*ಸಿದ್ದಾಪುರ, ನ.19 : ನನ್ನ ಹೊಟ್ಟೆಗೆ ಒಂದಿಷ್ಟು ಊಟ ಸಿಕ್ಕರೆ ಸಾಲದು, ಒಂದಷ್ಟು ಆಹಾರ ಬೇಕೇ ಬೇಕು. ಅರಣ್ಯದಲ್ಲಂತೂ ನಾವು ತಿನ್ನುವ ಸೊಪ್ಪು, ಹಣ್ಣು, ಗೆಡ್ಡೆ, ಗೆಣಸು, ಫಸಲುಗಳಿಲ್ಲ.

‘ನಿಮ್ಮೂರಿನ ಕಾಫಿ, ಅಡಿಕೆ, ಬಾಳೆ, ತೆಂಗು, ಹಲಸು ಸೇರಿದಂತೆ ನೀವು ಸೇವಿಸುವ ಎಲ್ಲಾ ಫಸಲುಗಳು ನಮ್ಮ ಹೊಟ್ಟೆ ತುಂಬಲು ಹೆಚ್ಚು ಸಹಕಾರಿಯಾಗಿತ್ತು. ಆದರೆ ನೀವು ನಮ್ಮ ಶಕ್ತಿ ಮತ್ತು ಯುಕ್ತಿಯನ್ನು ಪರೀಕ್ಷೆ ಮಾಡಲು ಹೊರಟ್ಟಿದ್ದೀರಿ. ನೀವೇನೆ ಪ್ರಯತ್ನಿಸಿದರೂ ನಮ್ಮ ಆಗಮನವನ್ನು ತಡೆಯಲಾರಿರಿ. ಸೋಲಾರ್ ಬೇಲಿಯನ್ನು ಅಳವಡಿಸಿದ್ದೀರಿ, ಕಂದಕಗಳನ್ನು ತೋಡಿದ್ದೀರಿ, ಪಟಾಕಿಗಳನ್ನು ಸಿಡಿಸಿದ್ದೀರಿ, ಇದೀಗ ರೈಲ್ವೇ ಕಂಬಿಗಳ ಬೇಲಿ ಮಾಡಿ ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದ್ದೀರಿ. ಆದರೆ ನಾವು ಇದ್ಯಾವುದಕ್ಕೂ ಅಂಜುವುದಿಲ್ಲ..!’

ನೀವು ಮಾನವರು ಬುದ್ಧಿವಂತಿಕೆಯಿಂದ ಆಹಾರವನ್ನು ಸಂಪಾದಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತೀರಿ. ಆದರೆ ನಾವು ಮಾತನಾಡಲು ಬಾರದ ವನ್ಯಜೀವಿಗಳು, ದಾಳಿಯಿಂದಷ್ಟೇ ನಮ್ಮ ಆಹಾರ ನಮಗೆ ಸಿಗಲು ಸಾಧ್ಯ. ನಮಗಾಗಿ ಮೀಸಲಿಟ್ಟಿರುವ ಅರಣ್ಯದಲ್ಲಿ ನಮಗೆ ಬೇಕಾದಷ್ಟು ನಮ್ಮ ಇಷ್ಟದ ಆಹಾರ ದೊರೆತ್ತಿದ್ದರೆ ನಿಮ್ಮ ತಟ್ಟೆಗೆ ನಾವು ಸೊಂಡಿಲು ಹಾಕುತ್ತಿರಲಿಲ್ಲ. ಆದರೆ ನೀವು ಸ್ವಾರ್ಥಿಗಳು, ನಿಮಗೆ ಮಾತ್ರ ಹೊಟ್ಟೆ ಇರುವುದೆಂದು ಭಾವಿಸಿದ್ದೀರಿ. ಅಷ್ಟು ಪುಟ್ಟ ಹೊಟ್ಟೆಗಾಗಿ ಒಂದಿಷ್ಟು ಆಹಾರಕ್ಕಾಗಿ ಪರದಾಡುತ್ತೀರಿ.

