ಕುಶಾಲನಗರ, ಡಿ. 1: ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ತೆರಳುವ ತೂಗುಸೇತುವೆ ಶಿಥಿಲಗೊಂಡಿದ್ದು, ಸದ್ಯದಲ್ಲಿಯೇ ನೂತನ ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸುಮಾರು ರೂ. 1.8 ಕೋಟಿ ವೆಚ್ಚದಲ್ಲಿ ಪ್ರಸಕ್ತ ಸೇತುವೆ ಪಕ್ಕದಲ್ಲಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದೆ. ಕಳೆದ 23 ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ಕಳೆದ ಎರಡು ವರ್ಷಗಳಿಂದ ಇಲಾಖೆ ಕ್ರಮಕೈಗೊಂಡಿದ್ದು, ಈ ಹಿನ್ನೆಲೆ ಸದ್ಯದಲ್ಲಿಯೇ ನೂತನ ತೂಗುಸೇತುವೆ ನಿರ್ಮಾಣಗೊಳ್ಳಲಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಜೆ. ಅನನ್ಯಕುಮಾರ್ ತಿಳಿಸಿದ್ದಾರೆ.

ಪ್ರವಾಸಿಗರ ಸಂಖ್ಯೆ ಏರಿಕೆ ಕಂಡ ಹಿನ್ನೆಲೆ ಅಪಾಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನೂತನ ತೂಗುಸೇತುವೆಯ ನಿರ್ಮಾಣಕ್ಕೆ ಇಲಾಖೆಯಲ್ಲಿ ಹಣದ ಕೊರತೆ ಇರುವ ಕಾರಣ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಅನುದಾನ ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಅನನ್ಯಕುಮಾರ್, ನೂತನ ಸೇತುವೆ ಜೊತೆಗೆ ಹಳೆಯ ಸೇತುವೆ ಬಳಕೆ ಕೂಡ ಆಗಲಿದೆ ಎಂದು ವಿವರ ಒದಗಿಸಿದರು. ಸೇತುವೆ ಶಿಥಿಲಗೊಂಡಿರುವ ಬಗ್ಗೆ ಸುಳ್ಯದ ಆಯಶಿಲ್ಪದ ತಜ್ಞ ಭಾರಧ್ವಾಜ್ ಎರಡು ವರ್ಷಗಳ ಹಿಂದೆಯೇ ವರದಿಯನ್ನು ಅರಣ್ಯ ಇಲಾಖೆಗೆ ನೀಡಿದ್ದರು. ದುಬಾರೆ ಸಾಕಾನೆ ಶಿಬಿರಕ್ಕೆ ತೆರಳಲು ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆಯ ನಿರ್ಮಾಣ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಸರಕಾರಕ್ಕೆ ಸಲ್ಲಿಸಲಾಗಿದೆ. ಅಂದಾಜು ರೂ. 4 ಕೋಟಿಗೂ ಹೆಚ್ಚು ವೆಚ್ಚದ ಈ ತೂಗುಸೇತುವೆ ಮೂಲಕ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ತೆರಳುವ ಸಾಧ್ಯತೆ ಇರುವ ಹಿನ್ನೆಲೆ ಈ ಬಗ್ಗೆ ಅರಣ್ಯ ಇಲಾಖೆ ಇನ್ನೂ ಹಸಿರು ನಿಶಾನೆ ತೋರಿಲ್ಲ. ಆನೆಗಳು ತುಂಬಾ ಸೂಕ್ಷ್ಮ ಜೀವಿಗಳಾಗಿದ್ದು, ಶಿಬಿರದಲ್ಲಿ ಪ್ರವಾಸಿಗರ ಒತ್ತಡ ಹೆಚ್ಚಾದಲ್ಲಿ ಅಪಾಯದ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಇನ್ನೂ ತಜ್ಞರ ಅಭಿಪ್ರಾಯ ಕಲೆಹಾಕಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆ ದುಬಾರೆಗೆ ನೀಡುವ ಅನುದಾನದಿಂದ ಕಾವೇರಿ ನಿಸರ್ಗಧಾಮದ ತೂಗುಸೇತುವೆ ನಿರ್ಮಾಣಕ್ಕೆ ಅನುದಾನ ದೊರೆತಲ್ಲಿ ತಕ್ಷಣ ಕೆಲಸ ಪ್ರಾರಂಭಿಸಲು ಸಾಧ್ಯವಿದೆ ಎಂದು ಅನನ್ಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಆಗಮನದ ಸಂಖ್ಯೆ ಏರಿಕೆಯಿದ್ದು ಆದಷ್ಟು ಬೇಗನೆ ನೂತನ ತೂಗುಸೇತುವೆ ಕೆಲಸಕ್ಕೆ ಇಲಾಖೆ ಕಾರ್ಯೋನ್ಮುಖವಾಗಬೇಕಿದೆ ಎಂದು ಸ್ಥಳಿಯ ಉದ್ಯಮಿ ಆರ್.ಎಂ. ಬಷೀರ್ ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

- ಚಂದ್ರಮೋಹನ್