ಮಡಿಕೇರಿ, ನ. 24: ಅರಣ್ಯ ಇಲಾಖೆಯಲ್ಲಿನ ಉತ್ತಮ ಕಾರ್ಯನಿರ್ವಹಣೆಗೆಗಾಗಿ ಜಿಲ್ಲೆಯ ಮೂವರು ಅಧಿಕಾರಿಗಳಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭ್ಯವಾಗಿದೆ. ಈ ಮೂವರ ಪೈಕಿ ಇಬ್ಬರು ಮೂಲತಃ ಕೊಡಗಿನವರೇ ಆಗಿದ್ದಾರೆ. ವೀರಾಜಪೇಟೆ ವಲಯದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿರುವ ಕಳ್ಳೀರ ಎಂ. ದೇವಯ್ಯ, ದುಬಾರೆ ಆನೆ ಶಿಬಿರದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಕನ್ನಂಡ ಪಿ. ರಂಜನ್ ಹಾಗೂ ಪೊನ್ನಂಪೇಟೆಯಲ್ಲಿ ಗಾರ್ಡ್ ಆಗಿರುವ ಜಿಡ್ಡಿಮನಿ ಅವರುಗಳು ಪ್ರಶಸ್ತಿಗೆ ಭಾಜನರಾಗಿದ್ದು, ನಿನ್ನೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಂಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ದೇವಯ್ಯ ಅವರು ಮೂಲತಃ ಬೆಳ್ಳುಮಾಡುವಿನವರಾಗಿದ್ದು, ಕಳ್ಳೀರ ಎ. ಮೇದಪ್ಪ ಹಾಗೂ ಪೊನ್ನಮ್ಮ ದಂಪತಿಯ ಪುತ್ರರಾಗಿದ್ದಾರೆ. ಇವರಿಗೆ ಈ ಹಿಂದೆ ಬಿ. ಮಾರಪ್ಪ ಪ್ರಶಸ್ತಿ, ಬೆಸ್ಟ್ ವೈಲ್ಡ್ ಲೈಫ್ ಪ್ರೊಟೆಕ್ಷನ್ ಪ್ರಶಸ್ತಿ, ಜಿಲ್ಲಾಡಳಿತದಿಂದ ಸರ್ವೋತ್ತಮ ಸೇವಾ ಪ್ರಶಸ್ತಿಯೂ ಸೇರಿದಂತೆ ರೋಟರಿಯಿಂದಲೂ ಪ್ರಶಸ್ತಿ ಗಳಿಸಿದ್ದರು.

ಕನ್ನಂಡ ಪೂಣಚ್ಚ ಹಾಗೂ ದೇವಕಿ ದಂಪತಿಯ ಪುತ್ರ ರಂಜನ್ ಅವರೂ ಈ ಹಿಂದೆ ಬಿ. ಮಾದಪ್ಪ ಪ್ರಶಸ್ತಿ ಪಡೆದಿದ್ದರು. ಜಿಡ್ಡಿಮಾನಿ ಅವರಿಗೂ ಬಿ. ಮಾರಪ್ಪ ಪ್ರಶಸ್ತಿ ಲಭ್ಯವಾಗಿತ್ತು. ಇದೀಗ ಈ ಮೂವರಿಗೂ ಮುಖ್ಯಮಂತ್ರಿಗಳ ಪದಕ ನೀಡಲಾಗಿದೆ.