ಕುಶಾಲನಗರ, ಡಿ. 2: ಕುಶಾಲನಗರ ಗಣಪತಿ ರಥೋತ್ಸವಕ್ಕೆ ಕೊರೊನಾ ಸೋಂಕಿನ ಕರಾಳ ಛಾಯೆ ತಗಲುವುದರೊಂದಿಗೆ ಈ ಬಾರಿ ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೂಚನೆ ನೀಡಿದ್ದಾರೆ. ಬುಧವಾರ ಕುಶಾಲನಗರ ಪಟ್ಟಣ ಪಂಚಾಯ್ತಿ ಆವರಣದಲ್ಲಿ ತಾಲೂಕು ತಹಶೀಲ್ದಾರ್ ಉಪಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ದೇವಾಲಯ ಆಡಳಿತ ಮಂಡಳಿ ಪ್ರಮುಖರೊಂದಿಗೆ ರಂಜನ್ ಅವರು ಸಭೆ ನಡೆಸಿ ಚರ್ಚೆ ನಡೆಸಿದರು.

ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿ ರಥೋತ್ಸವ ನಡೆಸುವುದು, ಕೇವಲ 100 ಭಕ್ತಾದಿಗಳಿಗೆ ಸೀಮಿತವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ನಿರ್ಣಯ ಕೈಗೊಳ್ಳಲಾಯಿತು. ರಥ ಎಳೆಯುವುದು, ದೇವಾಲಯದ ಹೊರ ಭಾಗದಲ್ಲಿ ಪೂಜೆ ಸಲ್ಲಿಸುವ ಕಾರ್ಯಗಳಿಗೆ ಈ ಬಾರಿ ಕೋವಿಡ್ ಅಡ್ಡಿಯಾಗಿದ್ದು ದೇವಾಲಯದ ಒಳಭಾಗದಲ್ಲಿ ಪೂಜೆ ಸಲ್ಲಿಸಿ ತೆರಳುವಂತೆ ಶಾಸಕರು ಮನವಿ ಮಾಡಿದ್ದಾರೆ. ಭಕ್ತಾದಿಗಳು ಈ ಸಂಬಂಧ ಎಲ್ಲಾ ರೀತಿಯ ಸಹಕಾರ ನೀಡುವಂತೆ ಅವರು ಕೋರಿದ್ದಾರೆ.