ಶ್ರೀಮಂಗಲ, ಡಿ. 1: ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಾಡಗರಕೇರಿಯಲ್ಲಿ ನಬಾರ್ಡ್ ನೆರವಿನಿಂದ ರೂ. 50 ಲಕ್ಷ ವೆಚ್ಚದಲ್ಲಿ ನೂತನ ಗೋದಾಮು ನಿರ್ಮಾಣ ಮಾಡಿ ಸಂಘದ ಸದಸ್ಯರಿಗೆ ರಸಗೊಬ್ಬರ, ಕೃಷಿ ಪರಿಕರ ಹಾಗೂ ಪಡಿತರ ವಿತರಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಂಘದ ಅಧ್ಯಕ್ಷ ನೆಲ್ಲಿರ ಚಲನ್‍ಕುಮಾರ್ ಅವರು ತಿಳಿಸಿದರು.

ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದಿಂದ 15 ಸಾವಿರ ವಂತಿಕೆ ನೀಡಿದರೆ ರೂ. 50 ಸಾವಿರ ಮರಣ ನಿಧಿ ನೀಡುವ ಯೋಜನೆಯನ್ನು ವಿಶೇಷ ಮಹಾಸಭೆ ತೀರ್ಮಾನದಂತೆ 3 ಸಾವಿರ ವಂತಿಕೆ ಪಾವತಿಸಿ ಮೃತಪಟ್ಟ ಸದಸ್ಯರಿಗೆ 30 ಸಾವಿರ ಮರಣ ನಿಧಿ ನೀಡುವಂತೆ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಸಹಕಾರ ಸಂಘದ ನಿಯಮದಂತೆ ಆರ್ಥಿಕ ವರ್ಷದಲ್ಲಿ ಕನಿಷ್ಠ 5 ಸಾವಿರದ ವ್ಯವಹಾರವನ್ನು ಸಂಘದಲ್ಲಿ ಮಾಡಿದ ಸದಸ್ಯರಿಗೆ ಮಾತ್ರ ಮಹಾಸಭೆಯ ಹಾಜರಾತಿ ಭತ್ಯೆ ನೀಡಲಾಗುತ್ತಿದೆ. ಹಾಗೆಯೇ ಸತತ 3 ಮಹಾಸಭೆಗೆ ಗೈರು ಹಾಜರಾದ ಸದಸ್ಯರಿಗೆ ಭತ್ಯೆಯನ್ನು ನೀಡಲಾಗುತ್ತಿಲ್ಲ, ಸಂಘವು ಪ್ರಸಕ್ತ ಸಾಲಿನಲ್ಲಿ 13.02 ರೂ.ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಗುಡ್ಡಮಾಡ ಸುಬ್ರಮಣಿ, ನಿರ್ದೇಶಕರುಗಳಾದ ಅಣ್ಣಳಮಾಡ ಚಿಣ್ಣಪ್ಪ, ಬೊಳ್ಳೆರ ಕೆ.ಪೊನ್ನಪ್ಪ, ಮೀದೇರಿರ ಮಂಜುನಾಥ್, ಬಿ.ಎಂ ಸಂಪತ್, ಎಂ.ಯು. ಸುಶೀಲ, ಅಮ್ಮತ್ತಿರ ರೇವತಿ ಪರಮೇಶ್ವರ, ಎ.ಎನ್. ಪುರುಷೋತ್ತಮ, ಟಿ.ಜಿ. ಶ್ರೀಹರಿ, ಹೆಚ್.ಟಿ. ಆನಂದ, ಜೆ.ಬಿ. ಬಸವ, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಎನ್.ಪಿ. ಭಾರತಿ ಹಾಜರಿದ್ದರು.