ಬರೆದರು... ಬರೆದರು... ಬರೆಯುತ್ತಲೇ ಇದ್ದರು...

ಬರೆದಂತೆ ಬದುಕಲಿಲ್ಲ... ಬದುಕಿದ್ದನ್ನೇ ಬರೆದರು...

ಲಕ್ಷಗಟ್ಟಲೆ ಪುಟ ಬರೆದರು... ಕೋಟಿಗಟ್ಟಲೆ ಹಣವನ್ನು ಅಭಿಮಾನಿಗಳಂತೆಯೇ ಸಂಪಾದಿಸಿದರು...

ಇಷ್ಟೊಂದು ಬರೆಯಲು ಸಾಧ್ಯವೇ ಎಂಬಂತೆ ಬರೆದರು...

ಹೀಗೆ ಯಾರಿಂದಲೂ ಬರೆಯಲು ಸಾಧ್ಯವಿಲ್ಲ ಎಂಬಂತೆ ಬರೆದುಕೊಂಡೇ ಇದ್ದರು. ಬರೆದದ್ದು ಸಾಕು ಎಂದು ಅವರಿಗೆ ಅನ್ನಿಸಲಿಲ್ಲ. ಓದಿದ್ದು ಸಾಕಿನ್ನು ಎಂದು ಓದಿದವರಿಗೂ ಅನಿಸಲಿಲ್ಲ.

ಅತ್ಯಂತ ಪ್ರತಿಭಾವಂತ ಬರಹಗಾರ ಯಾರಿಗೂ ಹೇಳದೇ, ಯಾರನ್ನೂ ಕೇಳದೇ ಮತ್ತೆ ಬಾರದ ಲೋಕಕ್ಕೆ ತೆರಳಿದ ಮೇಲೆ ಅವರು ಬರೆದದ್ದು ಮಾತ್ರ ಕಾಲಾಂತರಗಳಿಗೂ ಜೀವಂತ... ಅದುವೇ ಬರಹಗಾರನ ಶಕ್ತಿ.

ಇವರು... ರವಿ ಬೆಳಗೆರೆ...

...

ಮೊಬೈಲ್ ಇಲ್ಲದಿದ್ದ, ಫೇಸ್‍ಬುಕ್ ತೆರೆದಿರದಿದ್ದ ದಿನಗಳಲ್ಲಿ ಕನ್ನಡದ ಓದುಗರಿಗೆ ಹಾಯ್ ಬೆಂಗಳೂರು ಎಂಬ ಕಪ್ಪುಬಿಳುಪಿನ ಟ್ಯಾಬ್ಯಾಲಾಯ್ಡ್ ಮೂಲಕ ಓದಿನ ಹುಚ್ಚು ಹಿಡಿಸಿದ ಕೀರ್ತಿ ರವಿಬೆಳಗೆರೆಯವರದ್ದು. ತನ್ನದು ಕರಿ ಸುಂದರಿ ಎಂದೇ ಹಾಸ್ಯ ಮಾಡಿಕೊಳ್ಳುತ್ತಿದ್ದ ರವಿ ಬೆಳಗೆರೆ ತನ್ನ ಹಾಯ್ ಬೆಂಗಳೂರನ್ನು ಕನ್ನಡದ ವಿಶಿಷ್ಟ ವಾರಪತ್ರಿಕೆಯಾಗಿಸಿದರು. ತನ್ನದೇ ಬದುಕಿನ ಪುಟಗಳನ್ನು ಖಾಸ್ ಬಾತ್ ಅಂಕಣದ ಮೂಲಕ ಖುಲ್ಲಂಖುಲ್ಲಾ ತೆರೆದಿಟ್ಟರು. ಬ್ರಾಹ್ಮಣನಾದರೂ ತಾನು ಮಾಂಸಪ್ರಿಯ, ಮದ್ಯ ಸೇವಿಸುತ್ತೇನೆ ಎಂದು ಬರೆದರು. ಹೆಣ್ಣಿನೊಂದಿಗಿನ ಸಾಂಗತ್ಯದ ಬಗ್ಗೆ ಹೇಳಿಕೊಂಡರು. ಹೆಂಡ ಕುಡಿದು ಚರಂಡಿಯಲ್ಲಿ ಬಿದ್ದಿರುತ್ತಿದ್ದೆ ಎಂದೂ ರಹಸ್ಯವೇ ಇಲ್ಲದಂತೆ ಬದುಕಿನ ಪುಟ ತೆರೆದಿಟ್ಟರು. ತಾನು ಕಚೇರಿಯಲ್ಲಿಯೇ ಬರೆಯುತ್ತಾ ಕುಳಿತಿರುತ್ತಿದ್ದೆ. ಮನೆಗೆ ದಿನಗಟ್ಟಲೆ ಹೋಗಲಾಗುತ್ತಿರಲಿಲ್ಲ. ಹೀಗಾಗಿ ಕಚೇರಿ ಸಿಬ್ಬಂದಿಯನ್ನೇ ಎರಡನೇ ಪತ್ನಿಯಾಗಿ ಸ್ವೀಕರಿಸಿದೆ. ಏನ್ ತಪ್ಪು ಎಂದು ಪ್ರಶ್ನಿಸಿದರು.

