ಸುಂಟಿಕೊಪ್ಪ, ನ. 20: ಫುಟ್ಬಾಲ್ ಆಟವಾಡುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆ 15 ದಿನ ಕಳೆದ ನಂತರ ಭುಗಿಲೆದ್ದು ಮಾರಕಾಸ್ತ್ರದಿಂದ ಬಾಲಕನೋರ್ವನ ಮೇಲೆ ಗುಂಪೊಂದು ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರ ಗಾಯಗೊಂಡು ಜೀವನ್ಮರಣದಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.

ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಯುವಕರ ತಂಡ ಪ್ರತಿದಿನ ಸಂಜೆ ಕೊರೊನಾ ಸಂಕಷ್ಟದ ದಿನಗಳಲ್ಲಿ ಕಾಲ್ಚೆಂಡು ಆಟದಲ್ಲಿ ತೊಡಗಿಸಿಕೊಳ್ಳುತ್ತಾರೆ. 15 ದಿನಗಳ ಹಿಂದೆ ಆಟವಾಡುತ್ತಿದ್ದಾಗ ಆಟಗಾರರ ಮಧ್ಯೆ ಸಣ್ಣ ಗಲಾಟೆಯಲ್ಲಿ ನೂಕಾಟ - ತಳ್ಳಾಟ ನಡೆಯಿತು. ಆಟದಲ್ಲಿ ಅದು ಮಾಮೂಲಿ ಎಂದು ಆಟಗಾರರು, ಯುವಕರು ತಲ್ಲೀನರಾದರು. ತಾ. 17 ರಂದು ಸಂಜೆ ಮದುರಮ್ಮ ಬಡಾವಣೆಯ ಮಹದೇವ ಎಂಬವರ ಪುತ್ರ ಆಟಗಾರ ಮಹೇಂದ್ರ (15) ಎಂಬಾತನನ್ನು ಇದೇ ಯುವಕರ ತಂಡ ಕರೆದು ಸುಂಟಿಕೊಪ್ಪದ ಮಾಂಸದ ಮಾರುಕಟ್ಟೆ ಬಳಿ ಇರುವ ಮೈದಾನಕ್ಕೆ ಬರಹೇಳಿದ್ದು ಅದೇ ಸಮಯದಲ್ಲಿ ಜನತಾ ಕಾಲೋನಿಯ ಯುವಕರಾದ ಅಭಿ, ಪ್ರಶಾಂತ್, ಬಾಲು, ಅರುಣ ಎಂಬವರು ಮಹೇಂದ್ರನ ಮೇಲೆ ತಲವಾರಿನಿಂದ ಏಕಾಏಕಿ ತಲೆ, ಭುಜ, ಕೈಗೆ ಕಡಿದು ಗಾಯಗೊಳಿಸಿ ಪರಾರಿಯಾದರು ಎನ್ನಲಾಗಿದೆ.

ತೀವ್ರ ಗಾಯಗೊಂಡ ಮಹೇಂದ್ರನನ್ನು ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ನಂತರ ಮೈಸೂರಿನ ರಾಮಕೃಷ್ಣ ಆಸ್ಪತ್ರೆಗೆ ಸೇರಿಸಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಬಾಲಕನ ತಂದೆ ಕೂಲಿ ಕಾರ್ಮಿಕರಾಗಿರುವ ಮಹದೇವ ಅವರು ಸುಂಟಿಕೊಪ್ಪ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಡಿ.ಎಸ್. ಅವರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದು ಸೆರೆಗೆ ಬಲೆ ಬೀಸಿದ್ದಾರೆ.

ಸುಂಟಿಕೊಪ್ಪ ಪಟ್ಟಣದಲ್ಲಿ ಯುವಕರು ಗಾಂಜಾ ಸೇವನೆಯಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ ಕೆಡಿಸುತ್ತ ಗಲಾಟೆ, ಹೊಡೆದಾಟದಲ್ಲಿ ತೊಡಗಿದ್ದಾರೆ. ಇವರನ್ನು ಮಟ್ಟಹಾಕಬೇಕು. ಹಾಗೆಯೇ ಇತ್ತೀಚಿನ ದಿನ ಮಾರುಕಟ್ಟೆಯಲ್ಲಿ ಗಾಂಜಾ ಸೇವಿಸಿದ ಯುವಕನೊಬ್ಬ ಕೈಯಲ್ಲಿ ಚೂರಿ ಹಿಡಿದು ಗ್ರಾಹಕರನ್ನು ಭಯಭೀತಿಗೊಳಿಸಿ ವ್ಯಾಪಾರಸ್ಥರಿಗೆ ತೊಂದರೆ ಉಂಟು ಮಾಡಿದ ಘಟನೆ ಕೂಡ ನಡೆದಿದೆ. ನೂತನ ಠಾಣಾಧಿಕಾರಿ ಪುನೀತ್ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

- ರಾಜು ರೈ