ಮಡಿಕೇರಿ, ನ. 23: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ನಿರ್ಮಿಸಲಾದ ಪುನರ್ವಸತಿ ಕೇಂದ್ರಗಳ ಪೈಕಿ ಮಾದಾಪುರ ಬಳಿಯ ಜಂಬೂರು ಬಾಣೆಯಲ್ಲಿ ನಿರ್ಮಾಣವಾದ ವಸತಿಗಳು ಹೊರನೋಟ ಅತ್ಯಂತ ಸುಂದರವಾಗಿ ಕಾಣುತ್ತವೆ. ಏಕರೂಪತೆಯಿಂದ ನಿರ್ಮಾಣವಾಗಿರುವ ಮನೆಗಳು, ಸಂಚಾರಕ್ಕೆ ರಸ್ತೆಗಳು, ವಿದ್ಯುತ್ ದೀಪಗಳು ಗಮನ ಸೆಳೆಯುತ್ತವೆ. ಆದರೆ ಒಳಹೊಕ್ಕು ನೋಡಿದಾಗ ಹಲವಾರು ಸಮಸ್ಯೆಗಳು ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಅಪೂರ್ಣಗೊಂಡ ಚರಂಡಿ ಕಾಮಗಾರಿ ಹಾಗೂ ಹಸಿ ಕಸ ವಿಲೇವಾರಿ ಸಮಸ್ಯೆಯಿಂದ ಇಲ್ಲಿನ ಹಲವು ಮನೆಗಳ ನಿವಾಸಿಗಳಿಗೆ ರೋಗದ ಭೀತಿ ಕಾಡುತ್ತಿದೆ. ಪ್ರಸ್ತುತ ಸರಕಾರದಿಂದ ನಿರ್ಮಾಣಗೊಂಡಿರುವ 383 ಮನೆಗಳು ಫಲಾನುಭವಿಗಳಿಗೆ ಹಸ್ತಾಂತರವಾಗಿದೆ. ಮನೆಗಳ 12 ಸಾಲುಗಳಿದ್ದು ಪ್ರತಿ ಸಾಲಿನ ಕೊನೆಯಲ್ಲಿರುವ 2 ರಿಂದ 3 ಮನೆಗಳ ಮುಂಭಾಗದ ಚರಂಡಿಯಲ್ಲಿ ವಾಸನೆ ಬೀರುವ ತ್ಯಾಜ್ಯ ನಿಂತು ರೋಗದ ಭೀತಿ ಎದುರಾಗಿದೆ. ಎಲ್ಲಾ ಮನೆಗಳ ತ್ಯಾಜ್ಯ ಸಮರ್ಪಕವಾಗಿ ಚರಂಡಿ ಸೇರುತ್ತಿದೆಯಾದರೂ ಅಲ್ಪ ಇಳಿಜಾರಿನಲ್ಲಿರುವ ಪ್ರತೀ ಸಾಲಿನ ಕೊನೆ 2 ಮನೆಗಳ ಮುಂಭಾಗದ ಚರಂಡಿಯಲ್ಲಿ ಮಾತ್ರ ತ್ಯಾಜ್ಯ ನಿಂತು ಗಬ್ಬು ನಾರುತ್ತಿದೆ. ಅಪೂರ್ಣ ಚರಂಡಿ ಕಾಮಗಾರಿಯಿಂದ ತ್ಯಾಜ್ಯವು ತುಂಬಿಕೊಂಡಿದೆ. ಹಲವು ಬಾರಿ ಮಾದಾಪುರ ಗ್ರಾ.ಪಂ. ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುವ ಭರವಸೆ ಕೂಡ ನೀಡುತ್ತಿಲ್ಲ. ಆದ್ದರಿಂದ ಸ್ಥಳಕ್ಕೆ ತೆರಳಿದ ಪತ್ರಿಕೆಯೊಂದಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡ ಸ್ಥಳೀಯರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.

ಹಸಿ ಕಸ ಸಾರುತ್ತಿರುವ ಗಬ್ಬುನಾತ

ಚರಂಡಿ ಸಮಸ್ಯೆ ಒಂದೆಡೆಯಾದರೆ ಹಸಿ ಕಸ ಸಮರ್ಪಕವಾಗಿ ವಿಲೇವಾರಿಯಾಗದೆ ಕೆಲ ಮನೆಗಳ ನಿವಾಸಿಗಳು ಕಸದ ಕೊಂಪೆಯಿಂದ ಬರುವ ದುರ್ವಾಸನೆಯ ಗಾಳಿಯನ್ನೇ ಸೇವಿಸುವಂತಾಗಿದೆ. ಜಂಬೂರು ನಿವಾಸಿಗಳ ಮನೆಯಲ್ಲಿ ಸೃಷ್ಟಿಯಾಗುವ ಒಣ ಕಸವನ್ನು ಮಾದಾಪುರ ಗ್ರಾ.ಪಂ. ವತಿಯಿಂದ ಟ್ರ್ಯಾಕ್ಟರ್ ಮುಖಾಂತರ ಸಮೀಪದ ಕಸ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಹಸಿ ಕಸವನ್ನು ಜಂಬೂರು ಬಾಣೆಯಲ್ಲಿಯೇ ಒಂದು ಬದಿಯಲ್ಲಿ ಗುಂಡಿಯನ್ನು ಅಗೆದು ಅಲ್ಲಿಯೇ ವಿಲೇವಾರಿ ಮಾಡುವಂತೆ ಸ್ಥಳೀಯರಿಗೆ ಗ್ರಾ.ಪಂ.ನಿಂದ ಸೂಚನೆ ದೊರೆತಿದೆ. ಗುಂಡಿ ಅಸಮರ್ಪಕವಾದ ಕಾರಣ ವಿಲೇವಾರಿ ಮಾಡಲಾದ ತ್ಯಾಜ್ಯವನ್ನು ಬಹಳ ಸುಲಭವಾಗಿ ನಾಯಿಗಳು ಎಳೆದು ಹಾಕುತ್ತಿವೆ. ಇದರಿಂದ ಸುತ್ತಮುತ್ತ ಕಸದ ರಾಶಿ ಸೃಷ್ಟಿಯಾಗಿದೆ. ಕೆಲ ಮನೆಗಳ ಮುಂದೆಯೂ ಕಸದ ರಾಶಿಯನ್ನು ನಾಯಿಗಳು ಎಳೆದು ತಂದು ಹಾಕಿ ಹೋಗುತ್ತವೆ. ತಕ್ಷಣವೇ ಪಂಚಾಯಿತಿ ಇತ್ತ ಗಮನಿಸಿ ಚರಂಡಿ ಕಾಮಗಾರಿ ಪೂರ್ಣಗೊಳಿಸುವುದರೊಂದಿಗೆ ಕಸ ವಿಲೇವಾರಿಗೂ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.