ವೀರಾಜಪೇಟೆ, ನ. 20: ಕಳೆದ ಎರಡು ವರ್ಷಗಳಿಂದಲೂ ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ದುಸ್ಥಿತಿಯಲ್ಲಿದ್ದು ಈಗಾಗಲೇ ಅನೇಕ ರಸ್ತೆ ಕಾಮಗಾರಿ ನಡೆಯುತ್ತಿದೆ. ಉಳಿದಿರುವ ಎಲ್ಲಾ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿಗೊಳಿಸ ಲಾಗುವುದು ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಳ್ಳುಮಾಡು ಕುಂಜಿಲಗೇರಿ ಶ್ರೀ ಬೊಟ್ಲಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ರೂ. 10 ಲಕ್ಷ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ, ಕುಯಿಮಂಡ ಕುಟುಂಬಸ್ಥರ ಸಾರ್ವಜನಿಕ ರಸ್ತೆ ರೂ. 5 ಲಕ್ಷ ಕಾಂಕ್ರಿಟ್ ರಸ್ತೆ, ಕುಂಜಿಲಗೇರಿ ಅಲ್ಲಪೀರ ಕುಟುಂಬಸ್ಥರ ರಸ್ತೆಗೆ ಕಾಂಕ್ರಿಟ್ ರೂ. 5 ಲಕ್ಷ, ಮತ್ತು ಕುಂಜಿಲಗೇರಿ ಚರ್ಮಂಡ ಕುಟುಂಬ ಸ್ಥರ ಸಾರ್ವಜನಿಕ ರಸ್ತೆಗೆ 5 ಲಕ್ಷ ಸೇರಿ ಒಟ್ಟು 25 ಲಕ್ಷ ಅನುದಾನದಲ್ಲಿ ನಡೆದ ಕಾಂಕ್ರಿಟ್ ರಸ್ತೆಗಳು ನಿರ್ಮಿಸಲಾಗಿದೆ. ಈ ವರ್ಷ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಯೋಜನೆ ಇತ್ತು. ಆದರೆ ಕೋವಿಡ್-19 ರಿಂದ ಕೆಲವು ಕಾಮಗಾರಿಗಳು ಬಾಕಿ ಉಳಿದಿದ್ದು ಡಿಸೆಂಬರ್ ತಿಂಗಳಲ್ಲಿ ಇನ್ನು ಉಳಿದಿರುವ ರಸ್ತೆ ಕಾಮಗಾರಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅವರು ಮಾತನಾಡಿ ಕಾಕೋಟುಪರಂಬು ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಅನೇಕ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ವ್ಯಾಪ್ತಿ ಹೆಚ್ಚು ವಿಸ್ತಾರವಾಗಿರುವುದರಿಂದ ಸ್ಥಳೀಯ ಶಾಸಕರ ಸಹಕಾರದಿಂದ ಹೆಚ್ಚು ಅನುದಾನವನ್ನು ಕೋರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗಿದೆ. ಇನ್ನು ಬಾಕಿ ಉಳಿದಿರುವ ರಸ್ತೆಗಳ ಕಾಮಗಾರಿಯನ್ನು ಹಂತಹಂತವಾಗಿ ನಡೆಸಲಾಗುವುದು. ಬೇಸಿಗೆ ಬರುವುದರಿಂದ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯಗಳನ್ನು ಜಿಲ್ಲಾ ಪಂಚಾಯಿತಿಯಿಂದ ಒದಗಿಸಿ ಕೊಡುವ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಕೆ.ಮಹದೇವ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಎಸ್.ಪೊನ್ನಣ್ಣ, ಶ್ವೇತ ನಾಣಯ್ಯ, ಬಿಜೆಪಿ ಶಕ್ತಿ ಕೇಂದ್ರದ ಬಿನ್ನು ಮುದ್ದಪ್ಪ ಮತ್ತು ಅಚ್ಚಪಂಡ ಹರೀಶ್, ಹಿರಿಯರಾದ ಚರ್ಮಂಡ ಅಯ್ಯಪ್ಪ ಮತ್ತು ಅಪ್ಪಣು ಪೂವಯ್ಯ, ಅಲ್ಲಪೀರ ಕಂಠೇಶ್ ನಂಜಪ್ಪ, ಕೂತಂಡ ನಾಣಯ್ಯ, ಅಪ್ಪಯ್ಯ ಸುರೇಶ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.