ಕಣಿವೆ, ನ. 19: ಕೂಗಳತೆಯ ದೂರದಲ್ಲಿ ಕಾವೇರಿ ಹರಿಯುತ್ತಿದ್ದರೂ ಕೂಡ ಕಾವೇರಿ ನದಿ ದಂಡೆಯ ಜನರು ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ಗುಮ್ಮನಕೊಲ್ಲಿ ಗ್ರಾಮದಲ್ಲಿ ಕಂಡುಬಂದಿದೆ.

ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಗುಮ್ಮನಕೊಲ್ಲಿ ಮುಖ್ಯರಸ್ತೆಯಲ್ಲಿನ ಸುಮಾರು ಹತ್ತರಿಂದ ಹದಿನೈದು ಕುಟುಂಬಗಳು ಕುಡಿಯುವ ನೀರನ್ನು ಮನೆಗೆ ಸಂಗ್ರಹಿಸಿಡಲು ಕೂಲಿ ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಕಾದು ಕೂರುವಂತಹ ದುಸ್ಥಿತಿ ಕಳೆದ ಹಲವು ವರ್ಷಗಳಿಂದಲೂ ಕಂಡುಬರುತ್ತಿದ್ದರೂ ಕೂಡ ಪಂಚಾಯಿತಿ ಆಡಳಿತವಾಗಲೀ, ಜಲಮಂಡಳಿಯಾಗಲೀ ಈ ಬಡ ನಿವಾಸಿಗಳತ್ತ ಒಲವು ತೋರುತ್ತಿಲ್ಲ.

ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಇಲ್ಲಿನ ನಿವಾಸಿಗಳಾದ ಬಲ್ಕೀಸಾ, ಪರ್ವಿನಾ, ಮಹದೇವಮ್ಮ, ಸುಶೀಲ, ಭಾನು, ಗಣೇಶ, ಕಾವ್ಯ, ಗೀತಾ, ಲಕ್ಷ್ಮಿ ಮೊದಲಾದವರು ಹೇಳುವ ಪ್ರಕಾರ ಪ್ರತೀ ನಾಲ್ಕು ದಿನಕ್ಕೊಮ್ಮೆ ಒಂದರಿಂದ ಒಂದೂವರೆ ಗಂಟೆಗಳ ಅವಧಿ ನೀರನ್ನು ಬಿಡಲಾಗುತ್ತದೆ. ಇಲ್ಲಿ ಬರುವ ನೀರು ಸಣ್ಣದಾಗಿ ಬರುವ ಕಾರಣ ಒಂದು ಬಿಂದಿಗೆ ತುಂಬಲು ಕನಿಷ್ಟ ಮೂರರಿಂದ ಐದು ನಿಮಿಷ ಬೇಕಾಗುತ್ತದೆ. ಇದರಿಂದಾಗಿ ಹೆಚ್ಚು ಎಂದರೆ ತಲಾ 12 ರಿಂದ 13 ಬಿಂದಿಗೆ ಮಾತ್ರ ನೀರು ಸಿಗುತ್ತದೆ.

ಈ ನೀರನ್ನು ನಾವು ಕುಡಿಯಲು ಮತ್ತು ಅಡುಗೆ ಮಾಡಲು ಬಳಸುತ್ತೇವೆ. ಇನ್ನು ಸ್ನಾನ ಮತ್ತು ಶೌಚಾಲಯದ ಬಳಕೆಗೆ, ಬಟ್ಟೆ ತೊಳೆಯಲು ಸನಿಹದ ಕೊಳವೆ ಬಾವಿಗೆ ಹೋಗಿ ನೀರು ತರಬೇಕಾಗಿದೆ.

ಇನ್ನಾದರೂ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿ ಕುಡಿಯುವ ನೀರನ್ನು ನಿವಾಸಿಗಳಿಗೆ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಈ ನಿವಾಸಿಗಳು ಮನವಿ ಮಾಡಿದ್ದಾರೆ.

- ಮೂರ್ತಿ.