ಮಡಿಕೇರಿ, ನ. 17: ಕಳೆದ ಆರೇಳು ವರ್ಷಗಳಿಂದ ಸದಾ ಸದ್ದು ಮಾಡುತ್ತಿರುವ.., ಇದೀಗ ನ್ಯಾಯಾಲಯದ ಮೆಟ್ಟಿಲೇರಿರುವ ಮಡಿಕೇರಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಹಾಡಲು ಮಡಿಕೇರಿ ನಗರಸಭೆ ಮುಂದಾಗಿದೆ. ಕಸದ ರಾಶಿಯಿಂದಾಗಿ ಹರಿದ್ವರ್ಣದ ಬೆಟ್ಟ ಪ್ರದೇಶ ಗಬ್ಬೆದ್ದು ನಾರುತ್ತಿರುವುದರಿಂದ ನಗರದ ಹೊರ ವಲಯದಲ್ಲಿ ಕಸ ವಿಲೇವಾರಿ ಮಾಡಲು ಸೂಕ್ತವಾದ ಜಾಗ ಪರಿಶೀಲನೆ ಮಾಡಲಾಗಿದೆ. ಕಸ ಸಮಸ್ಯೆಯಿಂದಾಗಿ ನಲುಗಿ ಹೋಗಿದ್ದ ಸುಬ್ರಹ್ಮಣ್ಯನಗರ, ರೈಫಲ್‍ರೇಂಜ್, ವಿದ್ಯಾನಗರ, ಕನ್ನಿಕಾಬಡಾವಣೆ ನಿವಾಸಿಗಳ ‘ಎಸ್‍ಆರ್‍ವಿಕೆ’ ಸಂಘದ ಕೋರಿಕೆ ಮೇರೆಗೆ ಇಂದು ಸಂಜೆ ನಗರಸಭೆ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.ಕಳೆದ 2005 ರಿಂದ ಮಡಿಕೇರಿಯ ಕರ್ಣಂಗೇರಿ ವ್ಯಾಪ್ತಿಗೊಳಪಡುವ ಸ್ಟೋನ್ ಹಿಲ್ ಬಳಿಯ ಬೆಟ್ಟ ಪ್ರದೇಶದಲ್ಲಿ

(ಮೊದಲ ಪುಟದಿಂದ) ಕಸವನ್ನು ತಂದು ಸುರಿಯಲಾಗುತ್ತಿದೆ. ಕಸವಿಂಗಡಣೆ, ಗೊಬ್ಬರ ತಯಾರಿಕಾ ವ್ಯವಸ್ಥೆಗಳಿದ್ದರೂ, ಪರಿಣಾಮಕಾರಿಯಾಗಿ ಬಳಕೆಯಾಗದ ಹಿನ್ನೆಲೆಯಲ್ಲಿ ಕಸದ ರಾಶಿ ಬೆಳೆಯುತ್ತಾ ಆಸು-ಪಾಸಿನ ನಿವಾಸಿಗಳಿಗೆ ತೊಂದರೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಸಂಘವೊಂದನ್ನು ರಚಿಸಿಕೊಂಡು ಸಮಸ್ಯೆ ಇತ್ಯರ್ಥಕ್ಕಾಗಿ ರಾಜ್ಯ ಉಚ್ಚನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಕಸ ವಿಲೇವಾರಿ ಹಾಗೂ ಮಾಲಿನ್ಯ ತಡೆಗೆ ಕೈಗೊಂಡಿರುವ ಕ್ರಮದ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಹಾಗೂ ಕಸ ಹಾಕಲು ಪರ್ಯಾಯ ಜಾಗ ಗುರುತಿಸಿರುವ ಬಗ್ಗೆ ದಾಖಲೆ ಒದಗಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚನೆ ನೀಡಿತ್ತು.

ಆದರೆ; ಈ ಎರಡೂ ಇಲಾಖೆಗಳು ನ್ಯಾಯಾಲಯಕ್ಕೆ ಹಾಗೂ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ನ್ಯಾಯಾಲಯ ಮತ್ತೊಮ್ಮೆ ಎಚ್ಚರಿಕೆ ನೀಡಿ ಮಾಹಿತಿ ಸಲ್ಲಿಸುವಂತೆ ತಿಳಿಸಿದ್ದು, ಈ ಸಂಬಂಧ ತಾ. 25 ರಂದು ವಿಚಾರಣೆಯನ್ನು ನಿಗದಿಪಡಿಸಿದೆ. ಈ ನಡುವೆ ಇಂದು ಅಧಿಕಾರಿಗಳು ಸಮಸ್ಯೆಗೆ ಮುಕ್ತಿ ಕಾಣಿಸಲು ಪರ್ಯಾಯ ಜಾಗದ ಪರಿಶೀಲನೆ ನಡೆಸಿದ್ದಾರೆ.

