ಮಡಿಕೇರಿ, ನ. 19: ತಲಕಾವೇರಿ-ಭಾಗಮಂಡಲ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಒತ್ತುವರಿಯನ್ನು ಈ ಕೂಡಲೇ ತೆರವುಗೊಳಿಸದಿದ್ದರೆ ಕೊಡಗು ಏಕೀಕರಣ ರಂಗಕ್ಕೆ ಬೆಂಬಲವಾಗಿ ನಿಂತು ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಎಚ್ಚರಿಸಿದೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳ ಜಮೀನು, ದೇವರಕಾಡುಗಳ ಅತಿಕ್ರಮಣ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ 16.9.2008 ರಲ್ಲಿ ಸರಕಾರ ಆದೇಶ ಹೊರಡಿಸಿದೆ.
ಈ ಕುರಿತು 2012-13ರ ಅವಧಿಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರ ನಡುವೆ ಸಾಕಷ್ಟು ಪತ್ರ ವ್ಯವಹಾರ ನಡೆದಿದೆ. ಈ ಆದೇಶದ ಅನ್ವಯ ಮುಜರಾಯಿ ಇಲಾಖೆಯ ಜಮೀನು ಅತಿಕ್ರಮಣದ ವಿಚಾರದಲ್ಲಿ ಸರ್ವೆ ನಡೆಸಿದ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರು ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ, ಕುಂಜಿಲದ ಇಗ್ಗುತಪ್ಪ ದೇವಸ್ಥಾನ, ಪಾಲೂರಿನ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಭಗಂಡೇಶ್ವರ ದೇವಸ್ಥಾನದ ಜಮೀನಿನ ಅಳತೆ ಮಾಡಿ ಒತ್ತುವರಿದಾರರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮಕೈಗೊಂಡು ಒತ್ತುವರಿದಾರರನ್ನು ತೆರವುಗೊಳಿಸುವಂತೆ ಕೊಡಗು ಏಕೀಕರಣರಂಗ ಏಪ್ರಿಲ್ 2013 ರಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತ್ತು. ಈ ಬಗ್ಗೆ ಪತ್ರಿಕಾ ಹೇಳಿಕೆ ಕೂಡ ನೀಡಲಾಗಿತ್ತು. 2019 ರ ಪೆಬ್ರವರಿಯಲ್ಲಿ ಕೊಡವ ಮಕ್ಕಡ ಕೂಟ ಕೂಡ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪತ್ರಿಕಾ ಹೇಳಿಕೆ ನೀಡಿತ್ತು. ಆದರೆ ಈ ಬಗ್ಗೆ ಜಿಲ್ಲಾಡಳಿತ ಇಂದಿನವರೆಗೂ ಯಾವ ಕ್ರಮವನ್ನು ಕೈಗೊಂಡಿಲ್ಲ ಎಂದು ಇದೀಗ ಕೊಡಗು ಏಕೀಕರಣ ರಂಗ ಸಾಕ್ಷಿ ಸಮೇತ ಅಕ್ರಮವನ್ನು ಬಯಲಿಗೆ ಎಳೆದಿದೆ. ತಾವು ಮಹಾನ್ ಸಾಧಕರಂತೆ ಮಾತನಾಡುವ ಅಕ್ರಮ ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಬೇಕು, ಈ ವಿಷಯದಲ್ಲಿ ಕ್ಷೇತ್ರದ ಶಾಸಕರು ಜಾಣ ಮೌನವಹಿಸಿರುವುದೇಕೆ. ಕೂಡಲೇ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಿ ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಏಕೀಕರಣ ರಂಗ ಯಾವುದೇ ಕಾನೂನು ಹೋರಾಟ ಹಮ್ಮಿಕೊಂಡರೂ ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸಂಪೂರ್ಣ ಬೆಂಬಲವಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹೋರಾಟಕ್ಕೆ ಸಜ್ಜಾಗುವುದಾಗಿ ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ತಿಳಿಸಿದೆ.