ಮಡಿಕೇರಿ, ಡಿ. 2: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಟಿ.ಪಿ. ರಮೇಶ್ ದತ್ತಿ ಪ್ರಶಸ್ತಿಯನ್ನು ಕೆ.ಆರ್. ಹರ್ಷಿತಾ ಅವರಿಗೆ ಪ್ರದಾನ ಮಾಡುವುದರೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಏಳು ಮಂದಿಯನ್ನು ಸನ್ಮಾನಿಸಿ, ಗೌರವಿಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು 603 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಕೆ.ಆರ್. ಹರ್ಷಿತಾ ಅವರನ್ನು ಬಳಗದ ಗೌರವ ಸಲಹೆಗಾರರು ಹಾಗೂ ದತ್ತಿ ನಿಧಿ ಸ್ಥಾಪಕ ಟಿ.ಪಿ. ರಮೇಶ್ ಮತ್ತು ಅತಿಥಿ ಗಣ್ಯರು ಸನ್ಮಾನಿಸಿ, ಗೌರವಿಸಿದರು.
ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ 1983 ರಲ್ಲಿ ಸ್ಥಾಪನೆಯಾದ ಬಳಿಕ ಇಲ್ಲಿಯವರೆಗೆ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮೆಚ್ಚುಗೆಯ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಜಿಲ್ಲೆಯಲ್ಲಿ ಪ್ರಥಮವಾಗಿ ಕೊಡಗು ಉತ್ಸವವನ್ನು ಈ ಹಿಂದೆ ಆಯೋಜಿಸಿದ ಕೀರ್ತಿಯೂ ಬಳಗಕ್ಕೆ ಇದೆ ಎಂದು ತಿಳಿಸಿದರು.
ಬಳಗದ ಗೌರವ ಸಲಹೆಗಾರರು ಹಾಗೂ ದತ್ತಿ ನಿಧಿ ಸ್ಥಾಪಕರಾದ ಟಿ.ಪಿ. ರಮೇಶ್ ಮಾತನಾಡಿ, ಪ್ರತಿಭಾವಂತರು ಮತ್ತು ಉದಯೋನ್ಮುಖ ಲೇಖಕರು ಮತ್ತು ಕಲಾವಿದರನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಜವಾಬ್ದಾರಿ ಬಳಗದ್ದೆಂದು ಅಭಿಪ್ರಾಯಿಸಿ, ದ್ವಿತೀಯ ತಲೆಮಾರಿನ ಲೇಖಕರು ಮತ್ತು ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನವನ್ನು ನೀಡುವ ಮೂಲಕ ಬೆಳೆಸಬೇಕೆಂದು ಕರೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಇಂದು ಸನ್ಮಾನಕ್ಕೆ ಪಾತ್ರ ರಾದವರು ಮತ್ತಷ್ಟು ಸಾಧನೆಯನ್ನು ಮಾಡಬೇಕು ಮತ್ತು ಇತರರಿಗೆ ಪ್ರೇರಣೆ ಯಾಗಬೇಕೆಂದು ಕರೆ ನೀಡಿದರು.
ಸನ್ಮಾನಿತರು: ಸಮಾರಂಭದಲ್ಲಿ ಹಂಪಿ ವಿವಿಯಿಂದ ಸಂಶೋಧನೆಗಾಗಿ ಡಾಕ್ಟರೇಟ್ ಪಡೆದ ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತೆ ಪಿ. ರೇವತಿ ರಮೇಶ್, ಹಾಕಿ ಕ್ರೀಡೆಯಲ್ಲಿ ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕøತರಾದ ಸಿ.ಎಂ. ಕರುಂಬಯ್ಯ, ಬಾಲ್ ಬ್ಯಾಡ್ಮಿಂಟನ್‍ನಲ್ಲಿ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕøತರಾದ ಲಾವಣ್ಯ ಧನಪಾಲ್, ಬಾಲ್ ಬ್ಯಾಡ್ಮಿಂಟನ್‍ನಲ್ಲಿ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕøತರಾದ ಪಲ್ಲವಿ ಎಸ್.ಕೆ., ಗುರುಕುಲ ಕಲಾ ಕುಸುಮ ಪ್ರಶಸ್ತಿ ಪುರಸ್ಕøತರಾದ ಗೀತಾ ನಾಯ್ಡು ಟಿ.ಸಿ. ಮತ್ತು 10ನೇ ತರಗತಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ಎಂ.ಎನ್. ವಿಹಾನ್ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ, ಗೌರವಿಸಿದರು.
ಬಹುಮಾನ ವಿಜೇತರು: ದಿ. ಅಬ್ದುಲ್ ಹಫೀಜ್ ಸಾಗರ್ ಜ್ಞಾಪಕಾರ್ಥ ಆಯೋಜಿತ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪೂಜಿತಾ ಜಗದೀಶ್, ದ್ವಿತೀಯ ಬಹುಮಾನವನ್ನು ಸ್ನೇಹ ಎಂ. ಮತ್ತು ತೃತೀಯ ಬಹುಮಾನವನ್ನು ವರೀಷ್ಮಾ ಕೆ.ಎಸ್. ಅವರು ಪಡೆದುಕೊಂಡರು.
ವೇದಿಕೆಯಲ್ಲಿ ಬಳಗದ ಪ್ರಧಾನ ಕಾರ್ಯದರ್ಶಿ ಕಡ್ಲೇರ ತುಳಸಿ ಮೋಹನ್ ಉಪಸ್ಥಿತರಿದ್ದರು. ನಿರ್ದೇಶಕ ಕೆ.ಟಿ. ಬೇಬಿ ಮ್ಯಾಥ್ಯು ಸ್ವಾಗತಿಸಿದರು, ಬಳಗದ ಪದಾಧಿಕಾರಿ ಗಳಾದ ಲತೀಫ್ ಮಾಸ್ಟರ್, ಬಿ.ಎನ್. ಮನು ಶೆಣೈ, ಟಿ.ಜಿ. ಪ್ರೇಂ ಕುಮಾರ್, ವಿಲ್ಫ್ರೆಡ್ ಕ್ರಾಸ್ತಾ, ಸುನೀತ ಪ್ರೀತು ಸನ್ಮಾನಿತರನ್ನು ಪರಿಚಯಿಸಿದರು. ಉಪಾಧ್ಯಕ್ಷ ಎಂ.ಇ. ಮೊಯಿದ್ದೀನ್ ವಂದಿಸಿದರು.