ಗೋಣಿಕೊಪ್ಪಲು, ನ. 15: ದೇಶ ಅಭಿವೃದ್ಧಿಯ ಪಥದಲ್ಲಿದೆ. ಗುಡಿಸಲು ಮುಕ್ತ, ಬಯಲು ಶೌಚಾಲಯ ಮುಕ್ತ ರಾಷ್ಟ್ರ ಮಾಡಲಾಗುತ್ತಿದೆ ಎಂದು ಸುಳ್ಳಿನ ಅರಮನೆ ಕಟ್ಟುತ್ತಿರುವ ಜನಪ್ರತಿನಿಧಿಗಳನ್ನು ಈ ಹಾಡಿಯ ಸ್ಥಿತಿಗತಿ ಅಣಕಿಸುವಂತಿದೆ.ವೀರಾಜಪೇಟೆ ತಾಲೂಕು ಕಾನೂರು ಸಮೀಪದ ಬೊಮ್ಮಾಡುವಿನ ಹಾಡಿಯಲ್ಲಿ 150 ಜೇನುಕುರುಬ ಕುಟುಂಬಗಳು ನೆಲೆಸಿವೆ. ಬಹುತೇಕ ಮನೆಗಳು ಜನತಾ ಮನೆಗಳಾಗಿ ಈ ಹಿಂದೆಯೇ ಸರ್ಕಾರ ಇವರಿಗೆ ನಿರ್ಮಿಸಿಕೊಟ್ಟಿದೆ. ಈಗ ಅವುಗಳೆಲ್ಲ ಕುಸಿದು ಬೀಳುವ ಹಂತ ತಲುಪಿವೆ. ಆದರೂ ಇಲ್ಲಿನ ಜನತೆ ಬೇರೆ ಮಾರ್ಗವಿಲ್ಲದೆ ಜೀವಭಯದಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ. ಇವುಗಳನ್ನು ದುರಸ್ಥಿಪಡಿಸಿ ಕೊಡಬೇಕಾದ ಪಂಚಾಯ್ತಿ ಇತ್ತ ಗಮನ ಹರಿಸದೆ ಅದೆಷ್ಟೋ ವರ್ಷಗಳೇ ಕಳೆದು ಹೋಗಿವೆ. ಕೂಲಿಯನ್ನೇ ನಂಬಿರುವ ಈ ಜನರಿಗೆ ಮನೆ ಕುಸಿದು ಬಿದ್ದರೂ ಅದನ್ನು ಸರಿಪಡಿಸಿಕೊಳ್ಳಲಾಗದ ದಯನೀಯ ಸ್ಥಿತಿ ಬಂದೊದಗಿದೆ.150 ಕುಟುಂಬಗಳಿಗೆ ಹತ್ತು ವರ್ಷಗಳ ಹಿಂದೆ ವಿದ್ಯುತ್ ಸೌಕರ್ಯ ನೀಡಿ ಪ್ರತಿ ಮನೆಗಳಿಗೆ ಎರಡು ವಿದ್ಯುತ್ ಬಲ್ಬ್‍ಗಳು ಉರಿಯುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ಇಲಾಖೆಯು ಇಲ್ಲಿಂದ ವಿದ್ಯುತ್ ಸಂಪರ್ಕವನ್ನು ನಿಲ್ಲಿಸಿ ವಿದ್ಯುತ್ ಕಂಬಗಳಲ್ಲಿದ್ದ ತಂತಿಗಳನ್ನು ತೆರವುಗೊಳಿಸಿ ವಿದ್ಯುತ್ ಇಲ್ಲದಂತೆ ಮಾಡಿದೆ. ಈ ಹಾಡಿಯಲ್ಲಿ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಲಕ್ಷಾಂತರ ಹಣವನ್ನು ವೆಚ್ಚಮಾಡಿ ಬೃಹತ್ ನೀರಿನ ಟ್ಯಾಂಕ್ ಅನ್ನು ನಿರ್ಮಿಸಿದ್ದರೂ ಮನೆಗಳ ಸಮೀಪ ಅಳವಡಿಸಿರುವ ಟ್ಯಾಂಕ್‍ಗಳಿಗೆ ಇಲ್ಲಿಯ ತನಕ ನೀರು ಸರಬರಾಜು ಆಗಿಯೇ ಇಲ್ಲ. ಪಿಆರ್‍ಇಡಿ ಕುಡಿಯುವ ನೀರಿನ ಯೋಜನೆಯಡಿ ಲಕ್ಷಾಂತರ ಹಣವನ್ನು ಇದಕ್ಕಾಗಿ ವಿನಿಯೋಗಿಸಲಾಗಿದೆ. ಆದರೆ ಈ ಯೋಜನೆಯಿಂದ ಕುಡಿಯುವ ನೀರು ನೀಡಬೇಕಾದ ಇಲಾಖೆ ಮೌನಕ್ಕೆ ಜಾರಿದೆ. ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಲೇ ವರ್ಷಗಳು ಕಳೆದಿವೆ. ಇನ್ನು ಕೂಡ ಈ ಬೃಹತ್ ಟ್ಯಾಂಕಿಗೆ ನೀರು ಹಾಯಿಸುವ ಪ್ರಯತ್ನ ನಡೆದಿಲ್ಲ. ಸರ್ಕಾರದ ಯೋಜನೆಯನ್ನು ನಾಮಕಾವಸ್ಥೆಗೆ ಅನುಷ್ಠಾನಕ್ಕೆ ತಂದಿರುವ ಅಧಿಕಾರಿಗಳು ಇತ್ತ ಮುಖ ಮಾಡದಿರುವುದರಿಂದ ಇಂತಹ ಯೋಜನೆಗಳು ಹಳ್ಳ ಹಿಡಿಯುತ್ತಿವೆ.

