ಮಡಿಕೇರಿ, ನ. 23: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮೂಲಕ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಪ್ರಸ್ತುತ ವರ್ಷದಿಂದಲೇ ಆರಂಭಗೊಳ್ಳಲಿದ್ದು, ಸಂಘದಲ್ಲಿ ಬೆಳೆ ಸಂಗ್ರಹಿಸಿಡುವ ಬೆಳೆಗಾರರಿಗೆ ಅಗತ್ಯವಿದ್ದಲ್ಲಿ ಮುಂಗಡ ಹಣ ನೀಡಿ ಮಾರುಕಟ್ಟೆಯಲ್ಲಿ ಉತ್ತಮ ದರ ಕೊಡಿಸಲು ಪ್ರಯತ್ನ ಮಾಡಲಾ ಗುವುದು ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.ಮಡಿಕೇರಿ, ನ. 23: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮೂಲಕ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಪ್ರಸ್ತುತ ವರ್ಷದಿಂದಲೇ ಆರಂಭಗೊಳ್ಳಲಿದ್ದು, ಸಂಘದಲ್ಲಿ ಬೆಳೆ ಸಂಗ್ರಹಿಸಿಡುವ ಬೆಳೆಗಾರರಿಗೆ ಅಗತ್ಯವಿದ್ದಲ್ಲಿ ಮುಂಗಡ ಹಣ ನೀಡಿ ಮಾರುಕಟ್ಟೆಯಲ್ಲಿ ಉತ್ತಮ ದರ ಕೊಡಿಸಲು ಪ್ರಯತ್ನ ಮಾಡಲಾ ಗುವುದು ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.ಹಣವನ್ನು ಮುಂಗಡವಾಗಿ ಬೆಳೆಗಾರರಿಗೆ ನೀಡಲು ಚಿಂತನೆ ನಡೆಸ ಲಾಗಿದ್ದು, ಅಂತಿಮ ನಿರ್ಧಾರವನ್ನು ಮಹಾಸಭೆಯಲ್ಲಿ ಕೈಗೊಳ್ಳಲಾಗುವುದು. ಬೆಳೆಗಾರರು ಸೂಚಿಸುವ ದಿನ ಬೆಳೆಯನ್ನು ಮಾರಾಟ ಮಾಡಿ ಉಳಿದ ಹಣವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಪ್ರತಿಯೊಬ್ಬ ಸದಸ್ಯರಿಗೂ ‘ರಿಬೇಟ್ ಪಾಸ್ ಪುಸ್ತಕ’ ನೀಡಿ ಕಚೇರಿಯಲ್ಲಿ ಪ್ರತಿಯೊಂದನ್ನು ಇಟ್ಟುಕೊಂಡು ಹತ್ಯಾರು ವಿಭಾಗ, ಮತ್ತಿತರ ವ್ಯವಹಾರ ಮಾಡಿದ್ದರ ಬಗ್ಗೆ ಕ್ರಮಬದ್ಧವಾಗಿ ದಾಖಲಿಸಲಾಗುವುದು. ಸದಸ್ಯರಾಗಿದ್ದವರ ಪತ್ನಿ ಮತ್ತು ಮಕ್ಕಳಿಗೆ ಸದಸ್ಯತ್ವ ದೊರಕಿಸಿಕೊಡಲು ಸರಳ ಯೋಜನೆಯನ್ನು ಮತ್ತು ಮರಣ ನಿಧಿಯನ್ನು ಇಂದಿನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಪಾಡು ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ಸರ್ವಸಮ್ಮತವಾದ ತೀರ್ಮಾನವನ್ನು ಕೈಗೊಳ್ಳಲಾಗುವುದು. ವೀರಾಜಪೇಟೆ ತಾಲೂಕಿನಲ್ಲಿ ಶಾಖೆಯೊಂದನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸೂದನ ಈರಪ್ಪ ತಿಳಿಸಿದರು.

