ಗೋಣಿಕೊಪ್ಪಲು, ನ. 28: ಭಾರತೀಯ ಜನತಾ ಪಾರ್ಟಿ ನಾಯಕರನ್ನು ತಯಾರು ಮಾಡುವ ಕಾರ್ಖಾನೆಯಾಗಿದ್ದು ಬಿಜೆಪಿ ಪಕ್ಷ ಉದಯಗೊಂಡ ದಿನದಿಂದಲೂ ಅಭ್ಯಾಸವರ್ಗ ಕಾರ್ಯಕ್ರಮಗಳು ನಡೆಯುತ್ತಲೇ ಬಂದಿದೆ. ಅಭ್ಯಾಸ ವರ್ಗವು ಕಾರ್ಯಕರ್ತರಿಗೆ ನವೀಕರಣ ಇದ್ದ ಹಾಗೇ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ಬಿಜೆಪಿ ಮಂಡಲ ವತಿಯಿಂದ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವರ್ಷಕ್ಕೊಮ್ಮೆ ಪಕ್ಷದ ಶಿಸ್ತು ಬದ್ಧತೆಯನ್ನು ಮತ್ತೊಮ್ಮೆ ಅವಲೋಕಿಸುವುದು, ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಆಗಿದೆ. ಅಂದಿನ ಕಾಲಘಟ್ಟದಲ್ಲಿ ಪಕ್ಷವನ್ನು ಕಟ್ಟಲು ಹಿರಿಯರು ಶ್ರಮ ವಹಿಸಿದ್ದರು.
ಹಿರಿಯರ ಮಾರ್ಗದರ್ಶನದಿಂದ ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಪಕ್ಷವು ಅಧಿಕಾರದಲ್ಲಿದೆ. ಪಕ್ಷದಲ್ಲಿ ಗುರುತಿಸಿಕೊಂಡು ಶಿಸ್ತುಬದ್ದವಾಗಿ ನಡೆದುಕೊಂಡವರನ್ನು ಬಿಜೆಪಿ ಪಕ್ಷವು ಗುರುತಿಸಿ ಉತ್ತಮ ಸ್ಥಾನಗಳನ್ನು ನೀಡುತ್ತ ಬಂದಿದೆ. ಅಭ್ಯಾಸ ವರ್ಗದಲ್ಲಿ ಪಾಲ್ಗೊಂಡ ಪಕ್ಷದ ಕಾರ್ಯಕರ್ತರು ಉತ್ತಮ ಸ್ಥಾನಗಳನ್ನು ಪಡೆಯಬೇಕು ಈ ದೇಶದ ಪ್ರಧಾನಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಮುಸ್ಲಿಂ ಜನಾಂಗದವರೂ ಬಿಜೆಪಿಯ ಕೆಲಸಗಳನ್ನು ಗಮನಿಸಿ ಚುನಾವಣೆಯಲ್ಲಿ ಮತ ನೀಡುತ್ತಿದ್ದಾರೆ ಎಂದು ತಿಳಿಸಿದರು.
ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಎರಡು ದಿನಗಳ ಕಾಲ ನಡೆದ ಪ್ರಶಿಕ್ಷಣ ವರ್ಗದ ಅಭ್ಯಾಸ ಕಾರ್ಯಕ್ರಮದಲ್ಲಿ ಹತ್ತು ವಿವಿಧ ವಿಷಯಗಳಲ್ಲಿ ಅನುಭವಿಗಳು ವಿಚಾರಧಾರೆಯನ್ನು ನೀಡಿದ್ದಾರೆ. ಇದನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಪಕ್ಷ ಸಂಘಟನೆ ಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಪಕ್ಷದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞಂಗಡ ಅರುಣ್ ಭೀಮಯ್ಯ ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್ ಸ್ವಾಗತಿಸಿ, ಕಾರ್ಯದರ್ಶಿ ವಾಟೇರಿರ ಬೋಪಣ್ಣ ನಿರೂಪಿಸಿದರು.
ತಾಲೂಕು ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಳ್ಳಿಮಾಡ ಶಿಲ್ಪಾ ಪ್ರಾರ್ಥಿಸಿದರು. ಜಿಲ್ಲಾ ಖಜಾಂಚಿ ಚೆಪ್ಪುಡೀರ ಮಾಚಯ್ಯ, ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೋಡುಮಾಡ ಶರಿನ್ ಸುಬ್ಬಯ್ಯ, ಜಿಲ್ಲಾ ವಕ್ತಾರ ಮಾಚಿಮಂಡ ಸುವಿನ್ ಗಣಪತಿ, ತಾಲೂಕು ವಕ್ತಾರ ಕುಟ್ಟಂಡ ಅಜಿತ್ ಕರುಂಬಯ್ಯ, ಸೇರಿದಂತೆ ಕಾರ್ಯಕ್ರಮದಲ್ಲಿ ವೀರಾಜಪೇಟೆ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಪಕ್ಷದ ಆಯ್ದ ಪ್ರಮುಖರು ಪಾಲ್ಗೊಂಡಿದ್ದರು.