...

ಕನ್ನಡ ಪತ್ರಿಕೋದ್ಯಮದ ಪಾಲಿಗೆ ಹೊಸದಾಗಿದ್ದ ಭೂಗತಲೋಕದ ಬಗ್ಗೆ ವರ್ಷಗಟ್ಟಲೆ ಹಾಯ್ ಬೆಂಗಳೂರಿನಲ್ಲಿ ಬರೆದರು. ಅನೇಕ ರೌಡಿಗಳು, ಡಾನ್‍ಗಳ ಕತ್ತಲೆಕೂಪದ ಜೀವನದ ಬಗ್ಗೆ ಹೊರಪ್ರಪಂಚಕ್ಕೆ ತೆರೆದಿಟ್ಟರು. ಅಯ್ಯೋ... ಇವರ ಬದುಕು ಹೀಗೂ ಇದೆಯಾ ಎಂದು ಅಚ್ಚರಿಗೊಳ್ಳುವಂತೆ ಅಂಡರ್ ವಲ್ರ್ಡ್ ಬಗ್ಗೆ ಸಾವಿರಗಟ್ಟಲೆ ಪುಟಗಳನ್ನು ಬರೆದರು.

ಎಷ್ಟೊಂದು ತನಿಖಾ ವರದಿಗಳು... ಪ್ರತೀ ಜಿಲ್ಲೆಯ ಅಪರಾಧ ಲೋಕದ ಬಗ್ಗೆಯೂ ಬೆಂಗಳೂರಿನಲ್ಲಿ ಕುಳಿತ ರವಿ ಬೆಳಗೆರೆಗೆ ಮಾಹಿತಿ ಇತ್ತು. ಅವರ ವರದಿಗಾರ ಸುದ್ದಿ ಕಳುಹಿಸುವ ಮೊದಲೇ ವರದಿಗಾರನಿಗೂ ತಿಳಿದಿರದಿದ್ದ ಸಂಗ್ರಹಿಸಿದ ಸುದ್ದಿಯನ್ನು ಅವನಿಗೇ ನೀಡಿ ಕಕ್ಕಾಬಿಕ್ಕಿಯಾಗಿಸುತ್ತಿದ್ದರು. ಪೆÇಲೀಸ್ ಇಲಾಖೆಯಲ್ಲಿ ಅದ್ಭುತವಾದ ಸಂಪರ್ಕವನ್ನು ರವಿ ಬೆಳಗೆರೆ ಸಾಧಿಸಿದ್ದರು.

ಜಯಂತ್ ಕಾಯ್ಕಿಣಿ, ಯೋಗರಾಜ ಭಟ್, ಜೋಗಿ, ಉದಯ ಮರಕಿಣಿ, ಆಲೂರು ಚಂದ್ರಶೇಖರ್, ನಾಗತಿಹಳ್ಳಿ ಚಂದ್ರಶೇಖರ್... ಹೀಗೆ ಅದೆಷ್ಟೊಂದು ಜನರಿಂದ ಹಾಯ್ ಬೆಂಗಳೂರಿಗೆ ರವಿ ಬೆಳಗೆರೆ ಅಂಕಣ ಬರೆಸುತ್ತಿದ್ದರು.

.....

ಕಾರ್ಗಿಲ್ ಹುತಾತ್ಮರಿಗೆ ನೆರವು

ಮಡಿವಂತರ ಪಾಲಿಗೆ ಹಾಯ್ ಬೆಂಗಳೂರಿನ ಬಗ್ಗೆ ತೀವ್ರ ತಕರಾರಿತ್ತು. ಕ್ರೈಂ ಬಗ್ಗೆ ಕ್ಯಾತೆಯಿತ್ತು. ರವಿ ಜೀವನಶೈಲಿಯ ಬಗ್ಗೆ ಆಕ್ಷೇಪಗಳಿತ್ತು. ಈ ಪತ್ರಿಕೆ ಓದಿದರೆ ಮಕ್ಕಳು ಉದ್ಧಾರವಾದ ಹಾಗೇ ಎಂಬ ಆಕ್ರೋಷವಿತ್ತು.

ಹಾಗೆಂದು, ಇಂಥವುಗಳ ಬಗ್ಗೆ ಕ್ಯಾರ್ ಮಾಡಿದ್ದಾದರು ಯಾರು? ಲಕ್ಷಕ್ಕೂ ಮೀರಿದ ಪ್ರಸಾರ ಸಂಖ್ಯೆಯಿದ್ದ ಹಾಯ್ ಬೆಂಗಳೂರು ಕನ್ನಡದ ನಂಬರ್ 1 ವಾರಪತ್ರಿಕೆಯಾಗಿತ್ತು. ಕಾರ್ಗಿಲ್‍ನಲ್ಲಿ ಹುತಾತ್ಮರಾದ ಸೈನಿಕರಿಗಾಗಿ ಹಾಯ್ ಬೆಂಗಳೂರು ವತಿಯಿಂದ ಪರಿಹಾರ ನಿಧಿ ಸ್ಥಾಪಿಸಿದಾಗ ದೇಶದ ಮೂಲೆಮೂಲೆಯಿಂದ ಈ ನಿಧಿಗೆ ಸಾವಿರಾರು ರೂಪಾಯಿಗಳು ಸಂಗ್ರಹವಾದವು.

ಅಫ್‍ಘಾನಿಸ್ತಾನದ ಜನಾಂಗೀಯ ಕದನದ ಪರಿಸ್ಥಿತಿ ಬಗ್ಗೆಯೂ ಆ ದೇಶಕ್ಕೇ ಹೋಗಿ ವರದಿ ಮಾಡಿದರು. ಕಳೆದ ವರ್ಷ ಪುಲ್ವಾಮದಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದಕರು ಭಾರತೀಯ ಸೈನಿಕರನ್ನು ಬಲಿತೆಗೆದುಕೊಂಡ ಸಂದರ್ಭ ಪುಲ್ವಾಮಕ್ಕೂ ರವಿ ತೆರಳಿದ್ದರು.

...

ಬರವಣಿಗೆಗೇ ಸೀಮಿತವಾಗಿರಲಿಲ್ಲ...

ಬರವಣಿಗೆಗೆ ಮಾತ್ರ ರವಿಬೆಳಗೆರೆ ಎಂಬ ಧೈತ್ಯ ಸೀಮಿತವಾಗಿರಲಿಲ್ಲ. ಜೊತೆಗೆ ಪ್ರಾರ್ಥನಾ ಎಂಬ ಶಾಲೆ ಪ್ರಾರಂಭಿಸಿ 8 ಸಾವಿರ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಕಾರಣರಾದರು. ಈ ಟಿವಿಯಲ್ಲಿ ಎಂದೂ ಮರೆಯದ ಹಾಡು ಎಂಬ ಕಾರ್ಯಕ್ರಮದ ಮೂಲಕ ಸಂಗೀತ ಲೋಕವನ್ನೇ ಹೊಸ ರೀತಿಯಲ್ಲಿ ತೆರೆದಿಟ್ಟರು. ಹಿಂದಿ, ಉರ್ದು ಹಾಡುಗಳ ಬಗ್ಗೆ ರವಿಯ ಜ್ಞಾನ ಅಪಾರವಾಗಿತ್ತು. ಎಫ್.ಎಂ. ನಲ್ಲಿ ಮುಂಜಾನೆ ಮಾತನಾಡುತ್ತಿದ್ದರು. ಈ ಟಿವಿಯಲ್ಲಿ ರವಿ ಬೆಳಗೆರೆ ನಿರ್ದೇಶನದಲ್ಲಿ ಅವರದ್ದೇ ಕಂಚಿನ ಕಂಠದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಡೈರಿಯನ್ನು ಮರೆಯುವುದು ಹೇಗೆ? ಯೂಟ್ಯೂಬ್ ಚಾನಲ್ ಮೂಲಕವೂ ಇತ್ತೀಚಿನ ದಿನಗಳಲ್ಲಿ ರವಿ ಮಾತನಾಡುತ್ತಿದ್ದರು.

ವೀರಪ್ಪನ್‍ನಿಂದ ಡಾ. ರಾಜ್ ಅಪಹರಣದ ಬಗ್ಗೆ ರಾಜರಹಸ್ಯ ಎಂಬ ಪುಸ್ತಕದ ಮೂಲಕ ಅನೇಕ ರಹಸ್ಯ ವಿಚಾರಗಳನ್ನು ಓದುಗರಿಗೆ ನೀಡಿದರು. ಕಲಾವಿದೆ ಲೀಲಾವತಿ ಜೀವನದ ಬಗ್ಗೆಯೂ ಬರೆದರು. ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ ಬಗ್ಗೆಯೂ ರೋಚಕವಾಗಿ ಬರೆದರು. ಹಿಮಾಲಯನ್ ಬ್ಲಂಡರ್, ಹೇಳಿಹೋಗು ಕಾರಣ, ಹಿಮಾಗ್ನಿ ಮುಸ್ಲಿಂ, ನೀನಾ ಪಾಕಿಸ್ತಾನ, ಇಂದಿರೆಯ ಮಗ ಸಂಜಯ, ದಿ ಗಾಡ್ ಫಾದರ್, ಮಾಟಗಾತಿ, ಚಲಂ, ಓರ್ಮಟ, ಡಯನಾ. ದಿ ಗಿಫ್ಠ್, ಕಾರ್ಗಿಲ್‍ನಲ್ಲಿ 17 ದಿನ, ಬ್ಲಾಕ್ ಫ್ರೈಡೆ, ಹೀಗೆ ರವಿ ಬರವಣಿಗೆಯಲ್ಲಿ ಗಂಟೆಗಟ್ಟಲೆ ಓದಿಸಿಕೊಂಡು ಹೋಗುವ ಪುಸ್ತಕಗಳು ದೊರಕಿದವು. ರವಿ ಬೆಳಗೆರೆ ಪ್ರಾರಂಭಿಸಿದ್ದ ಓ ಮನಸ್ಸೇ ಎಂಬ ಪಾಕ್ಷಿಕಕ್ಕೂ ಅದರದ್ದೇ ಆದ ಓದುಗ ಸಮೂಹವಿತ್ತು.

ಮಡಿಕೇರಿ ಅದ್ಭುತ ಮಾರಾಯ...

ನಾನು ಪ್ರಜಾವಾಣಿಯಲ್ಲಿ ಪತ್ರಿಕೋದ್ಯಮ ತರಬೇತಿ ಪಡೆಯುತ್ತಿದ್ದ ದಿನಗಳು... ಜಿಂದಾಲ್ ಬಗ್ಗೆ ಲೇಖನಕ್ಕಾಗಿ ಅಲ್ಲಿಗೆ ತೆರಳಿದ್ದೆ. ಆಗ ಅಲ್ಲಿನ ವಾರ್ತಾ ಸಂಚಿಕೆಯ ಸಂಪಾದಕರಾಗಿ ಪರಿಚಿತರಾದವರೆ ಈ ರವಿ ಬೆಳಗೆರೆ.

ಜಿಂದಾಲ್ ಬಗ್ಗೆ ಮಾಹಿತಿ ಕೊಡಿ ಎಂದಾಗ ಅಯ್ಯೋ ಬಿಟ್ಟಾಕಿ... ನಾನು ಕರ್ಮವೀರ ಸಂಪಾದಕನಾಗುತ್ತಿದ್ದೇನೆ... ನೀವೂ ನನ್ನ ಜತೆ ಬಂದುಬಿಡಿ ಎಂದು ಸಿಗರೇಟ್ ಹೊಗೆಬಿಡುತ್ತಾ ಬಿಂದಾಸ್ ಆಹ್ವಾನ ನೀಡಿದ್ದರು ಬೆಳಗೆರೆ. ಕರ್ಮವೀರ ಎಂಬ ವಾರಪತ್ರಿಕೆಗೆ ಮರುಹುಟ್ಟು ನೀಡಿ ಅತ್ಯುತ್ತಮವಾಗಿ ರೂಪಿಸಿದ್ದ ರವಿಬೆಳಗೆರೆ ಅದಕ್ಕೂ ಮುನ್ನ ಕಸ್ತೂರಿ ಎಂಬ ಮಾಸಿಕವನ್ನೂ ಹೊಸ ರೀತಿಯಲ್ಲಿ ಓದುಗರಿಗೆ ನೀಡಿದ್ದರು.

ರವಿ ಬೆಳಗೆರೆಯ ಕರ್ಮವೀರಕ್ಕೆ ನಾನು ಹೋಗಲಿಲ್ಲ. ಆದರೆ, ರವಿ ಬಿಡಲಿಲ್ಲ... ಕಾಲೇಜ್‍ನಲ್ಲಿ ಸಹಪಾಠಿಯಾಗಿದ್ದ ನಿವೇದಿತಾ ಜತೆಗೂಡಿ ಹಾಯ್ ಬೆಂಗಳೂರು ರೂಪಿಸಿದ್ದ ರವಿಬೆಳಗೆರೆ ನನ್ನಿಂದ ಅನೇಕ ಲೇಖನಗಳನ್ನು ಹಾಯ್‍ಗೆ ಬರೆಸಿದ್ದರು. ನನ್ನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಮಲೆನಾಡು ವಾರ್ತೆಗೆ ಪ್ರೀತಿಯಿಂದ ಮಾಂಡೋವಿ ಎಂಬ ಅದ್ಭುತವಾದ ಧಾರಾವಾಹಿಯನ್ನು ಕೊಟ್ಟಿದ್ದರು. ಸಂಭಾವನೆ ಎಷ್ಟು ಬಾಸ್ ಎಂದಾಗ ಕೊಡಗಿಗೆ ಬಂದಾಗ ತೆಗೆದುಕೊಳ್ಳುತ್ತೇನೆ ಎಂದು ಹಾಸ್ಯ ಮಾಡಿದ್ದರು. ಹಾಯ್ ಬೆಂಗಳೂರು ಅದ್ಭುತ ಯಶಸ್ಸು ಕಾಣುತ್ತಿದ್ದಂತೆಯೇ ಮಾರುತಿ 800 ಕಾರ್ ಖರೀದಿಸಿದ್ದ ರವಿ ಬೆಳಗೆರೆ ಕಾರ್ ಡ್ರೈವ್ ಮಾಡಿಕೊಂಡು ಪತ್ನಿ ಲಲಿತಾ ಜತೆಯಲ್ಲಿ ಮಡಿಕೇರಿಗೆ ಬಂದರು. ಬೈಕ್ ಚಾಲನೆಯಲ್ಲಿ ನಿಸ್ಸೀಮರಾಗಿದ್ದ ರವಿಬೆಳಗೆರೆಗೆ ಕಾರ್ ಚಾಲನೆ ಒಗ್ಗಿರಲಿಲ್ಲ. ಹೀಗಾಗಿ ಮಡಿಕೇರಿಯ ಕೆಳಗಿನ ಕೊಡವ ಸಮಾಜದ ಏರುಹಾದಿಯಲ್ಲಿ ಕಾರ್ ಚಲಾಯಿಸಲಾಗದೇ ಅದು ಹಿಂದೆ ಹಿಂದೆ ಜಾರುತ್ತಾ ಸಾಗಿ ಫಜೀತಿ ಮಾಡಿಕೊಂಡಿದ್ದರು. ಮಡಿಕೇರಿಯ ಹಲವೆಡೆ ಸುತ್ತಿದ್ದ ರವಿ ದಂಪತಿ, ಲಲಿತಾ ಜತೆ ಮೊದಲ ಬಾರಿಗೆ ಇಷ್ಟೊಂದು ಆರಾಮವಾಗಿ ಸುತ್ತಾಡಿದ್ದೇನೆ. ಮಡಿಕೇರಿ ನಿಜಕ್ಕೂ ಅದ್ಭುತ ಸ್ಥಳ ಮಾರಾಯ ಎಂದು ಶ್ಲಾಘಿಸಿದ್ದ ನೆನಪು ಮರೆಯುವುದು ಹೇಗೆ?

ಕೊಡಗಿನಲ್ಲಿ ಕಲ್ಕಿ ಪಂಥದ ಚಟುವಟಿಕೆ ಹೆಚ್ಚಾಗಿ ಇಲ್ಲಿನ ಬೆಳೆಗಾರರು ದುಡಿದ ದುಡ್ಡನ್ನೆಲ್ಲಾ ಕಲ್ಕಿ ಅನುಯಾಯಿಗಳಿಗೆ ನೀಡುತ್ತಿದ್ದಾರೆ ಎಂದು ತಿಳಿದು ತಾವೇ ಸ್ವತ ಕೊಡಗಿನಾದ್ಯಂತ ತಿರುಗಾಡಿ 2 ತಿಂಗಳ ಕಾಲ ಹಾಯ್ ಬೆಂಗಳೂರಿನಲ್ಲಿ ಕಲ್ಕಿ ವಿರುದ್ಧದ ವಿಶೇಷ ಲೇಖನ ಪ್ರಕಟಿಸಿದ್ದರು. ಈ ವರದಿ ಪ್ರಕಟವಾಗುತ್ತಿದ್ದ ದಿನಗಳಲ್ಲಿಯೇ ಕಲ್ಕಿಯ ಸಮಾವೇಶದಲ್ಲಿ ರವಿ ಕೂಡ ಮಾರುವೇಷದಲ್ಲಿ ಪಾಲ್ಗೊಂಡು ಅದರ ವರದಿಯನ್ನೂ ಮಾಡಿದ್ದರು. ರವಿಬೆಳಗೆರೆ ತಮ್ಮ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ವರದಿ ಮೂಲಕ ತಿಳಿದಾಗ ಕಲ್ಕಿ ಬೆಂಬಲಿಗರು ಬೆಚ್ಚಿ ಬಿದ್ದಿದ್ದರು.

