ಸೋಮವಾರಪೇಟೆ, ಡಿ. 1: ಕೊರೊನಾ ಸೋಂಕು ಪತ್ತೆ ಹಚ್ಚು ವದು ಮತ್ತು ಸೋಂಕಿಗೆ ತುತ್ತಾ ದವರಿಗೆ ಚಿಕಿತ್ಸೆ ನೀಡುವ ಸಂದರ್ಭ ಬಳಸಲಾಗುವ ಪಿ.ಪಿ.ಇ. ಕಿಟ್ ನ್ನು ರಸ್ತೆ ಬದಿಯಲ್ಲಿ ಎಸೆದಿರುವ ಘಟನೆ ಸಮೀಪದ ಗೌಡಳ್ಳಿಯಲ್ಲಿ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌಡಳ್ಳಿ ಗ್ರಾಮದ ಪ್ರೌಢಶಾಲೆಯ ಎದುರು, ರಾಜ್ಯ ಹೆದ್ದಾರಿಯ ಬದಿಯಲ್ಲಿ ಪಿ.ಪಿ.ಇ. ಕಿಟ್, ಗಂಟಲು ದ್ರವ ಸಂಗ್ರಹಿಸುವ ಸಾಧನ, ಕೈ ಗ್ಲೌಸ್ ಸೇರಿದಂತೆ ಇತರ ವಸ್ತುಗಳನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿದೆ.
ಪಿ.ಪಿ.ಇ. ಕಿಟ್ಗಳನ್ನು ಬಳಸಿದ ನಂತರ ಅವುಗಳನ್ನು ವಿಲೇವಾರಿ ಮಾಡುವ ವಿಧಾನವನ್ನು ಆರೋಗ್ಯ ಇಲಾಖೆ ತಿಳಿಸಿದ್ದರೂ ಸಹ, ಬೇಜವಾಬ್ದಾರಿಯಾಗಿ ರಸ್ತೆ ಬದಿಯಲ್ಲಿ ಎಸೆದಿರುವ ಸಿಬ್ಬಂದಿಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಶಿವರಾಮೇಗೌಡ ಬಣದ ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಸೇರಿದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ತೆರವು: ಗೌಡಳ್ಳಿ ಗ್ರಾಮದ ಮುಖ್ಯ ರಸ್ತೆ ಬದಿ ಕೊರೊನಾ ಪರೀಕ್ಷೆಗೆ ಬಳಸಿದ್ದ ಪಿ.ಪಿ.ಇ. ಕಿಟ್ ಹಾಗೂ ಪೈಪ್, ಮಾಸ್ಕ್ ಇತರ ವಸ್ತುಗಳನ್ನು ಎಸೆದ ಬಗ್ಗೆ ಗ್ರಾಮಸ್ಥರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಡಾ. ಇಂಧೂಧರ್ ತಕ್ಷಣ ಸ್ಥಳಕ್ಕೆ ಆಸ್ಪತ್ರೆ ಸಿಬ್ಬಂದಿ ಕಳುಹಿಸಿ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿ ಜಾಗವನ್ನು ಸ್ಯಾನಿಟೈಜ್ ಮಾಡಿಸಿದರು.