ಕುಶಾಲನಗರ, ಡಿ 01: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಅಂತರ್‍ಜಿಲ್ಲೆಯ ಚೋರನೊಬ್ಬನನ್ನು ಪತ್ತೆಹಚ್ಚಿ ಬಂಧಿಸಿದ ಸಂದರ್ಭ ಆರೋಪಿ ಆಸ್ಪತ್ರೆಯಿಂದ ಪರಾರಿಯಾಗಿ ಕೆಲವೇ ಗಂಟೆಗಳ ಅವಧಿಯಲ್ಲಿ ಮತ್ತೆ ಬಂಧನವಾದ ಸಿನಿಮೀಯ ರೀತಿಯ ಘಟನೆ ಕುಶಾಲನಗರದಲ್ಲಿ ಮಂಗಳವಾರ ನಡೆಯಿತು.ಕುಶಾಲನಗರ ಅರಣ್ಯ ವಲಯದ ಮೀನುಕೊಲ್ಲಿ ಶಾಖೆಯ ವಾಲ್ನೂರು ತ್ಯಾಗತ್ತೂರಿನ ಕಾಫಿ ತೋಟ ವೊಂದರಿಂದ ಬೀಟೆ ಮರಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಮೈಸೂರು ಜಿಲ್ಲೆಯ ಹುಣಸೂರು ಮೂಲದ ಜುನೈದ್ ಪಾಷಾ (24) ಎಂಬಾತ ಆರೋಪಿಯಾಗಿದ್ದು ವೈದ್ಯಕೀಯ ಪರೀಕ್ಷೆ ಸಂದರ್ಭ ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಪರಾರಿ ಯಾಗಿದ್ದಾನೆ. ಘಟನೆ ನಡೆಯುತ್ತಲೇ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ತಂಡ ಕುಶಾಲನಗರ ಪಟ್ಟಣದ ಎಲ್ಲೆಡೆ ಜಾಲಾಡುವ ಮೂಲಕ ಪತ್ತೆಹಚ್ಚುವಲ್ಲಿ ಯಶಸ್ವಿ ಯಾಗಿದ್ದಾರೆ. ಹುಣಸೂರು ತಾಲೂಕಿನ ಶಿವಜ್ಯೋತಿ ನಗರ ನಿವಾಸಿ ಅಬ್ರಹಾರ್ ಎಂಬವರ ಪುತ್ರ ಜುನೈದ್ ಪಾಷಾ (24) ಕುಶಾಲನಗರ ವಾಲ್ನೂರು ತ್ಯಾಗತ್ತೂರಿನ ತೋಟವೊಂದರಿಂದ ಬೀಟೆ ಮರಗಳನ್ನು ಕಳ್ಳತನ ಮಾಡಿ ಸಾಗಿಸಲು ಯತ್ನಿಸಿದ ಸಂದರ್ಭ ಆರೋಪಿ ಜುನೈದ್ ಪಾಷಾನನ್ನು ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ನೇತೃತ್ವದ ತಂಡ ಮಂಗಳವಾರ ಬೆಳಗ್ಗೆ ಬಂಧಿಸಿತ್ತು. ಪ್ರಕರಣಕ್ಕೆ (ಮೊದಲ ಪುಟದಿಂದ) ಸಂಬಂಧಿಸಿದಂತೆ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ (ಕೆಎ.45.ಎ.2689) ಮತ್ತು ಲಕ್ಷಾಂತರ ಮೌಲ್ಯದ ಬೀಟೆ ಮರದ 9 ನಾಟಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಮುನ್ನ ಆರೋಗ್ಯ ತಪಾಸಣೆ ನಡೆಸಿ ಕೋವಿಡ್ ತಪಾಸಣೆಗೆಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಮಹಡಿಗೆ ಕರೆತರಲಾಗಿತ್ತು. ಈ ಸಂದರ್ಭ ಆರೋಪಿ ಜುನೈದ್ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಆಲ್ಬರ್ಟ್ ಡಿಸೋಜ ಮತ್ತು ದುರ್ಗೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಯ ಮೊದಲನೆ ಮಹಡಿಯಿಂದ ಜಿಗಿದು ತಪ್ಪಿಸಿ ಕೊಂಡಿದ್ದ ಎಂದು ಅರಣ್ಯಾಧಿಕಾರಿ ಜೆ. ಅನನ್ಯಕುಮಾರ್ ತಿಳಿಸಿದ್ದಾರೆ.