ಮುಂದೊಂದು ದಿನ ತನ್ನದೇ ನಿರ್ಮಾಣದಲ್ಲಿ ಮುಖ್ಯಮಂತ್ರಿ ಐ ಲವ್ ಯೂ ಎಂಬ ವಿಶಿಷ್ಟ ಹೆಸರಿನಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಯ ಪ್ರೇಮ ಪ್ರಸಂಗದ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ರವಿ ಬೆಳಗೆರೆ ಆ ಸಿನಿಮಾದ ಹಾಡುಗಳನ್ನು ಮಾಂದಲಪಟ್ಟಿಯಲ್ಲಿ ಚಿತ್ರೀಕರಿಸಿದ್ದರು. ಕಾರಣಾಂತರದಿಂದ ಸಿನಿಮಾ ತೆರೆಕಾಣಲಿಲ್ಲ.

ಕೊಡವರಿಗೆ ಜಗಳ ಆಡಲು ಬರೊಲ್ಲ!!

ಪ್ರಾರ್ಥನಾ ಶಾಲೆ ಪ್ರಾರಂಭಿಸಲು ತಯಾರಿ ನಡೆಸಿದ್ದಾಗ ಬೆಂಗಳೂರಿನಲ್ಲಿ ಶಾಲಾ ಪ್ರಚಾರಕ್ಕೆ ಅಗತ್ಯವಾಗಿದ್ದ ಪ್ರಚಾರದ ಬ್ರೋಷರ್‍ಗೆ ನನ್ನ ಮಗ ನಿಹಾರ್‍ನೇ ರೂಪದರ್ಶಿಯಾಗಿದ್ದ. ಪುಟಾಣಿ ನಿಹಾರ್ ಪ್ರಾರ್ಥನಾ ಶಾಲೆಯ ಮೊದಲ ರೂಪದರ್ಶಿ!! 620 ಮಕ್ಕಳಿಂದ ಪ್ರಾರಂಭವಾದ ಶಾಲೆಯಲ್ಲೀಗ 8000 ಮಕ್ಕಳು!!

ಮಾಂಡೋವಿ ಧಾರವಾಹಿಯ ಸಂಭಾವನೆ ಬದಲಿಗೆ ನಿಹಾರ್‍ನನ್ನು ರೂಪದರ್ಶಿಯನ್ನಾಗಿ ಬಳಸಿ ಲೆಕ್ಕ ಚುಕ್ತಾ ಮಾಡಿದ್ದಾಯಿತು!

ಹಾಯ್ ಬೆಂಗಳೂರನ್ನು ಲೋಕಾರ್ಪಣೆ ಮಾಡಿದ್ದೇ ಹಿರಿಯ ವಕೀಲರಾಗಿದ್ದ ಎ.ಕೆ. ಸುಬ್ಬಯ್ಯ. ತರುವಾಯ ಎ.ಕೆ. ಸುಬ್ಬಯ್ಯ ಅವರನ್ನೂ ರವಿ ಟೀಕಿಸದೇ ಬಿಡಲಿಲ್ಲ..! ಎಂ.ಸಿ. ನಾಣಯ್ಯ ಅವರ ಬಗ್ಗೆ ರವಿಗೆ ಅಪಾರ ಗೌರವವಿತ್ತು. ಯಾವುದಾದರೂ ಖಚಿತ ಮಾಹಿತಿಯಿದ್ದಲ್ಲಿ ಅದು ಎಂ.ಸಿ.ನಾಣಯ್ಯ ಅವರಲ್ಲಿ ಮಾತ್ರವೇ ಎಂಬ ನಂಬಿಕೆ ಇತ್ತು.