ವೈದ್ಯನಾಥನ್ ವರದಿಯ ಶಿಫಾರಸ್ಸನ್ನು

(ಮೊದಲ ಪುಟದಿಂದ) ಸರಕಾರ ಅಂಗೀಕರಿಸಿದ ನಂತರ ಬದಲಾದ ನಿಯಮದಡಿ ಸಹಕಾರ ಸಂಘಗಳ ಸಾಕಷ್ಟು ಷೇರುದಾರರು ಸಂಘದ ಆಡಳಿತ ಮಂಡಳಿಯ ಚುನಾವಣೆಗಳಲ್ಲಿ ಮತದಾನ ಪ್ರಕ್ರಿಯೆಗಳಿಂದ ದೂರ ಉಳಿದು ಸಹಕಾರ ಕ್ಷೇತ್ರದಲ್ಲಿ ತಮ್ಮ ಕೊಂಡಿಯನ್ನು ಕಳಚಿ ಕೊಂಡಂತಾ ಗಿದೆ. ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ ಸದಸ್ಯರಾಗಿರುವ ಹೆಚ್ಚಿನ ಮಂದಿಗೆ ಏಲಕ್ಕಿ ಬೆಳೆಯೇ ಇಲ್ಲ. ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದವರು ಸದಸ್ಯರಿಂದ ಕಾಫಿಯೇ ಖರೀದಿ ಮಾಡುತ್ತಿಲ್ಲ. ಇಂದು ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ 2876 ಷೇರುದಾರ ಸದಸ್ಯರಿದ್ದು, ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾದವರು ಮೂರು ತಾಲೂಕಿನಿಂದ ಕೇವಲ 631 ಮಂದಿ ಮಾತ್ರ. ಮುಂದಿನ ಐದು ವರ್ಷಗಳ ಅವಧಿಗೆ ಕನಿಷ್ಟ ಶೇ.75 ಸದಸ್ಯರನ್ನಾದರೂ ಸಕ್ರಿಯರನ್ನಾಗಿಸಿ ಹಕ್ಕು ಚಲಾಯಿಸಲು ಅರ್ಹತೆ ಒದಗಿಸಿ ಕೊಡಬೇಕೆಂಬ ಅಭಿಲಾಷೆ ಹೊಂದಿರುವುದಾಗಿ ತಿಳಿಸಿದರು.

ಒಂದು ಕಾಲದಲ್ಲಿ ಏಷ್ಯಾ ಖಂಡದಲ್ಲೇ ಅತ್ಯಂತ ಪ್ರತಿಷ್ಠೆಯ ಸಹಕಾರ ಸಂಘವಾಗಿದ್ದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಒಟ್ಟು ಷೇರುದಾರ ಸದಸ್ಯರ ಸಂಖ್ಯೆ 10 ಸಾವಿರ. ಕಳೆದ ವರ್ಷ ಆಡಳಿತ ಮಂಡಳಿಗೆ ಚುನಾವಣೆ ನಡೆದಾಗ ಮತದಾನಕ್ಕೆ ಅರ್ಹರಾದವರು ಕೇವಲ ಅಂದಾಜು 500 ಮಂದಿ ಮಾತ್ರ. ಈ ಬೆಳವಣಿಗೆಯಿಂದಾಗಿ ಸಹಕಾರ ಕ್ಷೇತ್ರಗಳು ಹೆಸರಿಗೆ ಮಾತ್ರ ಉಳಿದು “ಸಹಕಾರ” ಎಂಬ ಪದವೇ ಅಳಿದು ಹೋಗಬಹುದು ಎಂದು ಸೂದನ ಈರಪ್ಪ ಆತಂಕ ವ್ಯಕ್ತಪಡಿಸಿದರು.

ಆರೋಪದಲ್ಲಿ ಹುರುಳಿಲ್ಲ

ಇತ್ತೀಚಿಗೆ ಸಂಘದ ಮಾಜಿ ಅಧ್ಯಕ್ಷ ಬಿ.ಈ.ಬೋಪಯ್ಯ ಅವರು ‘ರೈತ ಮಿತ್ರಕೂಟ’ದ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.

ರೂ. 6468ರ ನೈಜ ಬೆಲೆಯ ಸಿಮೆಂಟ್ ಶೀಟ್‍ಗಳು ಒಡೆದು ಹೋಗಿದ್ದು, ಅರ್ಧಬೆಲೆಗೆ ಮಾರಾಟ ಮಾಡುವುದು ನ್ಯಾಯ ಸಮ್ಮತ. ಆದ್ದರಿಂದ ಮಳೆಗಾಲದಲ್ಲಿ ಮನೆಯ ಸೂರು ಸೋರುತ್ತಿದ್ದ ಬಡ ವ್ಯಕ್ತಿಯೊಬ್ಬರಿಗೆ ರೂ. 3,500 ಬೆಲೆಯ ಒಡೆದ ಸಿಮೆಂಟ್ ಶೀಟ್‍ಗಳನ್ನು ನಾನು ಕೊಡಿಸಿದ್ದು ನಿಜ ಎಂದು ಈರಪ್ಪ ಸ್ಪಷ್ಟಪಡಿಸಿದರು.

