ಮಡಿಕೇರಿ, ನ.19 : ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯಕ್ಕೆ ಸೇರಿದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ಕೊಡಗು ಏಕೀಕರಣ ರಂಗ ತನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳಿನ ಕಂತೆಯಾಗಿದ್ದು, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಎನ್ನುವ ಕಾರಣಕ್ಕೆ ಚಾರಿತ್ರ್ಯವಧೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ತಣ್ಣಿಮಾನಿ ನಿವಾಸಿ ಸೂರ್ತಲೆ ಸೋಮಣ್ಣ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಏಕೀಕರಣ ರಂಗ ಆರೋಪಿಸಿರುವಂತೆ ನಿಡ್ಯಮಲೆ ಕುಟುಂಬಸ್ಥರಾಗಲಿ ಅಥವಾ ಇತರ ಯಾವುದೇ ಕುಟುಂಬದ ಸದಸ್ಯರಾಗಲಿ ದೇವಸ್ಥಾನದ ಜಾಗವನ್ನು ಅತಿಕ್ರಮಣ ಮಾಡಿಲ್ಲ. ಕಳೆದ ಹಲವು ಶತಮಾನಗಳಿಂದ ಜಂಟಿ ಖಾತೆಯಲ್ಲಿರುವ ಈ ಜಮೀನುಗಳನ್ನು ಹಿರಿಯರು ಪಾಲು ಮಾಡಿ ನೀಡಿದಂತೆ ನಿಡ್ಯಮಲೆ ಕುಟುಂಬಸ್ಥರು ಅನುಭವಿಸಿಕೊಂಡು ಬರುತ್ತಿದ್ದಾರೆ. ಕೊಡಗು ಏಕೀಕರಣ ರಂಗ ಮತ್ತು ಇತರ ಕೆಲವು ಸಂಘಟನೆಗಳು ನಮ್ಮ ಕುಟುಂಬದ ಚಾರಿತ್ರ್ಯವಧೆಗೆ ಹುನ್ನಾರ ನಡೆಸಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು.

ಏಕೀಕರಣ ರಂಗದ ಪ್ರಮುಖರು ಶ್ರೀಭಗಂಡೇಶ್ವರ ದೇವಾಲಯಕ್ಕೆ ಸಂಬಂಧಿಸಿದ 156.04 ಎಕರೆ ಜಮೀನನ್ನು ಸ್ಥಳೀಯರು ಒತ್ತುವರಿ ಮಾಡಿ ಕೊಂಡಿರುವುದಾಗಿ ಆರೋಪಿಸಿ ನಿಡ್ಯಮಲೆ ಕುಟುಂಬದ ಹಿರಿಯರ ಹೆಸರು ಹಾಗೂ ತನ್ನ ಕುಟುಂಬದ ಇಬ್ಬರು ಸದಸ್ಯರು ಸೇರಿ ತನ್ನ ಹೆಸರನ್ನು ಕೂಡ ಪ್ರಸ್ತಾಪಿಸಿದ್ದಾರೆ. 6.84 ಎಕರೆಯಷ್ಟು ದೇವಸ್ಥಾನದ ಜಾಗವನ್ನು ಅತಿಕ್ರಮಿಸಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಅಪ್ಪಟ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟು ಚಾರಿತ್ರ್ಯ ವಧೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸೈನಿಕರಾದ ತನ್ನ ತಂದೆ ಭಾಗಮಂಡಲದ ಪಾಳು ಬಿದ್ದಿದ್ದ ಸರ್ಕಾರಿ ಪೈಸಾರಿ ಜಾಗದಲ್ಲಿ 3-4 ಎಕರೆ ಪ್ರದೇಶವನ್ನು ಕೃಷಿಗಾಗಿ ಉಪಯೋಗಿಸಿ ಕೊಂಡಿದ್ದರು. ಅದನ್ನು ತಾನು ಹಾಗೂ ಮಾಜಿ ಸೈನಿಕರಾದ ತನ್ನ ಸಹೋದರ ಕೃಷಿಗಾಗಿ ಅಭಿವೃದ್ಧಿ ಪಡಿಸಿ 1972ರಿಂದ ಸತತವಾಗಿ 2019ರವರೆಗೆ ಸರಕಾರಕ್ಕೆ ಅಕ್ರಮ ಸ್ಥಳದ ಸಕ್ರಮಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದೇವೆ. ಸರ್ಕಾರದ ಮಟ್ಟದಲ್ಲಿ ಈ ಜಾಗದ ಸರ್ವೆ ನಡೆಸಿ ಪೈಸಾರಿ ಜಾಗವೆಂದು ಗುರುತಿಸಲಾಗಿದೆ. ಏಕೀಕರಣ ರಂಗ ದೇವಸ್ಥಾನದ ಜಾಗಗಳ ಅತಿಕ್ರಮಣ (ಮೊದಲ ಪುಟದಿಂದ) ತೆರವಿಗೆ ಆಗ್ರಹಿಸಿರುವ ಪ್ರದೇಶಕ್ಕೂ ತನ್ನ ಸ್ವಾಧೀನದ ಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ. ತನ್ನಂತೆ ಪೈಸಾರಿ ಜಾಗದಲ್ಲಿ ಕೃಷಿ ಮಾಡಿದ ನೂರಾರು ಕುಟುಂಬಗಳು ಅಕ್ರಮ ಸಕ್ರಮ ನಿಯಮದಡಿ ಸರಕಾರಕ್ಕೆ ಅರ್ಜಿ ಸಲ್ಲಿಸಿ ಸಕ್ರಮದ ನಿರೀಕ್ಷೆಯಲ್ಲಿವೆ ಎಂದು ಸೂರ್ತಲೆ ಸೋಮಣ್ಣ ತಿಳಿಸಿದರು.

