ಸೋಮವಾರಪೇಟೆ, ಡಿ.1: ಟಿಂಬರ್ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಸಿಲ್ವರ್ ಮರ ಬಿದ್ದು ಕಾರ್ಮಿಕರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಮಾಲಂಬಿ ಗ್ರಾಮದಲ್ಲಿ ನಡೆದಿದೆ. ಪಟ್ಟಣ ಸಮೀಪದ ಕಾಗಡಿಕಟ್ಟೆ ಗ್ರಾಮ ನಿವಾಸಿ ಮುನಿಸ್ವಾಮಿ ಹಾಗೂ ಸುಲೋಚನ ಅವರುಗಳ ಪುತ್ರ ಮಣಿಕಂಠ (35) ಎಂಬವರೇ ಸಾವನ್ನಪ್ಪಿದವರು. ಮಾಲಂಬಿ ಗ್ರಾಮದ ಭಾಗೀರಥಿ ಅವರ ತೋಟದಲ್ಲಿದ್ದ ಸಿಲ್ವರ್ ಮರಗಳನ್ನು ಸಿಯಾದ್ ಎಂಬವರು ಖರೀದಿಸಿದ್ದು, ಮರಗಳನ್ನು ಕಟಾವು ಮಾಡುವ ಕೆಲಸಕ್ಕೆ ಮಣಿಕಂಠ ತೆರಳಿದ್ದರು.

ಇಂದು ಸಂಜೆ 4 ಗಂಟೆ ಸುಮಾರಿಗೆ ಕೆಲಸ ಮಾಡುತ್ತಿದ್ದ ಸಂದರ್ಭ, ಬೀಳುತ್ತಿದ್ದ ಸಿಲ್ವರ್ ಮರದ ಅಡಿಗೆ ಆಕಸ್ಮಿಕವಾಗಿ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಸಹ ಕಾರ್ಮಿಕರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತ ಮಣಿಕಂಠ ಪತ್ನಿ ಹಾಗೂ ಮಗುವನ್ನು ಅಗಲಿದ್ದು, ಶನಿವಾರಸಂತೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.