ಆದರೆ ನಮ್ಮದೆಷ್ಟು ದೊಡ್ಡ ಹೊಟ್ಟೆ ಎಂದು ನಿಮಗೇ ತಿಳಿದಿದೆ, ಆದರೂ ನೀವು ಮಾತ್ರ ಬದುಕಬೇಕು, ನಾವು ಹಸಿವಿನಿಂದ ಸಾಯಬೇಕು ಎನ್ನುವ ಮನೋಭಾವನೆಯಲ್ಲಿ ಎಲ್ಲಾ ಕಡೆ

(ಮೊದಲ ಪುಟದಿಂದ) ದಿಗ್ಬಂಧನ ಹಾಕಲು ಹೊರಟ್ಟಿದ್ದೀರಿ. ನಿಮ್ಮ ರೈಲು ಕಂಬಿಯ ಬೇಲಿಯನ್ನು ಪುಡಿಗಟ್ಟುವ ಆವೇಶ ಹಸಿವಿನಿಂದಾಗಿ ನಮಗೆ ಬಂದಿದೆ, ತಾಕತ್ತಿದ್ದರೆ ತಡೆದು ನೋಡಿ.

-ಇಂತೀ ನಿಮ್ಮನ್ನು ಪ್ರೀತಿಸುವ ವನ್ಯ ಸಲಗ

ಇದು ಜೋಡಿ ದಂತಗಳನ್ನು ಹೊಂದಿರುವ ಒಂಟಿ ಸಲಗದ ಆರ್ಭಟ. ವಾಲ್ನೂರು ಗ್ರಾ.ಪಂ ವ್ಯಾಪ್ತಿಯ ತ್ಯಾಗತ್ತೂರು ಗ್ರಾಮದಲ್ಲಿ ಅಳವಡಿಸಿರುವ ರೈಲ್ವೆ ಕಂಬಿಗಳ ಬೇಲಿಯನ್ನು ಪುಡಿಗಟ್ಟುವಷ್ಟು ಆವೇಶ ಆ ವನ್ಯಜೀವಿಯಲ್ಲಿತ್ತು. ತನ್ನ ದಂತಗಳಿಂದ ಬೇಲಿಯನ್ನು ತಳ್ಳಿ, ಸೊಂಡಿಲಿನಿಂದ ಎಳೆದು, ಹಣೆಯಿಂದ ಬಡಿದು ಆರ್ಭಟಿಸಿತು. ಅದೃಷ್ಟವಶಾತ್ ಬೇಲಿ ಮುರಿಯಲಿಲ್ಲ. ಒಂದು ವೇಳೆ ಬೇಲಿ ಮುರಿದಿದ್ದರೆ ಎದುರು ಸಿಕ್ಕಿದವರನ್ನು ಯಾರನ್ನೂ ಬಿಡುತ್ತಿರಲಿಲ್ಲ ಆ ಕಾಡಾನೆ. ವನ್ಯಜೀವಿಯ ರೋಷ, ಆವೇಷದ ದೃಶ್ಯ ಸ್ಥಳೀಯರ ಮೊಬೈಲ್ ಫೋನ್‍ನಲ್ಲಿ ಸೆರೆಯಾಗಿದೆ.

ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬರಡಿಯಿಂದ ಅಮ್ಮಂಗಾಲದವರೆಗೆ 9 ಕಿ.ಮೀ. ದೂರ ರೈಲ್ವೆ ಕಂಬಿಗಳಿಂದ ಕಾಡಾನೆ ತಡೆ ಬೇಲಿ ನಿರ್ಮಿಸಲಾಗುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಒಂದಷ್ಟು ದೂರ ಬೇಲಿ ನಿರ್ಮಿಸಬೇಕಾಗಿದೆ. ಈ ಬೇಲಿ ನಿತ್ಯ ಗ್ರಾಮಕ್ಕೆ ಲಗ್ಗೆ ಇಟ್ಟು ಕಾಫಿ ತೋಟ ಮತ್ತು ಗದ್ದೆಗಳನ್ನು ನಾಶ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಕಾಡಾನೆಗಳಿಗೆ ಅಡ್ಡಿಯಾಗಿದೆ. ಇದೇ ಕಾರಣದಿಂದ ತ್ಯಾಗತ್ತೂರು ಭಾಗದಲ್ಲಿ ಕಾಡಾನೆ ಪ್ರತಿರೋಧ ತೋರಿತು.

ಗ್ರಾಮಗಳ ಪಕ್ಕದಲ್ಲೇ ದುಬಾರೆ ಮತ್ತು ಮೀನುಕೊಲ್ಲಿ ಅರಣ್ಯ ಪ್ರದೇಶವಿದ್ದು, ಕಾಡಾನೆಗಳ ಹಿಂಡು ನಿತ್ಯ ದಾಳಿ ಇಡುತ್ತಿವೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡಾನೆ ಹಾವಳಿ ಹಾಗೂ ವನ್ಯಜೀವಿಗಳ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ಅಂಚೆಮನೆ ಸುಧಿ