ಯಾವ ಆಸ್ತಿಯನ್ನೂ ಕದ್ದು, ಮುಚ್ಚಿ ಮಾಡಿಲ್ಲ, ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ನಾವು ಸಿದ್ಧ ಎಂದು ಸ್ಪಷ್ಟಪಡಿಸಿದರು. ಕೊಡಗು ಏಕೀಕರಣ ರಂಗದ ಪ್ರಮುಖರು ವಾಸ್ತವವನ್ನು ಪರಿಶೀಲಿಸಿ ಸಾರ್ವಜನಿಕ ಹಿತಾಸಕ್ತಿ ಕಾರ್ಯಕ್ಕೆ ಮುಂದಾಗಲಿ ಮತ್ತು ವ್ಯಕ್ತಿಗತ ಚಾರಿತ್ರ್ಯಹರಣದ ಕಸಬು ಬಿಟ್ಟು ಜನಪರ ಕೆಲಸ ಮಾಡಲಿ ಎಂದು ಅವರು ಒತ್ತಾಯಿಸಿದರು.

ಗ್ರಾಮಸ್ಥರಾದ ನಿಡ್ಯಮಲೆ ಬಾಲಾಜಿ ಮಾತನಾಡಿ ನಿಡ್ಯಮಲೆ ಕುಟುಂಬಸ್ಥರು ಶತ ಶತಮಾನಗಳಿಂದ ಭಾಗಮಂಡಲದಲ್ಲಿ ನೆಲೆಸಿದ್ದು, ಶ್ರೀಭಗಂಡೇಶ್ವರ ದೇವಸ್ಥಾನಕ್ಕೂ ನಿಡ್ಯಮಲೆ ಕುಟುಂಬಕ್ಕೂ ಪೂರ್ವ ಕಾಲದಿಂದಲೇ ಅವಿನಾಭಾವ ಸಂಬಂಧವಿದೆ ಎಂದರು. ರಾಜರುಗಳ ಕಾಲದಿಂದಲೂ ವಿಧಿವತ್ತಾಗಿ ದತ್ತವಾದ ಎಲ್ಲಾ ಸಾಗು ಜಾಗಗಳನ್ನು ಅನುಭವಿಸುತ್ತಾ ಬಂದಿದ್ದೇವೆ. ನಿಡ್ಯಮಲೆ ಕುಟುಂಬ ಸೇರಿದಂತೆ ಶ್ರೀಭಗಂಡೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಮುಖ ಕುಟುಂಬಗಳು ಹಾಗೂ ದೇವಸ್ಥಾನದ ಜಂಟಿ ಖಾತೆಯಲ್ಲಿ ಕೃಷಿ ಜಮೀನುಗಳ ಕಂದಾಯ ದಾಖಲಾತಿಗಳು ನಡೆದುಕೊಂಡು ಬಂದಿದೆ ಎಂದು ಸ್ಪಷ್ಟಪಡಿಸಿದರು.