ಮೊಣ್ಣಂಗೇರಿಯಲ್ಲಿ ಜಾಗ

ಪ್ರಸ್ತುತ ಕಸ ಸುರಿಯಲಾಗುತ್ತಿರುವ ಸ್ಟೋನ್‍ಹಿಲ್ ಪ್ರದೇಶದಿಂದ ಮುಂದಕ್ಕೆ ಸಾಗಿ ಒಂದೂವರೆ ಕಿ.ಮೀ. ದೂರದಲ್ಲಿ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಎರಡನೇ ಮೊಣ್ಣಂಗೇರಿಯಲ್ಲಿ ವಿಶಾಲವಾದ ಕಂದಾಯ ಇಲಾಖೆಗೆ ಸೇರಿದ ಸರಕಾರಿ ಜಾಗವಿದೆ. ವಿಶಾಲವಾದ ಸ್ಥಳವಾಗಿದ್ದು, ಸುತ್ತಮುತ್ತ ಯಾವುದೇ ಜನವಸತಿ ಇರುವುದಿಲ್ಲ. ಈ ಪ್ರದೇಶ ಕಸ ವಿಲೇವಾರಿಗೆ ಸೂಕ್ತವಾಗಿದೆ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ಕೇಳಿಬಂದಿದೆ. ಇಂದು ಸಂಜೆ ಎಸ್‍ಆರ್‍ವಿಕೆ ಸಂಘದ ಪ್ರಮುಖರಾದ ಮುಕ್ಕಾಟಿ ಸತೀಶ್ ಪೂಣಚ್ಚ, ಕಾಳಚಂಡ ಅಪ್ಪಣ್ಣ ಹಾಗೂ ನಾಳೆಯಂಡ ನಾಣಯ್ಯ ಅವರುಗಳು ನಗರಸಭಾ ಆಯುಕ್ತ ರಾಮ್‍ದಾಸ್ ಹಾಗೂ ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್, ನಗರಸಭಾ ಪರಿಸರ ನೈರ್ಮಲ್ಯ ವಿಭಾಗದ ಅಭಿಯಂತರೆ ರೀತು ಸಿಂಗ್, ಆರೋಗ್ಯ ವಿಭಾಗದ ಹರಿಣಿ, ಗಾಳಿಬೀಡು ಗ್ರಾಮ ಲೆಕ್ಕಿಗ ರುದ್ರಪ್ರಸನ್ನ ಇನ್ನಿತರ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದು ಜಾಗ ತೋರಿಸಿದ್ದಾರೆ. ಸದ್ಯದಮಟ್ಟಿಗೆ ನಗರದ ಹೊರಭಾಗದಲ್ಲಿರುವುದರಿಂದ ಹಾಗೂ ಜನವಸತಿ ಇಲ್ಲದಿರುವುದರಿಂದ ಜಾಗ ಸೂಕ್ತವಾದುದೆಂದು ಅಭಿಪ್ರಾಯಪಟ್ಟಿರುವ ಅಧಿಕಾರಿಗಳು, ಕಂದಾಯ ಇಲಾಖೆ ವತಿಯಿಂದ ಸರ್ವೆ ಕಾರ್ಯ ನಡೆಸಿ ಮುಂದಿನ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಜಾಗ ಸೂಕ್ತವಾದುದೆನಿಸಿ, ಸರಕಾರದ ಒಪ್ಪಿಗೆ ದೊರೆತಲ್ಲಿ ಮಡಿಕೇರಿಯ ಕಸದ ಗುಡ್ಡಕ್ಕೆ ಮುಕ್ತಿ ದೊರಕಬಹುದೇನೋ? ಇಲ್ಲವಾದಲ್ಲಿ ಇದೇ ಕಸದ ಗುಡ್ಡವೇ ತಾಳತ್‍ಮನೆ, ಸುಬ್ರಹ್ಮಣ್ಯನಗರ, ಮೊಣ್ಣಂಗೇರಿಗೂ ತಲುಪುವುದರಲ್ಲಿ ಅಚ್ಚರಿಯೇನಿಲ್ಲ...! -ಕುಡೆಕಲ್ ಸಂತೋಷ್