ಮತ್ತೊಂದು ಘಟನೆ... ಎಂ.ಎಂ. ನಾಣಯ್ಯ ಮತ್ತು ಟಿ. ಜಾನ್ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದರು. ಹಾಯ್ ಬೆಂಗಳೂರಿನಲ್ಲಿ ಇವರ ವಿರುದ್ಧ ವರದಿಗಳು ಪ್ರಕಟವಾದವು. ಕೊಡಗಿನಲ್ಲಿ ಅದು ಭಾರೀ ಸಂಚಲನ ಹುಟ್ಟು ಹಾಕಿತ್ತು. ನಾಣಯ್ಯ ಮತ್ತು ಟಿ. ಜಾನ್ ಇಬ್ಬರೂ ರವಿ ವಿರುದ್ಧ ಮಡಿಕೇರಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಅದು ಹಲವು ವರ್ಷ ನಡೆಯಿತು. ಕೋರ್ಟ್‍ಗೆ ಸರಿಯಾಗಿ ಹಾಜರಾಗದ ರವಿ ವಿರುದ್ಧ ವಾರಂಟ್ ಜಾರಿಯಾಯಿತು.

ಹೇಗಾದರೂ ಮಾಡಿ ರಾಜಿ ಮಾಡಿಸಿ ಎಂದು ಕೋರಿದರು ರವಿ. ರಾಜಿಗೆ ನಾಣಯ್ಯ, ಜಾನ್ ಒಪ್ಪಿದರು. ಅದೊಂದು ದಿನ ಬೆಂಗಳೂರಿನಿಂದ ರವಿಬೆಳಗೆರೆ ಮಡಿಕೇರಿ ಕೋರ್ಟ್‍ಗೆ ಬಂದಾಗ ಅದೆಲ್ಲಿತ್ತೋ ಜನ ಪ್ರವಾಹ... ಸಾಲು ಸಾಲು ಜನ ರವಿಯನ್ನು ಕಾಣಲು ಕೋರ್ಟ್ ಮುಂದೆ ಬಂದಿದ್ದರು. ಕೋರ್ಟ್‍ನಲ್ಲಿ ರಾಜಿಗೆ ಸಮ್ಮತಿ ಸಿಕ್ಕಿತು. ನಂತರ ರವಿ ಜತೆ ಎಲ್ಲರೂ ಸೇರಿದ್ದ ನಾರ್ಥ್ ಕೂರ್ಗ್ ಕ್ಲಬ್‍ನಲ್ಲಿ ನಾಣಯ್ಯ, ಜಾನ್ ಮತ್ತು ವಕೀಲರಾದ ಎಂ.ಎ. ನಿರಂಜನ್, ಕವನ್ ಹಾಜರಿದ್ದರು. ಅವರಿಂದಲೇ ಪಾರ್ಟಿ ನಡೆಯಿತು.

ಎಂಥಾ ಉದಾರಿಗಳು ಕೊಡವರು ನೋಡ್ರಿ.. ನನ್ನ ಮೇಲೆ ಕ್ರಿಮಿನಲ್ ಕೇಸ್ ಹಾಕಿದರೂ ಕೊನೆಗೆ ನನಗೆ ಗಿಫ್ಟ್ ನೀಡಿ ಕಳುಹಿಸುತ್ತಾರಲ್ಲ. ಕೊಡವರ ಸಂಸ್ಕøತಿ ಬೇರೆಲ್ಲೂ ಕಾಣೋಲ್ಲಾರಿ... ಎಂದು ಮುಕ್ತವಾಗಿ ಹೇಳಿದ್ದರು. ಕೊನೆಗೆ ಒಂದು ವಾಕ್ಯವನ್ನೂ ಸೇರಿಸಿದ್ದರು... ಸಿಕ್ಕಾಪಟ್ಟೆ ಜಗಳ ಆಡುತ್ತಾರೆ ಎಂದುಕೊಂಡು ಬಂದಿದ್ದೆ ಇಲ್ ನೋಡಿದರೆ ಕಾಫಿ ಪೌಡರ್ ಕೊಟ್ಟು ಕಳುಹಿಸಿದ್ದಾರೆ. ನಿಮ್ ಕೊಡಗಿನವರಿಗೆ ಸರಿಯಾಗಿ ಜಗಳ ಆಡೋಕೂ ಬರೊಲ್ಲಾ ಮಾರಾಯ...!!!!

ಕೊಡಗಿನ ಬಗ್ಗೆ ರವಿಗೆ ಮೂರು ಕನಸುಗಳಿದ್ದವು...

