ಮಡಿಕೇರಿ, ನ. 28: ಕರ್ನಾಟಕ ರಕ್ಷಣಾ ವೇದಿಕೆ, ಕೊಡಗು ಬ್ಲಡ್ ಡೋನರ್ಸ್ ಹಾಗೂ ಆಟೋ ಚಾಲಕರ ಮಾಲೀಕರ ಸಂಘಗಳ ಸಹಯೋಗದೊಂದಿಗೆ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೆಲ್ಲಿಹುದಿಕೇರಿಯ ಶಾದಿ ಮಹಲ್ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಉದ್ಘಾಟನೆಯ ನಂತರ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧಿಕಾರಿ ಕರುಂಬಯ್ಯ ಅವರು ರಕ್ತದಾನದ ಮಹತ್ವದ ಕುರಿತು ಮಾತನಾಡುತ್ತಾ, ರಕ್ತದಾನ ಮತ್ತೊಬ್ಬರ ಜೀವಕ್ಕೆ ನೆರವಾಗುವ ಮಹಾತ್ಕಾರ್ಯ, ಸ್ವ ಇಚ್ಛೆಯಿಂದ ನೀಡುವ ರಕ್ತದಾನದ ಕುರಿತಾಗಿ ರಕ್ತ ದಾನಿಗಳಲ್ಲಿ ಹಲವಾರು ಮೂಢನಂಬಿಕೆಗಳಿದ್ದು, ರಕ್ತ ನೀಡಿದಲ್ಲಿ ದೈಹಿಕ ಸಾಮಥ್ರ್ಯ ಕುಂಠಿತವಾಗುತ್ತದೆ ಅಥವಾ ದೇಹದಲ್ಲಿನ ರಕ್ತದ ಪ್ರಮಾಣ ಕುಸಿತಗೊಳ್ಳುತ್ತದೆ ಎನ್ನುವಂತಹ ಉಹಾಪೆÇೀಹಗಳು ಇದ್ದು ಇಂತಹ ತಪ್ಪು ಮಾಹಿತಿಗಳಿಗೆ ಜನರು ಕಿವಿಗೊಡಬಾರದು ಎಂದರು.

ಕ.ರ.ವೇ.ಯ ಅನಿಲ್ ಮಾತನಾಡಿ ಇದು ನಮ್ಮ ಐದನೇ ವರ್ಷದ ಶಿಬಿರ. ಇನ್ನೂ ಕೂಡ ಇಂತಹ ಶಿಬಿರಗಳ ಆಯೋಜನೆ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಸಮಾಜ ಸೇವಕ ಸೆಬಾಸ್ಟಿನ್ ಅವರಿಗೆ ಅವರ ಸೇವಾ ಕಾರ್ಯಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿ ರಕ್ತಕ್ಕೆ ಯಾವುದೇ ಜಾತಿ, ಧರ್ಮ ಎನ್ನುವುದು ಇಲ್ಲ. ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ರಕ್ತದಾನಕ್ಕೆ ಮುಂದಾಗಬೇಕೆಂದರು.

ಸನ್ಮಾನ ಸ್ವೀಕರಿಸಿದ ಮತ್ತೋರ್ವ ರಕ್ತದಾನಿಗಳಾದ, ಸತತ ಮೂವತ್ತು ಬಾರಿ ರಕ್ತದಾನ ಮಾಡಿದ ದಾಖಲೆಯನ್ನು ಹೊಂದಿರುವ ಖಲೀಲ್ ಇನ್ನು ಮುಂದಿನ ದಿನಗಳಲ್ಲಿ ರಕ್ತ ನೀಡುವವರು ಯಾವುದೇ ಭಯ ಪಡಬೇಕಿಲ್ಲ, ನಾವು ಕೊಟ್ಟ ರಕ್ತ ಕೆಲವೇ ಸಮಯದಲ್ಲಿ ನಮ್ಮ ದೇಹದಲ್ಲಿ ಮರು ಉತ್ಪತ್ತಿಯಾಗುತ್ತದೆ ಎಂದರು.

ರಕ್ತದಾನದ ಸಲುವಾಗಿ ಸ್ಥಳೀಯ ರಕ್ತದಾನಿಗಳು ಸ್ವಯಂಪ್ರೇರಿತರಾಗಿ ಬಹಳ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂತು. ಶಿಬಿರದಲ್ಲಿ 50 ಯೂನಿಟ್ ರಕ್ತ ಸಂಗ್ರಹವಾಯಿತು.

ವೇದಿಕೆಯಲ್ಲಿ ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ವಿನು, ಕ.ರ.ವೇ ಸಿದ್ದಾಪುರ ಹೋಬಳಿ ಅಧ್ಯಕ್ಷ ಸಂತೋಷ್, ಕ.ರ.ವೇ ಮಹಿಳಾ ಘಟಕದ ಆದ್ಯಕ್ಷೆ ವಿನೋದಿನಿ, ಕ.ರ.ವೇ ಪ್ರಧಾನ ಕಾರ್ಯದರ್ಶಿ ಬಾವ ಮಾಲ್ದಾರೆ, ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಸಲೀಂ, ಕೊಡಗು ಬ್ಲಡ್ ಡೋನರ್ಸ್ ಕಾರ್ಯದರ್ಶಿ ಮೈಕಲ್ ವೇಗಸ್, ಸುಕುಮಾರ, ಜಾಫರ್ ಹಾಗೂ ಮತ್ತಿತರರು ಹಾಜರಿದ್ದರು.