ಮಡಿಕೇರಿ, ಡಿ.2: ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ್ದು, ಮಾದರಿ ನೀತಿ ಸಂಹಿತೆಯು ಚುನಾವಣೆ ನಡೆಯುವ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ. ಮಾದರಿ ನೀತಿ ಸಂಹಿತೆಯು ಡಿಸೆಂಬರ್ 31 ರ ಸಂಜೆ-5 ಗಂಟೆಯ ವರೆಗೆ ಜಾರಿಯಲ್ಲಿದ್ದು, ಮಾದರಿ ನೀತಿ ಸಂಹಿತಿಯು ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಸದಾಚಾರ ಸಂಹಿತೆ ಎಂಬ ಪುಸ್ತಕವೊಂದನ್ನು ಪ್ರಕಟಿಸಿದೆ. ಮಾದರಿ ನೀತಿ ಸಂಹಿತೆಯು ಉಲ್ಲಂಘನೆ ಯಾಗದಂತೆ ನೋಡಿಕೊಳ್ಳುವ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ.ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳು ಸಾಮಾನ್ಯ ಸಭೆಯನ್ನು ನಡೆಸಲು ನೀತಿ ಸಂಹಿತೆಯು ಅಡ್ಡಿಯಿರುವುದಿಲ್ಲ. ಆದರೆ ಈ ಸಭೆಯಲ್ಲಿ ಯಾವುದೇ ಹೊಸ ಯೋಜನೆಗಳ ಅನುಷ್ಠಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳತಕ್ಕದ್ದಲ್ಲ. ಈಗಾಗಲೇ ಆಯವ್ಯಯ ಒದಗಿಸಿರುವ ಯೋಜನೆಗಳನ್ನು ಪ್ರಾರಂಭಿಸಲು ಅಥವಾ ಪ್ರಾರಂಭವಾಗಿದ್ದಲ್ಲಿ ಕೆಲಸ ಮುಂದುವರಿಸಲು ಯಾವುದೇ ಬಾಧಕವಿಲ್ಲ.
ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಅಥವಾ ಈ ಯೋಜನೆಯಡಿ ಇತರ ಕಾಮಗಾರಿಗಳನ್ನು ತೆಗೆದುಕೊಂಡು ಅನುಷ್ಠಾನಗೊಳಿಸಲು ನೀತಿ ಸಂಹಿತೆಯ ಅಡ್ಡಿಯಿರುವುದಿಲ್ಲ. ಆದರೆ ಇಂತಹ ಯೋಜನೆಯ ಅನುಷ್ಠಾನ ವನ್ನು ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರುಗಳ ಉಪಸ್ಥಿತಿಯಲ್ಲಿ ನಡೆಸುವುದನ್ನು ನಿಷೇಧಿಸಲಾಗಿದೆ.
ನೆರೆಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆಯು ಅಡ್ಡಿಯಾಗುವುದಿಲ್ಲ. ಗ್ರಾ.ಪಂ.ಚುನಾವಣೆಗಳು ಪಕ್ಷರಹಿತವಾಗಿ ನಡೆಯುವುದರಿಂದ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಮತ್ತು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿ ಅಭ್ಯರ್ಥಿಗಳು ಪ್ರಚಾರ ಮಾಡ ಕೂಡದು. ಒಂದು ವೇಳೆ ಪ್ರಚಾರ ನಡೆಸಿದ್ದಲ್ಲಿ ಅಭ್ಯರ್ಥಿಯು ಮುದ್ರಿಸಿರುವ ಕರಪತ್ರ, ಪೋಸ್ಟರ್ ಅಥವಾ ಇನ್ಯಾವುದೇ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಯಾವುದೇ ಸಾಂಸ್ಕøತಿಕ, ಧಾರ್ಮಿಕ ಸಭೆ ಮತ್ತು ಸಮಾರಂಭ ಗಳನ್ನು ನಡೆಸಲು ನೀತಿ ಸಂಹಿತೆಯು ಅಡ್ಡಿಯಿಲ್ಲ. ಆದರೆ ಇಂತಹ ಸಭೆ ಸಮಾರಂಭಗಳಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಿ ನೀತಿ ಸಂಹಿತೆಗೆ ಬಾಧಕವಾಗುವ
(ಮೊದಲ ಪುಟದಿಂದ) ರೀತಿಯಲ್ಲಿ ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ ಹೇಳಿಕೆ ಅಥವಾ ಆಶ್ವಾಸನೆ ಮಾಡುವಂತಿಲ್ಲ. ಯಾವುದೇ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದರೆ ಅದನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ. ಆದರೆ ನೇಮಕಾತಿಯನ್ನು ಈ ಸಮಯದಲ್ಲಿ ಅಂತಿಮಗೊಳಿಸಿ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟಗೊಳಿಸಬಾರದು. ಒಟ್ಟಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಸರ್ಕಾರಿ ಕಾರ್ಯಕ್ರಮ ಅಥವಾ ಯೋಜನೆಯು ನಡೆಸಬಾರದು.
