ಗೋಣಿಕೊಪ್ಪಲು, ಡಿ. 1: ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ನಬಾರ್ಡ್ ವತಿಯಿಂದ ನಿರ್ಮಿಸಿರುವ 250 ಮೆಟ್ರಿಕ್ ಟನ್ ಗೋದಾಮನ್ನು ಸಹಕಾರ ಹಾಗೂ ಕೃಷಿ, ಮಾರುಕಟ್ಟೆ ಸಚಿವ ಎಸ್.ಟಿ. ಸೋಮ ಶೇಖರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್ ತಾಲೂಕಿನ ವಿವಿಧ ಭಾಗದಲ್ಲಿ ರೈತರ ಅನುಕೂಲಕ್ಕಾಗಿ ಗ್ರಾಮೀಣ ಗೋದಾಮು ಹಾಗೂ ಕೃಷಿ ಕಣ ನಿರ್ಮಿಸಲು ಸರ್ಕಾರದಿಂದ ಅನುದಾನ ಮಂಜೂರಾತಿಗೆ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮನವಿ ನೀಡಿದೆ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಲಭ್ಯವಿರುವ ಅನುದಾನದಲ್ಲಿ ತಾಲೂಕಿನ ರೈತರ ಅನುಕೂಲಕ್ಕಾಗಿ ಗೋದಾಮು ಹಾಗೂ ಕಣ ನಿರ್ಮಿಸಲು ಅನುದಾನವನ್ನು ನೀಡುವ ಭರವಸೆ ನೀಡಿದರು.

ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗೋದಾಮುಗಳನ್ನು ನಿರ್ಮಿಸಲಾಗಿದೆ. ರೈತರು ತಮ್ಮ ಕೃಷಿ ಉತ್ಪನ್ನಗಳ ಪದಾರ್ಥಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲು ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಯೋಜನ ರೈತರು ಪಡೆಯುವಂತೆ ತಿಳಿಸಿದರು. ಕಂದಾಯ ಸಚಿವರಾದ ಆರ್.ಅಶೋಕ್ ಮಾತನಾಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಅಜ್ಜಿಕುಟ್ಟಿರ ಪ್ರವೀಣ್ ಮಾತನಾಡಿ ಆಡಳಿತ ಮಂಡಳಿಯ ಸರ್ವ ಸದಸ್ಯರ ಒಪ್ಪಿಗೆ ಮೇರೆ ಹುದಿಕೇರಿ, ಅಮ್ಮತ್ತಿ, ಕಾನೂರು, ಕಿರುಗೂರು, ಕುಟ್ಟ, ಗೋಣಿಕೊಪ್ಪ,P Áರ್ಮಾಡು ಹಾಗೂ ಕಾವಾಡಿ ಗ್ರಾಮಗಳಲ್ಲಿ ಗೋದಾಮು ಹಾಗೂ ಕೆಲವು ಕಡೆ ಕೃಷಿ ಕಣಗಳನ್ನು ಮಾಡಲಾಗಿದೆ ಎಂದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಸದಸ್ಯ ಕಿರಣ್ ಕಾರ್ಯಪ್ಪ, ಆರ್.ಎಂ.ಸಿ. ಉಪಾಧ್ಯಕ್ಷೆ ಬೊಳ್ಳಾಜಿರ ಸುಶೀಲ, ನಿರ್ದೇಶಕರಾದ ಮಾಚಂಗಡ ಸುಜಾ ಪೂಣಚ್ಚ, ಗುಮ್ಮಟ್ಟೀರ ಸಿ.ಕಿಲನ್ ಗಣಪತಿ, ಸಿ.ಬಿ. ಸುಬ್ರಮಣಿ, ಆದೇಂಗಡ ವಿನು ಚಂಗಪ್ಪ, ಮಾಚಿಮಂಡ ಸುವೀನ್ ಗಣಪತಿ, ಕಳ್ಳಂಗಡ ಬಾಲಕೃಷ್ಣ, ಕಟ್ಟೇರ ಈಶ್ವರ್, ಕುಂಬಿಯಂಡ ಗಣೇಶ್, ಚಿಲ್ಲಂಡ ಕೆ. ಅಯ್ಯಪ್ಪ, ತೀತಿರ ಊರ್ಮಿಳ, ಕೊಟ್ಟಕುಟ್ಟಂಡ ಎಸ್. ಭೀಮಣಿ, ಸೇರಿದಂತೆ ಮಾಜಿ ಜಿ.ಪಂ. ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಬಿಜೆಪಿ ಮಹಿಳಾ ಮೋರ್ಚ ಮಾಜಿ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಗುಮ್ಮಟ್ಟೀರ ದರ್ಶನ್, ಪೊನ್ನಂಪೇಟೆ ಎಪಿಸಿಎಂಎಸ್ ಅಧ್ಯಕ್ಷ ಮುದ್ದಿಯಡ ಮಂಜು ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.