ಮಡಿಕೇರಿ, ನ. 25: ಮಡಿಕೇರಿ ನಗರದ ಕಸ-ತ್ಯಾಜ್ಯ ವಿಲೇವಾರಿ ಜಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪರ್ಯಾಯ ಜಾಗ ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಗರಸಭೆಗೆ ರಾಜ್ಯ ಉಚ್ಚ ನ್ಯಾಯಾಲಯ ಸೂಚಿಸಿದೆ.ಮಡಿಕೇರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಂಗ್ರಹವಾಗುವ ಕಸ-ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದೆ ಸ್ಟೋನ್ ಹಿಲ್ ಬಳಿ ಕಸದ ರಾಶಿಯಿಂದಾಗಿ ಆಸು-ಪಾಸಿನ ಜನವಸತಿ ಪ್ರದೇಶಗಳಿಗೆ ಸಮಸ್ಯೆ ಯುಂಟಾಗುತ್ತಿದೆ. ಈ ಹಿನ್ನೆಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಬ್ರಹ್ಮಣ್ಯನಗರ, ರೈಫಲ್ರೇಂಜ್, ವಿದ್ಯಾನಗರ, ಕನ್ನಿಕಾ ಬಡಾವಣೆ ನಿವಾಸಿಗಳು ‘ಎಸ್ಆರ್ವಿಕೆ’ ಹೆಸರಿನಲ್ಲಿ ಸಂಘ ರಚಿಸಿಕೊಂಡು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ನಗರಸಭೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿತ್ತು. ಆದರೆ, ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯ ಕೆಲವೊಂದು ಸುಳ್ಳು ಮಾಹಿತಿ ನೀಡಿ ನುಣುಚಿಕೊಳ್ಳುವ ಪ್ರಯತ್ನ ಮಾಡಿತ್ತು. ಈ ನಿಟ್ಟಿನಲ್ಲಿ ನ್ಯಾಯಾಲಯ ತಾ. 25ಕ್ಕೆ ವಿಚಾರಣೆ ಮುಂದೂಡಿತ್ತು.
ಇಂದು ಪ್ರಕರಣ ನ್ಯಾಯಾಲಯದ ವಿಚಾರಣೆಗೆ ಬಂದಿದೆ. ಈ ಸಂದರ್ಭದಲ್ಲಿ ನಗರಸಭೆ ಪರ ವಕೀಲರಾದ ಅನುಸೂಯದೇವಿ ಅವರು, ನಗರಸಭೆ ಆಯುಕ್ತರು ಹಾಗೂ ತಹಶೀಲ್ದಾರರು ಎರಡನೇ ಮೊಣ್ಣಂಗೇರಿ ಎಂಬಲ್ಲಿ ಸ.ನಂ. 20ರಲ್ಲಿ ಜಾಗ ಗುರುತಿಸಿದ್ದಾರೆ. ಈ ಜಾಗ ಅಥವಾ ಪರ್ಯಾಯ ಜಾಗ ಸರಕಾರದಿಂದ ಒದಗಿಸಿಕೊಡಬೇಕಿದೆ ಎಂದು ಉತ್ತರಿಸಿದ್ದಾರೆ. ಎಸ್ಆರ್ವಿಕೆ ಸಂಘದ ಪರ ವಕೀಲರಾದ ಅನುಚೆಂಗಪ್ಪ ಅವರು, ನಗರಸಭೆಯಿಂದ ಜಾಗಕ್ಕಾಗಿ ತಹಶೀಲ್ದಾರರಿಗೆ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. (ಮೊದಲ ಪುಟದಿಂದ) ಜಾಗ ಸರಕಾರದ್ದಾಗಿರುವುದರಿಂದ ಜಿಲ್ಲಾಧಿಕಾರಿಗಳ ಮೂಲಕ ನೋಟಿಫೈ ಆಗಬೇಕಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಾಗಿದೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ಸರಕಾರದ ಪರ ವಕೀಲರಾದ ಹೆಚ್. ವಿಜಯಕುಮಾರ್ ಅವರೂ ಕೂಡ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಹಾಗಾದರೆ ಪರಿಗಣಿಸಬಹುದಾಗಿದೆ ಎಂದು ಗಮನಕ್ಕೆ ತಂದರು.
ಎಲ್ಲರ ಅಂಶಗಳನ್ನು ಆಲಿಸಿದ ಹಿರಿಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಜುಕ ಅವರು, ಜಾಗ ಮಂಜೂರು ಮಾಡಿಕೊಡುವಂತೆ ಸರಕಾರಕ್ಕೆ ಸೂಕ್ತ ರೀತಿಯಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ನಗರಸಭೆಗೆ ಸೂಚನೆ ನೀಡಿದರು. ಅಲ್ಲದೆ ಈ ಸಂಬಂಧಿತ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಮುಂದೂಡಿದರು.