ಮಡಿಕೇರಿ, ನ. 17: ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ - ಸಕ್ರಮ ಸಮಿತಿಯ ಅಧ್ಯಕ್ಷರಾಗಿ ಶಾಂತೆಯಂಡ ರವಿಕುಶಾಲಪ್ಪ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. 80 ರ ದಶಕದಿಂದ ಭಾ.ಜ.ಪಾ.ದ ಸಕ್ರೀಯ ಕಾರ್ಯಕರ್ತ ರಾಗಿದ್ದ ರವಿಕುಶಾಲಪ್ಪ ಪಕ್ಷ ನೀಡಿದ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿ ನಂತರ ಕೊಡಗು ಜಿ.ಪಂ. ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಳೆದ ಸಾಲಿನಲ್ಲಿ ಭಾ.ಜ.ಪಾ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ನೇಮಕಗೊಂಡಿದ್ದರು. ಇದೀಗ ಅಕ್ರಮ ಸಕ್ರಮ ಸಮಿತಿಯಲ್ಲಿ ವಿಲೇವಾರಿಗೆ ಬಾಕಿಯಿರುವ ಸಾರ್ವಜನಿಕರ ಅರ್ಜಿಗಳ ವಿಲೇವಾರಿಯ ಜವಾಬ್ದಾರಿಯನ್ನು ರವಿಕುಶಾಲಪ್ಪ ನೇತೃತ್ವದ ಸಮಿತಿ ನಿಭಾಯಿಸಲಿದೆ. (ಮೊದಲ ಪುಟದಿಂದ) ಸಮಿತಿ ಕಾರ್ಯದರ್ಶಿಯಾಗಿ ತಾಲೂಕು ತಹಶೀಲ್ದಾರ್ - ಸದಸ್ಯರುಗಳಾಗಿ ಕವಿತಾ ಪ್ರಭಾಕರ್, ಮಿಟ್ಟು, ಸುಬ್ರಮ್ಮಣ್ಯ ಉಪಾಧ್ಯಾಯ ಇವರುಗಳನ್ನು ಸರಕಾರ ನೇಮಕ ಮಾಡಿದೆ.
ವೀರಾಜಪೇಟೆ ಕ್ಷೇತ್ರದ ಇತರ ಗ್ರಾ.ಪಂ.ಗೆ ಸಂಬಂಧಿಸಿದಂತೆ ಈ ಹಿಂದೆ ಕಾಡ್ಯಮಾಡ ಗಿರೀಶ್ ಗಣಪತಿ ಅವರನ್ನು ನೇಮಿಸಲಾಗಿದ್ದು, ಇದೀಗ ವೀರಾಜಪೇಟೆ ಕ್ಷೇತ್ರಕ್ಕೆ ಒಳಪಡುವ ಮಡಿಕೇರಿ ತಾಲೂಕಿನ ಗ್ರಾ.ಪಂ. ವ್ಯಾಪ್ತಿಗಳಿಗೆ ಸೀಮಿತವಾಗಿ ರವಿ ಕುಶಾಲಪ್ಪ ಅವರನ್ನು ನೇಮಕ ಮಾಡಿ ಕಂದಾಯ ಇಲಾಖೆಯ (ಭೂ ಮಂಜೂರಾತಿ) ಪೀಠಾಧಿಕಾರಿ ವಿಮಲಮ್ಮ ಸಿ. ಆದೇಶ ಹೊರಡಿಸಿದ್ದಾರೆ.