ಜಿಲ್ಲಾ ಮಟ್ಟದಲ್ಲಿ/ ತಾಲೂಕು ಮಟ್ಟದಲ್ಲಿ ಪಡಿತರ ಚೀಟಿ ವಿತರಣೆ, ಗ್ರಾಮೀಣ ಭಾಗಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಭೆಗಳನ್ನು ಸಚಿವರು/ ಶಾಸಕರು ಮತ್ತು ಅಧಿಕಾರಿಗಳು ನಡೆಸುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ.
ಯಾವುದೇ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶವಿರುವುದಿಲ್ಲ. ಆದರೆ ಯಾವುದಾದರೂ ತುರ್ತು ಸೇವೆಗೆ ನೇಮಕಾತಿ ಅವಶ್ಯಕವಿದ್ದಲ್ಲಿ ಚುನಾವಣಾ ಆಯೋಗದ ಅನುಮೋದನೆ ಪಡೆದು ನೇಮಕಾತಿ ಮಾಡಬಹುದು. ಯಾವುದೇ ಇಲಾಖೆಯಲ್ಲಿ ಸಾಮಾನ್ಯ ಮುಂಬಡ್ತಿಯನ್ನು ನೀಡಲು ಯಾವುದೇ ಬಾಧಕವಿರುವುದಿಲ್ಲ. ಚುನಾವಣೆಗಳಿಗೆ ನಿಯೋಜಿಸಿದ ಯಾವುದೇ ಸಿಬ್ಬಂದಿಯ ವರ್ಗಾವಣೆಯನ್ನು ಮಾಡುವಂತಿಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ “ಜನ ಸ್ಪಂದನ ಸಭೆ” ನಡೆಸುವಂತಿಲ್ಲ. ಭೂ ನ್ಯಾಯಮಂಡಳಿ ಸಮಿತಿ ಸಭೆಗಳನ್ನು (ಟ್ರಿಬ್ಯೂನಲ್) ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಸುವಂತಿಲ್ಲ. ಮಂತ್ರಿಗಳು ಅಥವಾ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಮತ್ತು ಇತರ ಸಭೆಗಳನ್ನು ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಸುವಂತಿಲ್ಲ.
ಪಂಚಾಯಿತಿಗಳು ಚುನಾವಣಾ ಪೂರ್ವದಲ್ಲಿ ಪ್ರಾರಂಭಿಸಿರುವ/ ಜಾರಿಯಲ್ಲಿರುವ ಕಾಮಗಾರಿಗಳ ಸಂಬಂಧ ಪಂಚಾಯಿತಿಯು ಹಣವನ್ನು ಪಾವತಿ ಮಾಡಲು ನೀತಿ ಸಂಹಿತೆ ಅಡ್ಡಿಯಿರುವುದಿಲ್ಲ. ಆದರೆ ಪಂಚಾಯಿತಿಗಳು ಯಾವುದೇ ಹೊಸ ಕಾಮಗಾರಿಗಳನ್ನು ನಿರ್ಧರಿಸಲಾಗಿದೆ ಎಂಬ ಕಾರಣ ನೀಡಿ ಪ್ರಾರಂಭಿಸುವಂತಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಮಂತ್ರಿಗಳು ಅಥವಾ ಶಾಸಕರು ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿ ಮತದಾರರನ್ನು ಪ್ರಭಾವಿಸುವಂತಹ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸದಾಚಾರ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರವು ಜಿಲ್ಲಾಧಿಕಾರಿಗೆ ನಿಹಿತವಾಗಿದ್ದು ಸದಾಚಾರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮಾದರಿ ನೀತಿ ಸಂಹಿತೆ ತಂಡಗಳನ್ನು ನೇಮಕ ಮಾಡಲಾಗುವುದು.
ಚುನಾವಣಾ ಅಭ್ಯರ್ಥಿಗಳ ಪ್ರಚಾರದ ಸಂಬಂಧ ಚುನಾವಣೆ ನಡೆಯುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಧಿಕೃತ ಪೋಸ್ಟರ್‍ಗಳು, ಬ್ಯಾನರ್‍ಗಳು ಇರದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸುವುದು. ಸರ್ಕಾರಿ ವಾಹನಗಳು ದುರುಪಯೋಗವಾಗದಂತೆ, ತಾಲೂಕು ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ/ ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ/ ಅರೆ ಸರ್ಕಾರಿ ಕಚೇರಿ, ಬೋರ್ಡುಗಳು/ ಎಪಿಎಂಸಿ ಮುಂತಾದ ಕಚೇರಿ ಮುಖ್ಯಸ್ಥರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.