೆ ಮಾಡುತ್ತಾ ಜನರ ಪ್ರೀತಿಗೆ ಪಾತ್ರವಾಗಿದ್ದರು.