ಶನಿವಾರಸಂತೆ, ಡಿ. 3: ಸಮೀಪದ ಕೊಡ್ಲಿಪೇಟೆ ಕೊಡಗು-ಹಾಸನ ಜಿಲ್ಲೆಗಳ ಗಡಿಭಾಗವಾಗಿದ್ದು, ಸಮಸ್ಯೆಗಳ ಆಗರವಾಗಿದೆ. ಇಲ್ಲಿ ಬ್ರಿಟಿಷರ ಆಡಳಿತ ಕಾಲದ ಪೊಲೀಸ್ ಠಾಣೆ ಇದ್ದು, ಇದಕ್ಕೆ ಸಂಬಂಧಿಸಿದಂತೆ 40-50 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಪೊಲೀಸ್ ವಸತಿ ಗೃಹಗಳು ದುರಸ್ತಿ ಕಾಣದೇ ವಸತಿ ಸೌಲಭ್ಯ ಇಲ್ಲದೇ ಕೆಲವರು ಠಾಣೆಯ ಸೆಲ್‍ವೊಂದರಲ್ಲೆ ಅಡುಗೆ ಮಾಡಿಕೊಳ್ಳುವಂತಾಗಿದೆ.

ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯಲ್ಲಿ ಓರ್ವ ಎಎಸ್‍ಐ, ಓರ್ವ ಹೆಡ್ ಕಾನ್ಸ್‍ಟೇಬಲ್ ಹಾಗೂ 3 ಮಂದಿ ಪಿಸಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಪ ಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪ ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಈ ಉಪ ಠಾಣೆ ವ್ಯಾಪ್ತಿಗೆ 24 ಪ್ರಮುಖ ಗ್ರಾಮಗಳು ಬರುತ್ತವೆ. ಈ ಭಾಗದಲ್ಲಿ ಅಕ್ರಮ ಮರಗಳ್ಳತನ, ಮರಳು ಗಣಿಗಾರಿಕೆ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಲೇ ಇರುವುದರಿಂದ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ, ವಸತಿ ಗೃಹ ನಿರ್ಮಾಣ, ವಾಹನ ಸೌಲಭ್ಯ ಕಲ್ಪಿಸಬೇಕಿದೆ. ಆದರೆ, ಸರಕಾರ ಇತ್ತ ಗಮನ ಹರಿಸುತ್ತಿಲ್ಲ. ಠಾಣೆಯ, ವಸತಿ ಗೃಹದ ದುರಸ್ತಿಗೆ ಸ್ಪಂದಿಸುತ್ತಿಲ್ಲ ಎಂಬದು ಸ್ಥಳೀಯರ ಆರೋಪ.

ಉಪ ಠಾಣೆ ಶತಮಾನದ ಹಿಂದಿನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶಿಥಿಲಗೊಂಡಿದ್ದ ಕಟ್ಟಡವನ್ನು ಅಲ್ಪಸ್ವಲ್ಪ ದುರಸ್ತಿಪಡಿ ಸಲಾಗಿದ್ದರೂ, ಸೂಕ್ತ ಕಟ್ಟಡದ ಅವಶ್ಯಕತೆಯಿದೆ. ಅವೈಜ್ಞಾನಿಕ ಕೆಲಸದ ಕಾರಣದಿಂದ ಎಎಸ್‍ಐ ವಸತಿ ನಿಲಯ ಹಾಗೂ ಸಿಬ್ಬಂದಿ ವಸತಿ ನಿಲಯ ಕಟ್ಟಡ ಶಿಥಿಲಗೊಂಡಿದೆ. ದುರಸ್ತಿ ಕಾಣದೇ ಪಾಳು ಬಿದ್ದಿದ್ದು, ಒಳಭಾಗದಲ್ಲಿ ಗಿಡಮರಗಳು ಬೆಳೆದಿದ್ದು, ಸಣ್ಣಪುಟ್ಟ ಕಾಡುಪ್ರಾಣಿಗಳ ತಾಣವಾಗಿದೆ. ಕಟ್ಟಡದಲ್ಲಿ ವಾಸ ಮಾಡಲು ಅಂಜಿದ ಸಿಬ್ಬಂದಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೆಲವರು ಅನಿವಾರ್ಯವಾಗಿ ಠಾಣೆಯ ಸೆಲ್‍ನಲ್ಲಿ ಅಡುಗೆ ಮಾಡಿಕೊಂಡು ರಾತ್ರಿ ಪಹರೆ ಕಾಯುವಂತಾಗಿದೆ.

ಉಪ ಪೊಲೀಸ್ ಠಾಣೆಗೆ 1 ಎಕರೆ 74 ಸೆಂಟ್ ಜಾಗವಿದ್ದು, ಈ ಜಾಗದಲ್ಲಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಿಸ ಬಹುದಾಗಿದೆ. ಆದರೆ, ಈ ಬಗ್ಗೆ ಯಾರೂ ಆಸಕ್ತಿ ವಹಿಸುತ್ತಿಲ್ಲ. ಇನ್ನಾದರೂ ಸರಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಗಮನಹರಿಸಿ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ, ಸಿಬ್ಬಂದಿಗೆ ವಸತಿ ಸೌಕರ್ಯ ನಿರ್ಮಿಸಿಕೊಟ್ಟು ಸಾರ್ವಜನಿಕ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಅವರು, ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆ ಸಿಬ್ಬಂದಿಗೆ ವಸತಿ ಗೃಹ ನಿರ್ಮಿಸಲು ಗೃಹ ಇಲಾಖೆ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರಕಾರದಿಂದ ಒಪ್ಪಿಗೆ ಸಿಕ್ಕಿದೆ. ಕಾದಿರಿಸಿದ ಜಾಗದಲ್ಲೇ ಸಿಬ್ಬಂದಿಗಾಗಿ ವಸತಿ ಗೃಹ ನಿರ್ಮಿಸಲಾಗುತ್ತದೆ. ಇನ್ನು ಠಾಣೆ ವ್ಯಾಪ್ತಿಗೆ ಬರುವ ಗ್ರಾಮಗಳು, ಕ್ರಿಮಿನಲ್ ಪ್ರಕರಣಗಳು, ಇತ್ಯಾದಿ ಸಾರ್ವಜನಿಕ ಸಮಸ್ಯೆಗಳು ಹಾಗೂ ಅವಶ್ಯಕತೆಗಳ ಬಗ್ಗೆ ಸರ್ವೆ ನಡೆಸಿದ ನಂತರವಷ್ಟೆ ಸರಕಾರ ಮಟ್ಟದಲ್ಲಿ ಉಪಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪ ನಡೆಯಲ್ಪಡುತ್ತದೆ ಎಂದು ತಿಳಿಸಿದ್ದರು.

ಈ ಕ್ಷೇತ್ರದ ಶಾಸಕರಾಗಲಿ, ಸಂಸದರ ಆಸಕ್ತಿಯೊಂದಿಗೆ ಮುಂದಾದರೂ ಸರಕಾರ ಪೊಲೀಸ್ ಗೃಹ ಇಲಾಖೆ ವಸತಿ ಗೃಹ ನಿರ್ಮಾಣದ ಬಗ್ಗೆ ಗಮನ ಹರಿಸಬೇಕಿದೆ ಎಂದು ಕೊಡ್ಲಿಪೇಟೆ ಕರವೇ ಕಾರ್ಯದರ್ಶಿ ಡಿ.ಆರ್. ವೇದಕುಮಾರ್ ಹಾಗೂ ಇತರರು ಒತ್ತಾಯಿಸಿದ್ದಾರೆ.