ವೀರಾಜಪೇಟೆ, ನ. 15: ವೀರಾಜಪೇಟೆಯಲ್ಲಿರುವ ಸರಕಾರಿ ಪದವಿ ಕಾಲೇಜಿನಲ್ಲಿ ಷರತ್ತುಗಳಿಗೆ ಬದ್ಧವಾಗಿ ಪದವಿ ತರಗತಿಗಳ ಆರಂಭಕ್ಕೆ ಸರಕಾರದ ಆದೇಶದಂತೆ ಸಿದ್ಧತೆ ನಡೆಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಟಿ.ಕೆ. ಬೋಪಯ್ಯ ತಿಳಿಸಿದ್ದಾರೆ.
ತಾ. 17 ರಂದು ಪದವಿ ತರಗತಿಗಳು ಆರಂಭವಾಗಲಿದ್ದು ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರ ಸಮ್ಮತಿ ಪತ್ರವನ್ನು ಹಾಗೂ ಆಸ್ಪತ್ರೆಯಿಂದ ಪಡೆದಿರುವ ಕೋವಿಡ್ ಪರೀಕ್ಷೆಯ ದೃಢೀಕರಣ ಪತ್ರವನ್ನು ಕಾಲೇಜಿನ ಟಾಸ್ಕ್ ಫೋರ್ಸ್ ಸಮಿತಿ ಮುಂದೆ ಹಾಜರುಪಡಿಸಬೇಕು. ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್ನ ಎಲ್ಲ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು ಬೋಪಯ್ಯ ತಿಳಿಸಿದರು.
ಕಾಲೇಜಿನ ಅಂತಿಮ ಪದವಿಯ ವಿವಿಧ ಕೋರ್ಸ್ಗಳಲ್ಲಿ ಒಟ್ಟು 170 ಮಂದಿ ವಿದ್ಯಾರ್ಥಿಗಳಿದ್ದು ತರಗತಿಗೆ ಹಾಜರಾಗುವವರನ್ನು ಕ್ರೋಢೀಕರಿಸಿ ಒಂದು ತರಗತಿಯಲ್ಲಿ 80ಮಂದಿ ವಿದ್ಯಾರ್ಥಿಗಳಿದ್ದರೆ ಶೇಕಡ 50ರಷ್ಟು ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೂರಲು ಅವಕಾಶ ನೀಡಲಾಗುವುದು. ತಾ. 16 ರಂದು ಎಲ್ಲ ಉಪನ್ಯಾಸಕರು, ಸಿಬ್ಬಂದಿಗಳು ಸೇರಿದಂತೆ ಒಟ್ಟು 17 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದರು. ತಾ. 17 ರಂದು ತರಗತಿಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದು ಬೋಪಯ್ಯ ಹೇಳಿದರು.
ಇದೀಗ ಮಂಗಳೂರು ವಿಶ್ವವಿದ್ಯಾನಿಲಯದ ನಿರ್ದೇಶನದಂತೆ ಷರತ್ತುಬದ್ಧ ತರಗತಿ ನಡೆಸಲು ಅವಕಾಶ ನೀಡಲಾಗಿದೆ.
ಸಂತ ಅನ್ನಮ್ಮ: ಸರಕಾರದ ಆದೇಶ, ಮಂಗಳೂರು ವಿಶ್ವ ವಿದ್ಯಾಲಯದ ನಿರ್ದೇಶನದಂತೆ ತಾ. 17 ರಂದು ಪದವಿ ತರಗತಿಗಳನ್ನು ಕೋವಿಡ್ ಷರತ್ತುಗೊಳಪಟ್ಟು ಪ್ರಾರಂಭಿಸಲಾಗುವುದು ಎಂದು ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಹೇಳಿದರು.
ಪದವಿ ತರಗತಿಗೆ ಸೀಮಿತಗೊಂಡಂತೆ ಒಟ್ಟು 250 ಮಂದಿ ವಿದ್ಯಾರ್ಥಿಗಳಿದ್ದು ಕೋವಿಡ್ ಷರತ್ತಿನಡಿ ಪ್ರತಿ ತರಗತಿಯಲ್ಲಿ 25 ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಅವಕಾಶ ನೀಡಲಾಗುವುದು. ತರಗತಿಗೆ ಪ್ರವೇಶಕ್ಕೆ ಮುನ್ನ ಪೋಷಕರ ಸಮ್ಮತಿ ಪತ್ರ, ಕೋವಿಡ್ನ ಧೃಢೀಕರಣ ಪತ್ರ, ಮಾಸ್ಕ್ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಕುಡಿಯುವ ನೀರು, ಆಹಾರವನ್ನು ತೆಗೆದುಕೊಂಡು ಬರಲು ಅವಕಾಶವಿದೆ. ಪ್ರತಿ ದಿನ ಎರಡು ವಿಷಯಗಳನ್ನು ತೆಗೆದುಕೊಳ್ಳಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದು ರೋನಿ ಕುಮಾರ್ ತಿಳಿಸಿದರು.
ಕಾಲೇಜಿನ ವತಿಯಿಂದ ಈಗಾಗಲೇ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೆಸೇಜ್ ಮಾಡಲಾಗಿದೆ. ಯಾವ ರೀತಿಯಲ್ಲಿ ತರಗತಿಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.