ಕನ್ನಡಪರ ಸಂಘಟನೆಗಳ ವಿರೋಧ

ಬೆಂಗಳೂರು, ನ. 15: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅನುದಾನ ನೀಡಿರುವುದನ್ನು ವಿರೋಧಿಸುತ್ತೇನೆ ಎಂದು ಸಾ.ರಾ. ಗೋವಿಂದ್ ಹೇಳಿದ್ದಾರೆ. ಸಿಎಂ ನಿರ್ಧಾರವನ್ನು ಖಂಡಿಸಿ ನಾಡಿದ್ದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತೇವೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿ ಎಂದು ಮನವಿ ಮಾಡಿದರು. ಬೇರೆ ರಾಜ್ಯಗಳಲ್ಲಿ ಭಾಷೆಯನ್ನು ಅಭಿವೃದ್ಧಿ ಮಾಡುವ ಕೆಲಸವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಆಗಲೇ ಇಲ್ಲ. ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ. 2020-21ರಲ್ಲಿ ಕನ್ನಡ ಅನುಷ್ಟಾನ ಮತ್ತು ಅಭಿವೃದ್ಧಿಗಾಗಿ ಪ್ರಯತ್ನ ಮಾಡೋಣ ಅಂತ ಸಿಎಂ ಹೇಳಿದ್ದರು, ಆದರೆ ಇಲ್ಲಿಯವರೆಗೆ 2 ಕೋಟಿ ಕೇಳಿದರೂ ಕನ್ನಡ ಅಭಿವೃದ್ಧಿಗೆ ಕೊಡುವುದಕ್ಕೆ ಆಗಲಿಲ್ಲ. ಆದರೆ ಮರಾಠ ಅಭಿವೃದ್ಧಿಗೆ 50 ಕೋಟಿ ಕೊಟ್ಟಿದ್ದಾರೆ ಎಂದು ಗುಡುಗಿದರು.

ದಕ್ಷಿಣ ಕನ್ನಡದಲ್ಲಿ ಅಕ್ರಮ ಗಣಿಗಾರಿಕೆ

ಮಂಗಳೂರು, ನ. 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲುಕೋರೆ, ಕಲ್ಲು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸಿಮೆಂಟ್ ತಯಾರಿಕೆ ಕಾರ್ಖಾನೆಗಳಿಗೆ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗಗೊಂಡಿದೆ. ಗಣಿಗಾರಿಕೆ ಮತ್ತು ಭೂಗರ್ಭ ಇಲಾಖೆ (ಎಂಜಿಡಿ) ಆರ್‍ಟಿಐಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದು, 12 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್‍ಗಳಷ್ಟು ಎ ಗ್ರೇಡ್ ಕಲ್ಲುಕೋರೆಯನ್ನು ಸಾಗಾಟ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದಲ್ಲಿ ಸರ್ವೆ ನಂಬರ್ 141/1ಂಯಲ್ಲಿ 6.76 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆದಿದೆ. ಇದು ಕಳೆದ ಆಗಸ್ಟ್ 14 ರಿಂದ ಸೆಪ್ಟೆಂಬರ್ 30ರ ಮಧ್ಯೆ ನಡೆದಿದ್ದು, ಗಣಿಗಾರಿಕೆಗೆ ಅನುಮತಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಡಿದ್ದಾರೆ ಎಂದು ಆರ್‍ಟಿಐಯಲ್ಲಿ ತಿಳಿದುಬಂದಿದೆ.

ನವದೆಹಲಿಯಲ್ಲಿ ಕೊರೊನಾ ಆರ್ಭಟ

ನವದೆಹಲಿ, ನ. 15: ದಿನ ಕಳೆಯುತ್ತಿದ್ದಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹಾಮಾರಿ ಕೊರೊನಾ ಆರ್ಭಟ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಸಭೆ ಕರೆದಿದ್ದಾರೆ. ಇಂದು ಸಂಜೆ ದೆಹಲಿಯ ಉತ್ತರ ಬ್ಲಾಕ್‍ನಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರೆ ಉನ್ನತಾಧಿಕಾರಿಗಳು ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ. ಕೊರೊನಾ ಸೋಂಕು ಹೆಚ್ಚಳದ ಜೊತೆ ಜೊತೆಗೆ ದೀಪಾವಳಿ ಹಬ್ಬದ ನಡುವಲ್ಲೇ ದೆಹಲಿಯಲ್ಲಿ ವಾಯು ಗುಣಮಟ್ಟ ಕೂಡ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಈಗಾಗಲೇ ದೆಹಲಿಯಲ್ಲಿ ಪಟಾಕಿಗಳ ಮೇಲೆ ನಿಷೇಧ ಹೇರಲಾಗಿದೆ. ಆದರೂ, ನಿಯಮ ಉಲ್ಲಂಘನೆ ಮಾಡುತ್ತಿರುವ ಜನರು ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ಈ ಹಿನ್ನೆಲೆ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿ ಹೋಗಿದೆ. ದೆಹಲಿ ಕೊರೊನಾ ನಿರ್ವಹಣೆ ವಿಚಾರದಲ್ಲಿ ಅಮಿತ್ ಶಾ ಅವರು ಎರಡನೇ ಬಾರಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಜೂನ್ ಹಾಗೂ ಜುಲೈ ತಿಂಗಳಿನಲ್ಲಿಯೂ ಸರಣಿ ಸಭೆಗಳನ್ನು ನಡೆಸಿದ್ದರು.

