ಸೋಮವಾರಪೇಟೆ,ಡಿ.2: ಸಾರ್ವಜನಿಕ ಕೆಲಸಕ್ಕೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಧಾಳಿ ನಡೆಸಿ, ಸೋಮವಾರಪೇಟೆಯಲ್ಲಿ ಲ್ಯಾಂಡ್ ಸರ್ವೇಯರ್ ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ಇಂದು ಅಪರಾಹ್ನ ನಡೆದಿದೆ.ಕಳೆದ ನವೆಂಬರ್ 13 ರಂದು ಶನಿವಾರಸಂತೆ ನಾಡ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಕಂದಾಯ ಇಲಾಖೆಯ ಅಧಿಕಾರಿಯನ್ನು ಎಸಿಬಿ ಬಲೆಗೆ ಬೀಳಿಸಿದ ಘಟನೆ ಹಸಿರಾಗಿರು ವಾಗಲೇ ಇಂದು ಮತ್ತೊಂದು ಮಿಕವನ್ನು ಎಸಿಬಿ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ. ಸೋಮವಾರ ಪೇಟೆ ತಾಲೂಕು ಕಚೇರಿ ಸಮುಚ್ಚಯ ದಲ್ಲಿರುವ ಸರ್ವೇ ಇಲಾಖೆಯಲ್ಲಿ ಭೂಮಾಪಕನಾಗಿರುವ ದಿಲೀಪ್ ಕುಮಾರ್ ಎಂಬಾತನೇ ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ಬಲೆಗೆ ಬಿದ್ದವನು.
ಹಾಕತ್ತೂರು ಸಮೀಪದ ಬಿಳಿಗೇರಿ ಗ್ರಾಮದ ತೇಲಪಂಡ ಸೋಮಯ್ಯ ಎಂಬವರು ನೀಡಿದ ದೂರಿನ ಆಧಾರದ ಮೇರೆ ಲ್ಯಾಂಡ್ ಸರ್ವೇಯರ್‍ನನ್ನು ಲಂಚ ಪಡೆಯುವ ಸಂದರ್ಭ ‘ರೆಡ್ ಹ್ಯಾಂಡ್’ ಆಗಿ ವಶಕ್ಕೆ ಪಡೆಯಲಾಗಿದೆ.ಸೋಮಯ್ಯ ಅವರಿಗೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ವಳಮುಡಿ ಗ್ರಾಮದಲ್ಲಿ 13 ಎಕರೆ ಆಸ್ತಿಯಿದ್ದು, (ಮೊದಲ ಪುಟದಿಂದ) ಇದರಲ್ಲಿ ಸಹೋದರರ ಪಾಲೂ ಅಡಗಿದೆ. ಈ ಹಿನ್ನೆಲೆ ಜಾಗಕ್ಕೆ ಕಂದಾಯ ನಿಗದಿ ಮಾಡಿ ಪಾಲುಪಾರಿಕತ್ತು ಮಾಡಿಕೊಳ್ಳಲು ಸರ್ವೇ ಇಲಾಖೆಗೆ ಕಳೆದ ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಲೇವಾರಿಗಾಗಿ ಕಳೆದ ವಾರ ಸರ್ವೇಯರ್ ದಿಲೀಪ್ ಸ್ಥಳಕ್ಕೆ ತೆರಳಿ ಜಾಗದ ಸರ್ವೇ ಮಾಡಿದ್ದ ಎನ್ನಲಾಗಿದೆ.
ತದನಂತರ 25 ಸಾವಿರ ಹಣವನ್ನು ಕಚೇರಿಗೆ ತರುವಂತೆ ತಿಳಿಸಿದ್ದ. ಇದರೊಂದಿಗೆ ತನ್ನ ಸ್ನೇಹಿತನ ಮುಖಾಂತರವೂ ಹಣಕ್ಕೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸೋಮಯ್ಯ ಅವರು ದಿಲೀಪ್ ನೊಂದಿಗೆ ಚೌಕಾಸಿ ನಡೆಸಿದ್ದು, ಹಣದ ಪ್ರಮಾಣವನ್ನು ಕಡಿಮೆ ಮಾಡಿ ಕೊಳ್ಳುವಂತೆ ಮನವಿ ಮಾಡಿದ್ದರು.
ಇದಕ್ಕೆ ಒಪ್ಪಿದ ದಿಲೀಪ್ ರೂ. 20 ಸಾವಿರಕ್ಕೆ ಡೀಲ್ ಕುದುರಿಸಿದ್ದ. ಈ ನಡುವೆ ಸರ್ಕಾರಿ ಅಧಿಕಾರಿ ಸಾರ್ವಜನಿಕ ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟ ಬಗ್ಗೆ ಸೋಮಯ್ಯ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಅದರಂತೆ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿದ ಎಸಿಬಿ ಅಧಿಕಾರಿಗಳು, ಇಂದು ಮಧ್ಯಾಹ್ನ ಅರ್ಜಿದಾರ ಸೋಮಯ್ಯ ಅವರಿಂದ ಸರ್ವೇಯರ್ ದಿಲೀಪ್, ಲಂಚದ ಹಣ 20 ಸಾವಿರವನ್ನು ಪಡೆಯುತ್ತಿದ್ದ ಸಂದರ್ಭ ತಾಲೂಕು ಕಚೇರಿ ಆವರಣದಲ್ಲಿಯೇ ಧಾಳಿ ನಡೆಸಿ, ಹಣ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ದಕ್ಷಿಣ ವಲಯ ಮೈಸೂರು ಪೆÇಲೀಸ್ ಅಧೀಕ್ಷಕರಾದ ಡಾ. ಡಿ.ಪಿ. ಸುಮನ್ ಅವರ ಮಾರ್ಗದರ್ಶನದಲ್ಲಿ, ಭ್ರಷ್ಟಾಚಾರ ನಿಗ್ರಹ ದಳದ ಪೆÇಲೀಸ್ ಉಪಾಧೀಕ್ಷಕ ಸದಾನಂದ್ ತಿಪ್ಪಣ್ಣನವರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೆÇಲೀಸ್ ನಿರೀಕ್ಷಕರುಗಳಾದ ಶ್ರೀಧರ್, ಶಿಲ್ಪ, ಸಿವಿಲ್ ಹೆಡ್‍ಕಾನ್ಸ್‍ಟೇಬಲ್ ದಿನೇಶ್, ಪೆÇಲೀಸ್ ಕಾನ್ಸ್‍ಟೇಬಲ್‍ಗಳಾದ ಸಜನ್, ಪ್ರವೀಣ್‍ಕುಮಾರ್, ಲೋಹಿತ್, ದೀಪಿಕಾ, ಸುರೇಶ್, ವಿಶ್ವನಾಥ್, ನರುಣ್ ಅವರುಗಳು ಭಾಗವಹಿಸಿದ್ದರು. ಬಂಧಿತ ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.