ಕುಶಾಲನಗರ, ನ. 24: ಕುಶಾಲನಗರ ರಾಧಾಕೃಷ್ಣ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಸಂದರ್ಭ ಕೆಲಸಕ್ಕೆ ತಂದಿದ್ದ ಯಂತ್ರೋಪಕರಣಗಳು ರಸ್ತೆ ಮಧ್ಯೆ ಬಿಟ್ಟು ಹೋಗಿದ್ದು, ವಾಹನ ಸಂಚಾರ ವ್ಯವಸ್ಥೆಗೆ ತೊಡಕುಂಟಾಗಿದೆ ಎಂದು ಸ್ಥಳೀಯ ವಾಹನ ಸವಾರರು ದೂರಿದ್ದಾರೆ.

ಕಳೆದ ತಿಂಗಳ ಹಿಂದೆ ರಸ್ತೆಗೆ ಕಾಂಕ್ರಿಟ್ ಕಾಮಗಾರಿ ನಡೆದಿದ್ದು, ಗುತ್ತಿಗೆದಾರರು ಕೆಲವು ಸಾಮಗ್ರಿಗಳನ್ನು ರಸ್ತೆ ಮಧ್ಯೆ ನಿಲ್ಲಿಸಿರುವುದು ಈ ಆವಾಂತರಕ್ಕೆ ಕಾರಣವಾಗಿದೆ. ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪ ವ್ಯಕ್ತಪಡಿಸಿರುವ ಸ್ಥಳೀಯ ನಾಗರಿಕರು ಕಾಂಕ್ರಿಟ್ ರಸ್ತೆಗೆ ಸರಿಯಾಗಿ ಕ್ಯೂರಿಂಗ್ ವ್ಯವಸ್ಥೆ ಕೂಡ ಕಲ್ಪಿಸಿಲ್ಲ. ಸ್ಥಳೀಯ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ತಿಳಿಸಿದ್ದಾರೆ.

ಹಳೆಯ ರಸ್ತೆಯಲ್ಲಿ ದೊರಕಿರುವ ಕಲ್ಲು ಚಪ್ಪಡಿಗಳನ್ನು ರಸ್ತೆ ಬದಿಯಲ್ಲಿ ರಾಶಿ ಹಾಕಿದ್ದು ಇದರಿಂದ ಅಪಾಯದ ಸಾಧ್ಯತೆಯಿದೆ. ಅಲ್ಲದೆ ಚರಂಡಿಯಲ್ಲಿ ಕಲುಷಿತ ನೀರು ತುಂಬಿದ್ದು ಈ ಬಗ್ಗೆ ಕೂಡಲೇ ಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಅರವಿಂದ್ ಮತ್ತಿತರರು ಪತ್ರಿಕೆ ಮೂಲಕ ಕೋರಿದ್ದಾರೆ.