ಘಟನೆಯಿಂದ ದಿಗ್ಬ್ರಮೆಗೊಂಡ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಪತ್ತೆ ಕಾರ್ಯ ಕೈಗೊಂಡರೂ ಆರೋಪಿ ಪತ್ತೆಯಾಗದೆ ತಕ್ಷಣ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಬಗ್ಗೆ ದೂರು ದಾಖಲಿಸಲಾಯಿತು. ನಂತರ ಇಲಾಖೆ ಸಿಬ್ಬಂದಿಗಳು ಕುಶಾಲನಗರ, ಕೊಪ್ಪ ಗಡಿಭಾಗದಲ್ಲಿ ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿಯ ವಿವೇಕಾನಂದ ಬಡಾವಣೆ ಬಳಿಯ ನದಿ ತಟದಲ್ಲಿ ಆರೋಪಿ ಪಾಷಾ ಪತ್ತೆಯಾಗಿದ್ದಾನೆ. ಈ ಸಂದರ್ಭ ನದಿಗೆ ಹಾರಿದ ಆರೋಪಿ ಪಾಷಾ ಈಜಿಕೊಂಡು ದಾಟಲು ಯತ್ನಿಸಿದ್ದು ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿಗಳು ಆತನನ್ನು ಶರಣಾಗುವಂತೆ ಎಚ್ಚರಿಕೆ ನೀಡಿದರೂ ಸ್ಪಂದಿಸದೆ ಮತ್ತೆ ಪರಾರಿಯಾಗಲು ಯತ್ನಿಸಿದ. ಈ ಸಂದರ್ಭ ಸಿಬ್ಬಂದಿಗಳು ನದಿಗೆ ಹಾರಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆ ತನಕ ನಡೆದ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಹುಣಸೂರು ಶಿವಜ್ಯೋತಿನಗರದ ಜುನೈದ್ ಪಾಷಾ ಲಾರಿಯೊಂದರಲ್ಲಿ (ಕೆಎ.45.ಎ.2689) ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಡಿಕೇರಿ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಕುಶಾಲನಗರ ಅರಣ್ಯ ವಲಯಾಧಿಕಾರಿ ಜೆ. ಅನನ್ಯಕುಮಾರ್, ಉಪ ವಲಯ ಅರಣ್ಯಾಧಿಕಾರಿ ಕೆ.ಎಸ್. ಸುಬ್ರಾಯ ನೇತೃತ್ವದ ತಂಡ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳುವುದರೊಂದಿಗೆ ಆರೋಪಿ ಪಾಷನನ್ನು ಬಂಧಿಸಿ ಕುಶಾಲನಗರ ಅರಣ್ಯ ಕಚೇರಿಯಲ್ಲಿ ಮಹಜರು ನಡೆಸಿ ನಂತರ ಮುಂದಿನ ಕ್ರಮಕೈಗೊಳ್ಳುವ ಸಂದರ್ಭ ಈ ಘಟನೆ ಸಂಭವಿಸಿದೆ.

ಉಳಿದಂತೆ ಕೆಲವು ಆರೋಪಿಗಳು ಸ್ಥಳದಿಂದ ನಾಪತ್ತೆಯಾಗಿದ್ದು ಇವರುಗಳ ಪತ್ತೆಗೆ ಇಲಾಖಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ನಂಜರಾಯಪಟ್ಟಣ ವಾಲ್ನೂರು ತ್ಯಾಗತ್ತೂರು ವ್ಯಾಪ್ತಿಯ ಕಾಫಿ ತೋಟಗಳಿಂದ ರಾತ್ರಿ ವೇಳೆ ಭಾರೀ ಪ್ರಮಾಣದ ಬೆಲೆಬಾಳುವ ಬೀಟೆ, ತೇಗದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಕಂಡುಬರುತ್ತಿದ್ದು ಇದರಲ್ಲಿ ನೆರೆಯ ಮೈಸೂರು ಜಿಲ್ಲೆಯ ಕುಖ್ಯಾತ ಕಳ್ಳರು ಮತ್ತು ಸ್ಥಳೀಯ ಕೆಲವರು ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಹೊರಬಿದ್ದಿವೆ.

ಇತ್ತೀಚೆಗಷ್ಟೇ ಕೊಡಗರಹಳ್ಳಿ ಬಳಿ ಭಾರೀ ಮೌಲ್ಯದ ಮರಗಳನ್ನು ಕಳವು ಮಾಡುತ್ತಿದ್ದ ಸಂದರ್ಭ ತೋಟದ ಮಾಲೀಕರು ವಾಹನಗಳ ಟಯರ್‍ಗೆ ಗುಂಡು ಹೊಡೆದು ನಂತರ ಕುಶಾಲನಗರದ ಪ್ರಮುಖ ಮರಗಳ್ಳ ನೊಬ್ಬನನ್ನು ಸೇರಿದಂತೆ ಹಲವರನ್ನು ಬಂಧಿಸಿರುವ ಘಟನೆ ಹಸಿರಾಗಿರು ವಾಗಲೇ ಈ ಘಟನೆ ಸಂಭವಿಸಿದೆ.

ಕಾರ್ಯಾಚರಣೆಯಲ್ಲಿ ಅಧಿಕಾರಿಗಳೊಂದಿಗೆ ಸಿಬ್ಬಂದಿಗಳಾದ ಚರಣ್ ಕುಮಾರ್, ಆಲ್ಬರ್ಟ್ ಡಿಸೋಜ, ವಾಚರ್‍ಗಳಾದ ವಾಸು, ಚಾಲಕ ಲೋಕೇಶ್, ಆರ್‍ಆರ್‍ಟಿ ತಂಡದ ಅಪ್ಪಸ್ವಾಮಿ ಮತ್ತಿತರರು ತೊಡಗಿಸಿಕೊಂಡಿದ್ದರು.