ನಿಡ್ಯಮಲೆ ಅಶೋಕ ಮಾತನಾಡಿ ಪ್ರತಿ 8- 10 ವರ್ಷಗಳಿಗೊಮ್ಮೆ ಜಮೀನು ಒತ್ತುವರಿಯಾಗಿದೆ ಎಂದು ಗೊಂದಲ ಸೃಷ್ಟಿಸುತ್ತಲೇ ಬರಲಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ತಲೆ ತಲಾಂತರಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ಇಲ್ಲಿನ ಕುಟುಂಬಗಳಿಗೆ ಅವರವರ ಹೆಸರಿಗೆ ಜಮೀನನ್ನು ಮಂಜೂರು ಮಾಡಿಕೊಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಪೌತಿಖಾತೆ ವರ್ಗಾಯಿಸಿಕೊಡಬೇಕು ಎಂದು ಒತ್ತಾಯಿಸಿದರು.

ವಕೀಲ ಕೆ.ಆರ್.ವಿದ್ಯಾಧರ್ ಮಾತನಾಡಿ ಭಾಗಮಂಡಲದಲ್ಲಿ ತಕ್ಕ ಮುಖ್ಯಸ್ಥರನ್ನು ಹಾಗೂ ಅರ್ಚಕರನ್ನು ಬದಲಾಯಿಸುವ ಪ್ರಯತ್ನಗಳೊಂದಿಗೆ ಸ್ಥಳೀಯ ನಿವಾಸಿಗಳನ್ನು ಒತ್ತುವರಿದಾರರು ಎಂದು ಪ್ರತಿಬಿಂಬಿಸುವ ಕಾರ್ಯ ಕೆಲವು ಸಂಘಟನೆಗಳಿಂದ ನಡೆಯುತ್ತಿದೆ. ದೇವಾಲಯದ ಜಾಗ ಒತ್ತುವರಿಯಾಗಿದೆ ಎಂದು ಆರೋಪ ಮಾಡಿರುವ ಕೊಡಗು ಏಕೀಕರಣ ರಂಗ ತಾಕತ್ತಿದ್ದರೆ ನ್ಯಾಯಾಲಯದಲ್ಲಿ ಇದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

ಭೂಸುಧಾರಣಾ ಕಾಯ್ದೆ ಪ್ರಕಾರ ಕೃಷಿ ಭೂಮಿಯನ್ನು ಅನುಭವಿಸುವ ಹಕ್ಕು ಇರುವುದು ಕೃಷಿ ಮಾಡಿದ ಶ್ರಮಿಕ ವರ್ಗದವರಿಗೆ ಹೊರತು ಮಠ, ಮಂದಿರ, ದೇವಾಲಯ, ಕ್ಲಬ್ ಇನ್ನಿತರ ಚಟುವಟಿಕೆಗಳಿಗೆ ಮೀಸಲಿಡಲು ಸಾಧ್ಯವಿಲ್ಲ ಎಂದು ವಿದ್ಯಾಧರ್ ಹೇಳಿದರು.

ಲಿವಾಕ್ ಮಾತು

ಕೊಡವರ ಬಗ್ಗೆ ಅಪಾರವಾದ ಗೌರವವಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಕೊಡವ ಸಮಾಜದ ಪ್ರಮುಖರು ಲಿವಾಕ್ ಹೆಸರಿನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಸಂಘಟನೆಯೊಂದರ ಮಾತು ಕೇಳಲು ಆರಂಭಿಸಿದ್ದಾರೆ. ದೇವಟ್‍ಪರಂಬುವಿನಲ್ಲಿ ಸಾವಿರಾರು ಕೊಡವರ ಹತ್ಯೆಯಾಗಿದೆ ಎಂದು ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಸಣ್ಣಪುಲಿಕೋಟ್‍ನಲ್ಲಿ ಕಲ್ಲೊಂದನ್ನು ಇಟ್ಟು ಮೀದಿ ಇಡುವ ಕಾರ್ಯದಲ್ಲಿ ತೊಡಗಿರುವ ಸಂಘಟನೆ ಆ ಭಾಗದಲ್ಲಿ ಪ್ರಾಬಲ್ಯ ಸ್ಥಾಪಿಸಲು ಮುಂದಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ನಿಡ್ಯಮಲೆ ಆನಂದ ಹಾಗೂ ನಿಡ್ಯಮಲೆ ದಾಮೋದರ ಉಪಸ್ಥಿತರಿದ್ದರು.