ಸೋಮವಾರಪೇಟೆ,ನ.17: ಜಿಲ್ಲೆಯ ವ್ಯಕ್ತಿಯೋರ್ವರು ತಮ್ಮ ಪತ್ನಿಯನ್ನು ಗುಂಡು ಹಾರಿಸಿ ಕೊಂದು ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೂಲತಃ ಮಡಿಕೇರಿ ತಾಲೂಕಿನ ಹಮ್ಮಿಯಾಲ ಗ್ರಾಮ ನಿವಾಸಿ ಪಳೆಯಂಡ ಕಾಳಪ್ಪ ಎಂಬವರೇ, ತಮ್ಮ ಪತ್ನಿ ಸುಮಿತ್ರಾ ಅವರನ್ನು ಗುಂಡು ಹಾರಿಸಿ ಕೊಂದು ತಾವೂ ಸಹ ಆತ್ಮಹತ್ಯೆಗೆ ಯತ್ನಿಸಿದವರು.ಪಳೆಯಂಡ ಕಾಳಪ್ಪ ಕುಟುಂಬ ಕೆಲ ದಶಕಗಳ ಹಿಂದೆ ಬೆಂಗಳೂರಿಗೆ ತೆರಳಿದ್ದು, ಬಸವೇಶ್ವರ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಎಟಿಎಂಗಳಿಗೆ ಹಣ ತುಂಬಿಸುವ ವಾಹನದಲ್ಲಿ ಗನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕಾಳಪ್ಪ ಅವರ ಕುಟುಂಬದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿದ್ದು, ನಿನ್ನೆ ದಿನ ಜಗಳ ವಿಕೋಪಕ್ಕೆ ತೆರಳಿದ್ದರಿಂದ ಮನೆಯಲ್ಲೇ ತನ್ನ ಪತ್ನಿಗೆ ಕೋವಿಯಿಂದ ಗುಂಡು ಹಾರಿಸಿದ್ದಾರೆ.
ಇದಾದ ನಂತರ ತಾನೂ ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗುಂಡೇಟಿನ ಸದ್ದು ಕೇಳಿ ನೆರೆಕರೆಯವರು ಸ್ಥಳಕ್ಕಾಗ ಮಿಸಿದ್ದು, ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
(ಮೊದಲ ಪುಟದಿಂದ) ಸ್ಥಳಕ್ಕಾಗಮಿಸಿದ ಬಸವೇಶ್ವರ ನಗರ ಪೊಲೀಸ್ ಇನ್ಸ್ಪೆಕ್ಟರ್ ಎರ್ರಿಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಸುಮಿತ್ರ ಹಾಗೂ ಕಾಳಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಾರ್ಗಮಧ್ಯೆ ಸುಮಿತ್ರ ಕೊನೆಯುಸಿರೆಳೆದಿದ್ದಾರೆ.
ಮೊನ್ನೆ ದಿನ ರಾತ್ರಿ ದಂಪತಿಗಳ ನಡುವೆ ಜೋರಾದ ಗಲಾಟೆ ನಡೆದಿದ್ದು, ಮಕ್ಕಳು ಆಗಮಿಸಿ ಜಗಳವನ್ನು ಬಿಡಿಸಿದ್ದಲ್ಲದೇ ಈರ್ವರಿಗೂ ಬುದ್ದಿವಾದ ಹೇಳಿ ತೆರಳಿದ್ದರು. ನಿನ್ನೆ ಬೆಳಿಗ್ಗೆ ಮತ್ತೆ ದಂಪತಿಗಳ ನಡುವೆ ಕಲಹ ಏರ್ಪಟ್ಟಿದ್ದು, 10.30ರ ಸುಮಾರಿಗೆ ಜಗಳ ವಿಕೋಪಕ್ಕೆ ತೆರಳಿ ದುರ್ಘಟನೆ ಸಂಭವಿಸಿದೆ.
ಮೃತೆ ಸುಮಿತ್ರ ಅವರು ಮೂವರು ಮಕ್ಕಳನ್ನು ಅಗಲಿದ್ದು, ಮೃತದೇಹವನ್ನು ಸ್ವಗ್ರಾಮ ಹಮ್ಮಿಯಾಲಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಹೊಟ್ಟೆಗೆ ಗುಂಡು ತಗುಲಿ ಗಂಭೀರ ಗಾಯಗೊಂಡಿರುವ ಕಾಳಪ್ಪ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಎರ್ರಿಸ್ವಾಮಿ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.