ಪಾಲಿಬೆಟ್ಟ, ನ. 19: ಕಾಡಾನೆ ದಾಳಿಯಿಂದ ಮನೆ ಹಾನಿಯಾಗಿ ಅಗತ್ಯ ವಸ್ತುಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವತಿಯಿಂದ ಪಾತ್ರೆ ಹಾಗೂ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿ ನಿವಾಸಿ ಬೋಜ ಎಂಬವರ ಮನೆಯೊಳಗೆ ನುಗ್ಗಿ ಹಾನಿ ಪಡಿಸಿದ್ದಲ್ಲದೆ ಆಹಾರ ಪದಾರ್ಥಗಳನ್ನು ತಿಂದು ಮನೆಯಲ್ಲಿದ್ದ ವಸ್ತುಗಳನ್ನು ತುಳಿದು ನಾಶ ಮಾಡಿತ್ತು.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೋಜನ ಕುಟುಂಬಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳು ಹಾಗೂ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯ ಮೇಕೇರಿರ ಅರುಣ್ ಮಾತನಾಡಿ, ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಹದಿನೈದಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ನಿರಂತರ ಕಾಡು ಪ್ರಾಣಿಗಳ ಭಯದ ನಡುವೆ ಬದುಕು ಸಾಗಿಸುತ್ತಿರುವ ಹಾಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಲಾಗಿರುವ ಮನೆಗಳು ಅತ್ಯಂತ ಕಳಪೆಯಿಂದ ಕೂಡಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆಗಳನ್ನು ಪರಿಶೀಲಿಸಿ ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್, ಕಾರ್ಯದರ್ಶಿ ಮುತ್ತುರಾಜ್, ಸಿಬ್ಬಂದಿಗಳಾದ ಪಂಕಜಾ, ಉಷಾ ಸೇರಿದಂತೆ ಮತ್ತಿತರರು ಇದ್ದರು.