ಮಡಿಕೇರಿ, ನ. 19: ಮಡಿಕೇರಿ ತಾಲೂಕು ಕಚೇರಿಗೆ ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿ ಭೇಟಿ ನೀಡಿತು. ಅಧ್ಯಕ್ಷ ರವಿಕುಶಾಲಪ್ಪ ನೇತೃತ್ವದಲ್ಲಿ ಭೇಟಿ ನೀಡಿದ ತಂಡ ತಾಲೂಕು ಕಚೇರಿಯಲ್ಲಿ ವಿಲೇವಾರಿಗೆ ಬಾಕಿ ಉಳಿದಿರುವ ಕಡತಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಲ್ಲದೇ ಅವುಗಳ ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಶಿರಸ್ತೆದಾರ್ ಶ್ರೀನಿವಾಸ್, ಸಿಬ್ಬಂದಿ ರಮೇಶ್ ಅವರುಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿತು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ರವಿಕುಶಾಲಪ್ಪ, ಘಾರಂ ನಂ. 50,57,53ಕ್ಕೆ ಸಂಬಂಧಿಸಿದಂತೆ ಸುಮಾರು 4500 ಅರ್ಜಿಗಳು ತಾಲೂಕು ಕಚೇರಿಗೆ ಸಲ್ಲಿಕೆಯಾಗಿರುವ ಬಗ್ಗೆ ಮಾಹಿತಿಯಿದ್ದು, ಅವುಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿ ಕರನ್ನು ಒಳಗೊಂಡು ಅಲ್ಲಲ್ಲಿ ಸಭೆಗಳನ್ನು ಹಮ್ಮಿಕೊಳ್ಳ ಲಾಗುವದು. ಅದಕ್ಕೂ ಮುಂಚಿತವಾಗಿ ತಾ. 23ರಂದು ತನ್ನ ವ್ಯಾಪ್ತಿಯ ಮೂರು ಹೋಬಳಿಗಳ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿಯಲ್ಲಿ ನಡೆಸಿ ಕಡತ ವಿಲೇವಾರಿ ವಿಳಂಬದ ಬಗ್ಗೆ ಮಾಹಿತಿ ಪಡೆದು ಮುಂದಿನ ಹೆಜ್ಜೆ ಇಡಲಾಗುವದು ಎಂದರು.

ಕಾನೂನು ಮೀರಿ ಕೆಲಸ ಮಾಡಿ ಎಂದು ತಾನು ಸೂಚಿಸುವದಿಲ್ಲ. ಕಾನೂನು ಚೌಕಟ್ಟಿನಲ್ಲಿಯೇ ಜನತೆಗೆ ತೊಂದರೆಯಾಗದಂತೆ ಅಧಿಕಾರಿವರ್ಗ ಕಾರ್ಯನಿರ್ವಹಿಸಬೇಕು. ಕಡತಗಳು ನಾಪತ್ತೆ ಎಂಬ ಮಾಹಿತಿ ನೀಡಿದರೆ ತಾನು ಒಪ್ಪಲು ಸಿದ್ಧವಿಲ್ಲ. ಕಡತಗಳು ಎಲ್ಲೇ ಇದ್ದರೂ ಅವುಗಳನ್ನು ಸಮಿತಿ ಎದುರು ಹಾಜರುಪಡಿಸಬೇಕು. ಯಾವದೇ ಕಾರಣಕ್ಕೂ ಜನರಿಗೆ ಅನ್ಯಾಯವಾಗಬಾರದು. ಈ ದಿಸೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದು ರವಿಕುಶಾಲಪ್ಪ ಭರವಸೆಯಿತ್ತರು.

ಈ ಸಂದರ್ಭ ಸಮಿತಿ ಸದಸ್ಯರುಗಳಾದ ಕವಿತಾ ಪ್ರಭಾಕರ್, ಸುಬ್ರಮಣ್ಯ ಉಪಾಧ್ಯಾಯ, ಮಿಟ್ಟು ಮತ್ತಿತರರು ಇದ್ದರು.