ಚಂದನದಲ್ಲಿ ಸಂವೇದ ಇ-ಕ್ಲಾಸ್ ಕಲಿಕೆ

ಬೆಂಗಳೂರು, ನ. 15: ಕೊರೊನಾ ವೈರಸ್‍ನಿಂದ ಶಾಲೆಗಳು ಆರಂಭವಾಗದಿರುವ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 5,6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ತಾ. 23 ರಿಂದ ದೂರದರ್ಶನ ಚಂದನದಲ್ಲಿ ಸಂವೇದ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮವನ್ನು ಆರಂಭಿಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8 ಗಂಟೆಯಿಂದ 9.30 ರವರೆಗೆ, ಸಾಯಂಕಾಲ 5.30 ರಿಂದ 6 ಗಂಟೆಯವರೆಗೆ ಪ್ರತಿದಿನ 4 ಪಾಠಗಳನ್ನು ಪ್ರತಿ ವಿಷಯ 30 ನಿಮಿಷಗಳವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 5,6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ತರಗತಿಗಳ ವೀಡಿಯೋ ಪಾಠಗಳನ್ನು ಮಾಡಲಾಗುತ್ತದೆ.

ಶಬರಿಮಲೆ ದೇವಾಲಯದಲ್ಲಿ ಪೂಜೆ ಆರಂಭ

ತಿರುವನಂತಪುರ, ನ. 15: ಈ ವರ್ಷದ ಮಂಡಲ ಪೂಜಾ ಉತ್ಸವಕ್ಕಾಗಿ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಭಾನುವಾರ ತೆರೆಯಲಾಗಿದೆ. ಇಂದು ಸಾಯಂಕಾಲ 5 ಗಂಟೆಗೆ ದೇವಸ್ಥಾನದ ಮುಖ್ಯ ಅರ್ಚಕ ಎ.ಕೆ. ಸುದೀರ್ ನಂಬೂದರಿ ಅವರು ದೇವಸ್ಥಾನದ ಗರ್ಭಗುಡಿಯನ್ನು ತಂತ್ರಿಗಳಾದ ಕಂಡರಾರು ರಾಜೀವ ಅವರ ಸಮ್ಮುಖದಲ್ಲಿ ತೆರೆದರು. ಶಬರಿಮಲೆಯ ನೂತನ ಮುಖ್ಯ ಅರ್ಚಕ ವಿ.ಕೆ. ಜಯರಾಜ್ ಪೆÇಟ್ಟಿ ಮತ್ತು ಮಲಿಕಾಪ್ಪುರಂ ಮುಖ್ಯ ಅರ್ಚಕ ಎಂ.ಎನ್. ರಾಜಿಕುಮಾರ್ ದೇವಸ್ಥಾನಕ್ಕೆ ಆಗಮಿಸಿದ್ದರು. ಸೋಮವಾರ ವೃಶ್ಚಿಕದ ಮೊದಲ ದಿನ ನೂತನ ಮುಖ್ಯ ಅರ್ಚಕ ದೇವಸ್ಥಾನದಲ್ಲಿ ಸಾಂಪ್ರದಾಯಗಳನ್ನು ನೆರವೇರಿಸಲಿದ್ದಾರೆ. ಕೋವಿಡ್-19 ನಿಯಮಗಳು ಜಾರಿಯಲ್ಲಿರುವುದರಿಂದ ದಿನಕ್ಕೆ ಸಾವಿರ ಭಕ್ತರಿಗೆ ಮಾತ್ರ ಒಳಗೆ ಹೋಗಲು ಅವಕಾಶವಿರುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಭಕ್ತಾದಿಗಳನ್ನು ದೇವಸ್ಥಾನದ ಒಳಗೆ ಹೋಗಲು ಅವಕಾಶ ಮಾಡಿಕೊಡಲಾಗುವುದು. ಹೈಕೋರ್ಟ್ ಆದೇಶದ ಪ್ರಕಾರ, 750 ಯಾತ್ರಿಕರಿಗೆ ನಿಲಕ್ಕಲ್‍ನಲ್ಲಿ ಕಡಿಮೆ ದಿನಗಳ ಮಟ್ಟಿಗೆ ಉಳಿದುಕೊಳ್ಳಲು ಸೌಕರ್ಯವಿದೆ. ಆದರೆ ಪಂಪಾ ಮತ್ತು ಸನ್ನಿದಾನದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಅವಕಾಶವಿಲ್ಲ ಎಂದು ಕೇರಳ ಮುಜರಾಯಿ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಸಾಧಾರಣಾ ಮಳೆಯಾಗುವ ಸಾಧ್ಯತೆ

ಬೆಂಗಳೂರು, ನ. 15: ರಾಜ್ಯದಲ್ಲಿ ಈಶಾನ್ಯ ಮುಂಗಾರು ಚುರುಕಾಗಿದ್ದು, ಮೋಡ ಕವಿದ ವಾತಾವರಣ ಜೊತೆಗೆ ಅನೇಕ ಕಡೆ ಅಸಾಧಾರಣಾ ಮಳೆಯಾಗುವ ಸಾಧ್ಯತೆಗಳಿವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಾಗೂ ಪೂರ್ವ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾತಾವರಣದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದಾಗಿ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ತಣ್ಣನೆಯ ಗಾಳಿ ಬೀಸುತ್ತಿದೆ. ಇದರಿಂದ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ ಎಂದೂ ಹವಾಮಾನ ಇಲಾಖೆ ತಿಳಿಸಿದೆ.