ಬೀದಿ ದೀಪದ ವ್ಯವಸ್ಥೆಯಿಲ್ಲ, ಶೌಚಾಲಯ ಮೊದಲೇ ಇಲ್ಲ. ದಿನನಿತ್ಯದ ಕೂಲಿ ಕೆಲಸ ಮಾಡಿ ಬಂದ ಹಾಡಿಯ ಮಹಿಳೆಯರು ಮನೆಗೆ ಅವಶ್ಯವಿರುವ ನೀರನ್ನು ತರಲು ಹಾಡಿಯಲ್ಲಿರುವ ಬಾವಿಯ ಬಳಿ ತೆರಳಬೇಕಾಗಿದೆ. ಮನೆಯ ಸಮೀಪ ಟ್ಯಾಂಕ್‍ಗಳನ್ನು ನಿರ್ಮಿಸಿ ನೀರು ಸರಬರಾಜು ಮಾಡಬೇಕಾದ ಪಂಚಾಯಿತಿ; ಈ ಹಾಡಿಗೂ ಪಂಚಾಯಿತಿಗೂ

(ಮೊದಲ ಪುಟದಿಂದ) ಸಂಬಂಧವೇ ಇಲ್ಲ ಎಂಬಂತೆ ಮೌನ ವಹಿಸಿದೆ. ಸರ್ಕಾರದ ಕೋಟ್ಯಾಂತರ ಹಣವನ್ನು ಗಿರಿಜನರ ಕಲ್ಯಾಣಕ್ಕಾಗಿ ಬಳಕೆ ಮಾಡುತ್ತೇವೆ ಎಂದು ಹಣವನ್ನು ಬಿಡುಗಡೆಗೊಳಿಸಿಕೊಂಡು ಬೃಹತ್ ನೀರಿನ ಟ್ಯಾಂಕ್‍ಗಳನ್ನು ನಿರ್ಮಿಸಿ ಇದರಿಂದ ಗಿರಿಜನರ ಹೆಸರಿನಲ್ಲಿ ಬರುವ ಹಣವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಜೇನು ಕುರುಬ ಜನಾಂಗದ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯ ಧೋರಣೆಯನ್ನು ಬಳಸಿಕೊಂಡು ಪ್ರಮುಖ ಏಜೆನ್ಸಿಗಳು ಕೋಟ್ಯಾಂತರ ಹಣವನ್ನು ಮೇಲ್ಮಟ್ಟದಲ್ಲಿಯೇ ಬಿಡುಗಡೆ ಗೊಳಿಸಿಕೊಂಡು ನಂತರ ಇದನ್ನು ಹಂತ ಹಂತವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು. ಇಂತಹ ಯೋಜನೆಗಳಿಂದ ಸಾಬೀತಾಗಿದೆ.