ಸೋಮವಾರಪೇಟೆ ಶಾಖೆ ರೂ. 5.50 ಲಕ್ಷ ನಷ್ಟದಲ್ಲಿದೆ ಎಂದು ಆರೋಪಿಸುತ್ತಿರುವ ಮಾಜಿ ಅಧ್ಯಕ್ಷರು ಸ್ವತಃ ಸೋಮವಾರಪೇಟೆ ತಾಲೂಕಿ ನವರಾಗಿದ್ದಾರೆ. ತಾನೇ ಅಧ್ಯಕ್ಷನಾಗಿದ್ದ ಸಂಸ್ಥೆ ತನ್ನ ಅವಧಿಯಲ್ಲೆ ನಷ್ಟಕ್ಕೆ ಬಿದ್ದಿದೆ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಸಿಬ್ಬಂದಿಗಳ ವರ್ಗಾವಣೆ, ಮಾನಸಿಕ ಕಿರುಕುಳ, ಗ್ರಾಹಕರು ಮತ್ತು ಸಂಘದ ಸದಸ್ಯರೊಂದಿಗೆ ಇದ್ದ ವೈಯಕ್ತಿಕ ಮನಸ್ತಾಪವೇ ಸೋಮವಾರಪೇಟೆ ಶಾಖೆ ನಷ್ಟಗೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿದರು. ಮುಂದಿನ ಐದು ವರ್ಷಗಳಲ್ಲಿ ಈ ಶಾಖೆ ಲಾಭದ ಹಾದಿಯತ್ತ ಸಾಗುವುದನ್ನು ಬೋಪಯ್ಯನವರೇ ನೋಡಲಿದ್ದಾರೆ ಎಂದರು.

ಈ ಹಿಂದೆ ಸೋಮವಾರಪೇಟೆಯ ಮಡಿಕೇರಿ ರಸ್ತೆಯಲ್ಲಿ ಸಂಘಕ್ಕೆ ಜಾಗವೊಂದನ್ನು ಖರೀದಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿತ್ತು. ಸೆಂಟ್‍ವೊಂದಕ್ಕೆ 7.75 ಲಕ್ಷ ರೂ.ಗಳಂತೆ ಹಣ ನೀಡಿ ಜಾಗ ಖರೀದಿ ಮಾಡಲು ತಯಾರಿ ನಡೆಸಿದ್ದರು. ಆದರೆ ಇದನ್ನು ಬಲವಾಗಿ ಆಕ್ಷೇಪಿಸಿದ ನಾವುಗಳು ಸಂಘಕ್ಕೆ ಆಗಬಹುದಾದ ನಷ್ಟವನ್ನು ತಪ್ಪಿಸಿದ್ದೇವೆ ಎಂದು ಹೇಳಿದರು.

ನಾಲ್ಕನೇ ದರ್ಜೆ ನೌಕರರೊಬ್ಬ ರನ್ನು ಖಾಯಂಗೊಳಿಸಲು ಮಿತ್ರಕೂಟದ ನಿರ್ದೇಶಕರೊಬ್ಬರು ರೂ. 25 ಸಾವಿರ ಲಂಚ ಪಡೆದಿದ್ದಾರೆ ಎಂದು ಮಾಜಿ ಅಧ್ಯಕ್ಷರು ಆರೋಪ ಮಾಡಿದ್ದಾರೆ. ಆದರೆ ಅದೇ ನೌಕರ ನನ್ನಿಂದ ಯಾರೂ ಹಣ ಪಡೆದಿಲ್ಲವೆಂದು ಸಿಇಓ ಅವರಿಗೆ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ ಎಂದು ಈರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರು ಗಳಾದ ಬಿ.ಸಿ. ಚೆನ್ನಪ್ಪ ಮದೆನಾಡು, ಅಜ್ಜಿನಂಡ ಎಂ. ಗೋಪಾಲಕೃಷ್ಣ, ಕುಂಬಗೌಡನ ಡಿ. ವಿನೋದ್ ಕುಮಾರ್ ಮಕ್ಕಂದೂರು ಹಾಗೂ ಪೆರಿಯನ ಕೆ. ಉದಯ ಕುಮಾರ್ ಚೆಟ್ಟಳ್ಳಿ ಉಪಸ್ಥಿತರಿದ್ದರು.