vಪ.ಪಂ. ಅಧ್ಯಕ್ಷ ಜಯವರ್ಧನ್

ಕುಶಾಲನಗರ, ಡಿ. 3: ಪಟ್ಟಣ ಪಂಚಾಯಿತಿಯ ಮುಂದಿನ ಸಾಲಿನ ಬಜೆಟ್‍ನಲ್ಲಿ ಕಾವೇರಿ ನದಿ ಸ್ವಚ್ಛತೆಗೆ ಆದ್ಯತೆ ನೀಡುವುದರೊಂದಿಗೆ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು ಎಂದು ಕುಶಾಲನಗರ ಪ.ಪಂ. ಅಧ್ಯಕ್ಷ ಜಯವರ್ಧನ್ ಹೇಳಿದರು.

ಕುಶಾಲನಗರದ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಜೀವನದಿಗೆ ನಡೆದ 113ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಆರತಿ ಬಳಗದ ಮೂಲಕ ಸ್ವಚ್ಛ ಕಾವೇರಿಗಾಗಿ ಜನರಲ್ಲಿ ಅರಿವು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದ ಜಯವರ್ಧನ್, ಪಟ್ಟಣದ ಇತರೆಡೆ ಇರುವ ಸ್ನಾನಘಟ್ಟದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು. ನಾಗರಿಕರು ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣದಲ್ಲಿ ಸಂಪೂರ್ಣವಾಗಿ ಕೈಜೋಡಿಸ ಬೇಕೆಂದು ಕೋರಿದರು.

ಈ ಸಂದರ್ಭ ಮಾತನಾಡಿದ ಪ.ಪಂ. ಉಪಾಧ್ಯಕ್ಷೆ ಸುರಯ್ಯಭಾನು, ಈಗಾಗಲೇ ದಂಡಿನಪೇಟೆ ವ್ಯಾಪ್ತಿಯಲ್ಲಿ ನದಿ ತಟದಲ್ಲಿ ಸೋಪಾನಕಟ್ಟೆ ಕಾಮಗಾರಿ ನಡೆಯುತ್ತಿದೆ. ಇದರೊಂದಿಗೆ ಕಾವೇರಿ ನದಿಗೆ ನೇರವಾಗಿ ಹರಿಯುವ ಕಲುಷಿತ ನೀರನ್ನು ಶುದ್ಧೀಕರಿಸುವ ಬಗ್ಗೆ ಮುಂದಿನ ಸಭೆಗಳಲ್ಲಿ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಅರ್ಚಕ ಕೃಷ್ಣಮೂರ್ತಿ ಭಟ್ ಅಷ್ಟೋತ್ತರ, ಕುಂಕುಮಾರ್ಚನೆ, ಮಹಾಮಂಗಳಾರತಿ ನಂತರ ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು. ಕಾರ್ಯಕ್ರಮದಲ್ಲಿ ಪ.ಪಂ. ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಜಯವರ್ಧನ್ ಮತ್ತು ಉಪಾಧ್ಯಕ್ಷೆ ಸುರಯ್ಯಭಾನು, ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾಗಿ ಆಯ್ಕೆಗೊಂಡ ಮಂಡೇಪಂಡ ಬೋಸ್ ಮೊಣ್ಣಪ್ಪ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಆರತಿ ಬಳಗದ ಪ್ರಮುಖರಾದ ಎಂ.ಎನ್. ಚಂದ್ರ ಮೋಹನ್, ಡಿ.ಆರ್. ಸೋಮ ಶೇಖರ್, ಕೆ.ಆರ್. ಶಿವಾನಂದ, ವೈಶಾಖ್, ಪ್ರವೀಣ್, ವನಿತಾ ಚಂದ್ರಮೋಹನ್, ಸೌಮ್ಯ ಕೃಷ್ಣಮೂರ್ತಿ, ಬಿ.ಜೆ. ಅಣ್ಣಯ್ಯ ಮತ್ತಿತರರು ಇದ್ದರು.

ಕಾರ್ತಿಕ ಹುಣ್ಣಿಮೆ ಅಂಗವಾಗಿ ಸ್ಥಳೀಯ ವಾಸವಿ ಯುವತಿಯರ ಸಂಘದ ಪದಾಧಿಕಾರಿಗಳು ಜೀವನದಿ ಕಾವೇರಿಗೆ ಆರತಿ ಬೆಳಗುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಸ್ಥಳೀಯ ಶ್ರೀ ಸಾಯಿ ಮಂದಿರ, ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಸತ್ಯನಾರಾಯಣ ಪೂಜೆ ಮತ್ತು ಆರತಿ ಕಾರ್ಯಕ್ರಮ ಜರುಗಿತು.

ಕೊಪ್ಪ ಕಾವೇರಿ ಪ್ರತಿಮೆಗೆ ಅಭಿಷೇಕ, ಪೂಜಾ ವಿಧಿವಿಧಾನಗಳು ನಡೆದವು. ಬಾರವಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು.