ಸೋಮವಾರಪೇಟೆ, ನ. 19: ರಾಜ್ಯದ ಎಲ್ಲಾ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿದ್ದು, ಇದರಿಂದಾಗಿ ಜಿಲ್ಲೆಯ ಮೂರೂ ಪ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳ ಮೇಲೆ ಕರಿನೆರಳು ಕವಿದಂತಾಗಿದೆ.ರಾಜ್ಯದ 227 ನಗರಸಭೆ, ಪುರಸಭೆ, ಪ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಗೊಳಿಸಿ ಕಳೆದ ಅಕ್ಟೋಬರ್ 8ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಮೀಸಲಾತಿ ಆದೇಶದ ವಿರುದ್ಧ ಹಲವಷ್ಟು ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಅಕ್ಟೋಬರ್ 20ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯೂ ನಿಗದಿಯಾಗಿತ್ತು. ಚುನಾವಣೆಗೆ ಒಂದು ದಿನ ಇರುವಂತೆಯೇ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಚುನಾವಣಾ ಪ್ರಕ್ರಿಯೆ ರದ್ದಾಗಿತ್ತು. ನಂತರ ಅ. 22ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ತಡೆಯಾಜ್ಞೆಯನ್ನು ತೆರವುಗೊಳಿಸಿ, ಆಯ್ಕೆ ಪ್ರಕ್ರಿಯೆಯ ವಿಚಾರಣೆ ಯನ್ನು ಕಾಯ್ದಿರಿಸಿ, ಅ. 8 ರಂದು ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಯಂತೆ ನ.10ರ ಒಳಗೆ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದ್ದರು.

ನ್ಯಾಯಾಲಯದ ಆದೇಶದಂತೆ ರಜಾ ದಿನಗಳೂ ಸೇರಿದಂತೆ ನ್ಯಾಯಾಲಯ ತಿಳಿಸಿದ ದಿನದೊಳಗೆ ಚುನಾವಣೆಯನ್ನು ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎ. ವಿಜಯಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದರು.

ಅದರಂತೆ ಕೊಡಗಿನ ಸೋಮವಾರಪೇಟೆ, ವೀರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳಿಗೆ ನ. 3ರಂದು ಚುನಾವಣೆ ನಡೆದು, ಜಿಲ್ಲೆಯ ಮೂರೂ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು.

ಇದಾಗಿ 16 ದಿನಗಳ ತರುವಾಯ ಮತ್ತೆ ಹೈಕೋರ್ಟ್‍ನಲ್ಲಿ ಅರ್ಜಿಯ ವಿಚಾರಣೆ ನಡೆದು ಮೀಸಲಾತಿಯ ಆದೇಶವನ್ನು ರದ್ದುಗೊಳಿಸಿದೆ. ಪರಿಣಾಮ ಸರ್ಕಾರದ ಮೀಸಲಾತಿಯಡಿ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದವರ ಸ್ಥಾನದ ಮೇಲೆ ಕಾರ್ಮೋಡ ಕವಿಯುವಂತಾಗಿದೆ.

ರಾಜ್ಯದ 227 ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಯಾಗಿದ್ದರಿಂದ ಕೊಡಗು ಸೇರಿದಂತೆ ರಾಜ್ಯದ ಇತರೆಡೆ ಚುನಾವಣೆ ನಡೆದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮುಕ್ತಾಯಗೊಂಡಿದೆ. ಇದೀಗ ಹೈಕೋರ್ಟ್‍ನ ಏಕಸದಸ್ಯ ಪೀಠ

(ಮೊದಲ ಪುಟದಿಂದ) ಇಂದು ನೀಡಿದ ತೀರ್ಪಿನಿಂದ ಅರ್ಜಿದಾರರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಚುನಾವಣಾ ಫಲಿತಾಂಶ ಅಮಾನತು ಸ್ಥಿತಿಯಲ್ಲಿರುವದರಿಂದ ಆಯ್ಕೆಯಾಗಿದ್ದ ಮಂದಿಯಲ್ಲಿ ತಳಮಳ ಶುರುವಾಗಿದೆ.

ಮೇಲ್ಮನವಿಗೆ ಅವಕಾಶ: ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ಅವಕಾಶ ಕೋರಿದ ಹಿನ್ನೆಲೆ ಇಂದಿನಿಂದ ಮುಂದಿನ 10 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು. ನಂತರ ಕೋರ್ಟ್‍ನ ವಿಭಾಗೀಯ ಪೀಠ ನೀಡುವ ತೀರ್ಪು ಅಂತಿಮವಾಗಿರಲಿದೆ ಎಂದು ಹೈಕೋರ್ಟ್‍ನ ಏಕಸದಸ್ಯ ಪೀಠ ತಿಳಿಸಿದೆ.

ಮೀಸಲಾತಿ ಕಸರತ್ತು: ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನಿಗದಿಗೊಳಿಸಿರುವ ಮೀಸಲಾತಿ ಸಮರ್ಪಕವಾಗಿಲ್ಲ ಎಂದು ಹೈಕೋರ್ಟ್ ಹಿರಿಯ ವಕೀಲರಾದ ಎ.ಎಸ್. ಪೊನ್ನಣ್ಣ, ಹೆಚ್.ಎಸ್. ಚಂದ್ರಮೌಳಿ ಅವರುಗಳು ತಕರಾರು ಅರ್ಜಿ ಸಲ್ಲಿಸಿದ್ದರು.

2018ರಿಂದಲೂ ರಾಜ್ಯದ ಪ.ಪಂ.ಗಳಿಗೆ ಚುನಾವಣೆ ನಡೆಸಿಲ್ಲ. ಕೇವಲ ನೋಟಿಫಿಕೇಷನ್ ಹೊರಡಿಸಿ, ನಂತರ ವಾಪಸ್ ಪಡೆಯುತ್ತಿದ್ದಾರೆ. ಇದರೊಂದಿಗೆ 27.08.2020ರಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ನೀಡಿರುವ ಅಂಶಗಳನ್ನು ಪಾಲಿಸಿಲ್ಲ. ಮೀಸಲಾತಿ ನಿಗದಿ ಸಂದರ್ಭ ಸ್ಥಳೀಯ ಜನಸಂಖ್ಯೆಯ ಶೇಕಡಾವಾರು ಆಧಾರದ ಮೇಲೆ ನಿಗದಿ ಪಡಿಸಬೇಕಿದ್ದರೂ, ಇವುಗಳನ್ನು ಗಾಳಿಗೆ ತೂರಲಾಗಿದೆ ಎಂಬಿತ್ಯಾದಿ ಅಂಶಗಳನ್ನು ಹೈಕೋರ್ಟ್ ಗಮನಕ್ಕೆ ತರಲಾಗಿತ್ತು.

ಸೋಮವಾರಪೇಟೆ ಪ.ಪಂ.ಗೆ ನಿಗದಿಪಡಿಸಿದ ಮೀಸಲಾತಿ ಸಮರ್ಪಕವಾಗಿಲ್ಲ. ಬಹುಮತ ಇರುವ ಆಡಳಿತಕ್ಕೆ ವಿರುದ್ಧವಾಗಿದೆ. ಕುತಂತ್ರದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ನೋಟಿಫಿಕೇಷನ್‍ನಲ್ಲಿ ಕಾನೂನು ದುರುದ್ದೇಶ ಹೊಂದಲಾಗಿದೆ. ಇದು ದೋಷಮುಕ್ತವಾಗಿಲ್ಲ ಎಂದು 11637/2020ರಡಿ ಸೋಮವಾರಪೇಟೆಯ ಜಯಂತಿ ಶಿವಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು.

ಸೋಮವಾರಪೇಟೆ: 11 ಸದಸ್ಯ ಬಲದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಜಯಗಳಿಸಿದ್ದರೂ ಈಗಿನ ಮೀಸಲಾತಿ ಬಿಜೆಪಿಯ ಪರ ಬಂದಿತ್ತು. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಕ್ಕೆ ಮೀಸಲಾತಿ ಬಂದಿದ್ದು, ಅಧ್ಯಕ್ಷರಾಗಿ ಬಿಜೆಪಿಯ ನಳಿನಿ ಗಣೇಶ್, ಉಪಾಧ್ಯಕ್ಷರಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಿ. ಸಂಜೀವ ಆಯ್ಕೆಯಾಗಿದ್ದಾರೆ. ಇಲ್ಲಿ ಬಿಜೆಪಿ 3, ಕಾಂಗ್ರೆಸ್ 4, ಜೆಡಿಎಸ್ 3, ಪಕ್ಷೇತರ ಓರ್ವರು ಸದಸ್ಯರಿದ್ದಾರೆ.

ಕುಶಾಲನಗರ ಪ.ಪಂ: ಕುಶಾಲನಗರ ಪ.ಪಂ.ನ 16 ಸ್ಥಾನಗಳ ಪೈಕಿ ಬಿಜೆಪಿ 6, ಜೆಡಿಎಸ್ 4, ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯಗಳಿಸಿದ್ದು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಜಯವರ್ಧನ್ ಅಧ್ಯಕ್ಷರಾಗಿ, ಜೆಡಿಎಸ್ ಅಭ್ಯರ್ಥಿ ಸುರಯ್ಯಾ ಬಾನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವೀರಾಜಪೇಟೆ ಪ.ಪಂ: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಇದರಿಂದಾಗಿ ಬಿಜೆಪಿಯ ಟಿ.ಆರ್. ಸುಶ್ಮಿತಾ ಅಧ್ಯಕ್ಷರಾಗಿ, ಹರ್ಷವರ್ಧನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯ 18 ಸ್ಥಾನಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಕಳೆದ 2018ರ ಅಕ್ಟೋಬರ್ 29 ರಂದು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದು, ಅಕ್ಟೋಬರ್ 31ರಂದು ಫಲಿತಾಂಶ ಹೊರಬಿದ್ದಿತ್ತು. ಇದಾದ ನಂತರ 2 ಬಾರಿ ಮೀಸಲಾತಿ ನಿಗದಿಯಾಗಿದ್ದರೂ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆ ಚುನಾವಣೆ ನಡೆದಿರಲಿಲ್ಲ. ಇದೀಗ ಚುನಾವಣೆ ನಡೆದಿದ್ದರೂ ಹೈಕೋರ್ಟ್ ಆದೇಶದಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರಲ್ಲಿ ಮಂಕು ಕವಿಯುವಂತಾಗಿದೆ.

ಜಿಲ್ಲೆಯ ಮೂರೂ ಪ.ಪಂ.ಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಮೀಸಲಾತಿಯಡಿಯಲ್ಲಿ ಮೂರು ಪಂಚಾಯಿತಿಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಏರಿರುವದು ಗಮನಾರ್ಹ!