ತಲೆಯ ಮೇಲೊಂದು ಬೆಚ್ಚನೆಯ ಸೂರಿಲ್ಲದಿರುವುದರಿಂದ ಇಲ್ಲಿಯ ಜನರ ಆರೋಗ್ಯವೂ ಕ್ಷೀಣಿಸಿದೆ. ಬಹಳ ಮಂದಿ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. 70 ವರ್ಷಗಳಿಂದ ಮತದಾನ ಮಾಡುತ್ತಾ ಬರುತ್ತಿರುವ ಈ ಹಾಡಿಯ ಜನತೆಗೆ ಸರ್ಕಾರದ ಸೌಲಭ್ಯವೆಂಬುದು ಮರೀಚಿಕೆಯಾಗಿದೆ. ಪ್ರತಿ ಚುನಾವಣೆಯಲ್ಲಿಯೂ ಮತ ಪಡೆಯುವ ನಮ್ಮ ಜನಪ್ರತಿನಿಧಿಗಳು ನಂತರ ಇತ್ತ ಗಮನ ಹರಿಸದಿರುವು ದರಿಂದ ಇಂತಹ ಬೃಹತ್ ಯೋಜನೆಗಳ ಹೆಸರಿನಲ್ಲಿ ಹಣ ಲೂಟಿಯಾಗುತ್ತಿದೆ.

ಪ್ರಮುಖವಾಗಿ ಗಿರಿಜನರ ಅಭಿವೃದ್ಧಿಗಾಗಿ ಸರ್ಕಾರವು ಗಿರಿಜನ ಕಲ್ಯಾಣ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿ ಅನುಭವಿ ಅಧಿಕಾರಿಗಳನ್ನು ನೇಮಿಸುವ ಮೂಲಕ ಗಿರಿಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಬಿಡುಗಡೆಗೊಳಿಸುತ್ತಿದೆ. ವಿಪರ್ಯಾಸ ವೆಂಬಂತೆ ಸರ್ಕಾರದ ದೊಡ್ಡ ದೊಡ್ಡ ಯೋಜನೆಗಳು ಗಿರಿಜನ ಕಲ್ಯಾಣ ಅಭಿವೃದ್ಧಿಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ನಡೆಯುತ್ತಿದೆ. ಇದರಿಂದ ಪ್ರಮುಖ ಯೋಜನೆಗಳ ಮೇಲೆ ಹಿಡಿತ ಸಾಧಿ ಸಲು ಗಿರಿಜನ ಕಲ್ಯಾಣ ಯೋಜನೆಯ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

ಇಲಾಖೆಯ ಮೂಲಕವೇ ಯೋಜನೆಗಳು ಕಾರ್ಯಾರಂಭ ಗೊಂಡಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಅವಕಾಶ ವಿದೆ. ಯೋಜನೆಗಳು ಸಮರ್ಪಕವಾಗಿ ಬಳಕೆಯಾಗದಿದ್ದಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಬಹುದು, ಕ್ರಮಕ್ಕೆ ಮುಂದಾಗಬಹುದು. ಇಂತಹ ಅಧಿಕಾರಿಗಳು ಜಿಲ್ಲಾ ಪಂಚಾಯ್ತಿ, ತಾ.ಪಂ. ಸಭೆಗಳಲ್ಲಿ ಉಪಸ್ಥಿತರಿರುವುದ ರಿಂದ ಜನಪ್ರತಿನಿಧಿಗಳಿಗೂ ಇವರ ಬಗ್ಗೆ ಪ್ರಶ್ನಿಸುವ ಅವಕಾಶವಿದೆ. ಈ ನಿಟ್ಟಿನಲ್ಲಿ ಮುಂದಿನ ಯೋಜನೆಗಳು ಇಲಾಖೆಯ ಮೂಲಕವೇ ಅನುಷ್ಠಾನ ಗೊಂಡಲ್ಲಿ ಮಾತ್ರ ಗಿರಿಜನರ ಕಲ್ಯಾಣಾಭಿವೃದ್ಧಿ ಸಾಧ್ಯವಾಗಲಿದೆ.

-ಹೆಚ್.ಕೆ. ಜಗದೀಶ್