ಪ್ರತಿ ಗ್ರಾ.ಪಂ.ಗೆ ರೂ. 1.5 ಕೋಟಿ ಅನುದಾನ

ರಾಮನಗರ, ಡಿ. 1: ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ ರೂ. 1.5 ಕೋಟಿ ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗದ ವರದಿಯಲ್ಲಿ ನೇರವಾಗಿ ಗ್ರಾಮ ಪಂಚಾಯಿತಿಗಳಿಗೇ ಹೆಚ್ಚು ಅನುದಾನ ನೀಡುವ ಅಂಶಗಳಿವೆ. ಅದರಂತೆ, ಗ್ರಾಮೀಣಾಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ಒದಗಿಸಲಾಗುವುದು. ಜತೆಗೆ, ಆಯಾ ಗ್ರಾಮಗಳ ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಬಿಪಿಎಲ್ ಕುಟುಂಬಕ್ಕೆ ಉಚಿತ ಲಸಿಕೆ

ಬೆಂಗಳೂರು, ಡಿ. 1: ಬಿಪಿಎಲ್ ಕುಟುಂಬಗಳಿಗೆ ಉಚಿತ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ವಿಶ್ವ ಏಡ್ಸ್ ದಿನದ ಅಂಗವಾಗಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮಾತನಾಡಿ, ಭಾರತದಲ್ಲಿ ಕೊರೊನಾ ನಿಯಂತ್ರಣ ಯಶಸ್ವಿಯಾಗಿ ನಡೆಯುತ್ತಿದೆ. ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯಲಾಗುತ್ತಿದ್ದು, ಮೊದಲ ಹಂತದಲ್ಲಿ ಸುಮಾರು 10 ಕೋಟಿ ಜನರಿಗೆ ಇದರ ಪ್ರಯೋಜನ ದೊರೆಯಲಿದೆ.

ಬಿಜೆಪಿಗರ ವಿರುದ್ಧ ವಿಶ್ವನಾಥ್ ಮುನಿಸು

ಬೆಂಗಳೂರು, ಡಿ. 1: ಹುಣಸೂರು ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಸಿ.ಪಿ. ಯೋಗೀಶ್ವರ್ ಹಾಗೂ ಎನ್.ಆರ್. ಸಂತೋಷ್ ಕಾರಣವೆಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶಾಸಕರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದಿಂದ ಚುನಾವಣಾ ಖರ್ಚಿಗಾಗಿ ನೀಡಿದ ದೊಡ್ಡಮಟ್ಟದ ಹಣವನ್ನು ಸಿ.ಪಿ. ಯೋಗೀಶ್ವರ್ ಹಾಗೂ ಎನ್.ಆರ್ ಸಂತೋಷ್ ಲಪಟಾಯಿಸಿದರು. ಉಪ ಚುನಾವಣೆ ಅಭ್ಯರ್ಥಿ ಘೋಷಣೆಗೂ ಮುನ್ನವೇ ತಾನೆ ಅಭ್ಯರ್ಥಿ ಎಂದು ಎಲ್ಲೆಡೆ ಫ್ಲೆಕ್ಸ್, ಬ್ಯಾನರ್ ಹಾಕಿಕೊಂಡು ಪ್ರಚಾರ ಮಾಡಿದರು. ಸೀರೆ, ಕುಕ್ಕರ್ ನೀಡಿದರು. ಮಾಧ್ಯಮಗಳಲ್ಲಿಯೂ ಇದು ಭಾರೀ ಸುದ್ದಿಯಾಗಿತ್ತು. ಹೀಗಾಗಿ ನನ್ನ ಸೋಲಿಗೆ ಇದೂ ಕಾರಣವಾಗಿದೆ. ಅಂತಹವರನ್ನು ಮುಖ್ಯಮಂತ್ರಿಯವರು ಮಂತ್ರಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು.

ದೋಣಿ ದುರಂತ : 2 ಮೃತದೇಹ ಪತ್ತೆ

ಮಂಗಳೂರು, ಡಿ. 1: ಮಂಗಳೂರಿನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಇಂದು ಪತ್ತೆಯಾಗಿದೆ. ಪಾಂಡುರಂಗ ಸುವರ್ಣ (58) ಹಾಗೂ ಚಿಂತನ್ (21) ಎನ್ನುವವರ ಮೃತದೇಹಗಳು ಪತ್ತೆಯಾಗಿದೆ. ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಬೋಳಾರದ ಪ್ರಶಾಂತ ಎಂಬವರ ಮಾಲೀಕತ್ವದ ಶ್ರೀರಕ್ಷಾ ಹೆಸರಿನ ಪರ್ಸಿನ್ ದೋಣಿ ಮಗುಚಿ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದರು. ಶೋಧ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಲಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ತರಲಾಗಿದೆ. ದೋಣಿ ಮುಳುಗುವಾಗ 25 ಮೀನುಗಾರರು ಇದ್ದರು. ಈ ಪೈಕಿ ಆರು ಮಂದಿ ನಾಪತ್ತೆಯಾಗಿದ್ದಾರೆ. ಉಳಿದವರ ರಕ್ಷಣೆ ಮಾಡಲಾಗಿದೆ.

ಪಾಕ್ ದಾಳಿಗೆ ಯೋಧ ಹುತಾತ್ಮ

ಜಮ್ಮು, ಡಿ. 1: ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಇಲ್ಲಿನ ಪೂಂಚ್ ಜಿಲ್ಲೆಯ ಮೇದಾರ್ ಸೆಕ್ಟರ್ ಬಳಿ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಗಡಿ ಭದ್ರತಾ ಸಿಬ್ಬಂದಿಯೋರ್ವರು ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಪಾಕ್ ಸೇನೆಗೆ ಭಾರತೀಯ ಯೋಧರು ಪ್ರತ್ಯುತ್ತರವಾಗಿ ಗುಂಡಿನ ದಾಳಿ ನಡೆಸಿದ್ದು ನಂತರ ಪಾಕ್ ಸೇನೆ ಗುಂಡಿನ ದಾಳಿ ನಿಲ್ಲಿಸಿದೆ.