ಕೊಡಗಿನ ವೀರಯೋಧರ ಬಗ್ಗೆ ಯಾರೂ ಬರೆಯದ, ಯಾರಿಗೂ ತಿಳಿದಿರದಿದ್ದ ಅದ್ಭುತವಾದ ಪುಸ್ತಕ ರಚಿಸಬೇಕು. ಇದಕ್ಕಾಗಿ ನಿವೃತ್ತ ಸೇನಾಧಿಕಾರಿಗಳ ಮಾಹಿತಿಯನ್ನೂ ನನ್ನಿಂದ ಪಡೆದುಕೊಂಡಿದ್ದರು. ನಿಮ್ಮಲ್ಲಿ ಆರ್ಮಿಯವರು ರಾತ್ರಿ ಸರಿಯಾಗಿ 9 ಗಂಟೆಗೆಲ್ಲಾ ಮಲಗಿಬಿಡ್ತಾರೆ. ಹಾಳಾದದ್ದು ನಂಗೆ ಅರ್ಧರಾತ್ರಿಯಾಗುವಾಗಲೇ ಬರೆಯಲು ಮೂಡ್ ಬರೋದು... ಮಾಹಿತಿ ಸಂಗ್ರಹಿಸಲಿಕ್ಕೆ ಮಧ್ಯರಾತ್ರಿಯೇ ಸರಿ ಎಂದಿದ್ದರು!!!

ಬೆಂಗಳೂರಿನ ಪ್ರಾರ್ಥನಾ ಶಾಲೆಯಂತೆಯೇ ಕೊಡಗಿನಲ್ಲಿಯೂ ಉತ್ತಮ ಸೌಕರ್ಯದ ಎಲ್ಲರಿಗೂ ನಿಲುಕುವ ವಸತಿಶಾಲೆಯ ಕನಸೂ ರವಿಬೆಳಗೆರೆಯಲ್ಲಿತ್ತು. ರವಿ ಮಗ ಕರ್ಣ ಬೆಳಗೆರೆ ಈ ಬಗ್ಗೆ ಕಳೆದ ವರ್ಷ ಕೆಲವೊಂದು ಮಾಹಿತಿ ಸಂಗ್ರಹಿಸಿದ್ದರು.

2019 - ಆಗಸ್ಟ್ 26ಕ್ಕೆ ಕರೆ ಮಾಡಿದ್ದ ರವಿ, ಕೊಡಗಿಗೆ ಬರ್ತೇನೆ. ಒಂದು 15 ದಿನ ಇರುತ್ತೇನೆ. ಕೊಡಗಿನ ಮಳೆಯೇ ಅದ್ಭ್ಬುತ... ಅದು ಕಾವ್ಯಕ್ಕೂ ಸರಿ, ಸಾಹಿತ್ಯಕ್ಕೂ ಸೈ... ಮಳೆ ಬಗ್ಗೆಯೇ ಪುಸ್ತಕ ಮಾಡಬೇಕೂಂತ ಇದ್ದೇನೆ. ಒಂದೊಳ್ಳೆ ಜಾಗ ವ್ಯವಸ್ಥೆ ಮಾಡಿರಿ. ಕಂಡೀಷನ್ ಅಂದ್ರೆ, ನನ್ನನ್ನು ಆ ಮನೆಯವರೇ ನೋಡಿಕೊಳ್ಳಬೇಕು ಒಳ್ಳೆ ಮಾಂಸ ಹಾಕಬೇಕು... ಹೊತ್ತು ಹೊತ್ತಿಗೆ ಕಾಲು ಕೆ.ಜಿ. ಟಾಬ್ಲೆಟ್ ಕೊಡಬೇಕು. ಜಾರಿಬೀಳದಂತೆ ನೋಡಿಕೊಳ್ಳಬೇಕು ಅಂದಿದ್ದರು.

ಅಂಬೆಕಲ್ ಜೀವನ್ ಕೊಡಗಿನಲ್ಲಿ ರವಿಬೆಳಗೆರೆಯ ಆತಿಥ್ಯದ ಹೊಣೆ ವಹಿಸಿಕೊಂಡಿದ್ದರು. ಆದರೆ ಮಳೆ ಕಡಿಮೆಯಾಯಿತು ಎಂದು ಕೇಳಿದ ರವಿ ತಮ್ಮ ಭೇಟಿಯನ್ನು ಮುಂದಕ್ಕೆ ಹಾಕಿದ್ದರು. ಹೀಗಾಗಿ ಕೊಡಗಿನ ಮಳೆ ಬಗ್ಗೆಯೇ ರವಿ ಕೈಚಳಕದಲ್ಲಿ ಮೂಡಬಹುದಾಗಿದ್ದ ಕೃತಿಯ ಕನಸೂ ಈಗ ನನಸಾಗದೆ ಹೋಗಿದೆ.

60 ಪುಸ್ತಕದ ರಸದೌತಣ ನೀಡಿದ್ದ 62 ವರ್ಷ ಪ್ರಾಯದ ಬೆಳಗೆರೆಯ ರವಿ ಎಂಬ ಅಕ್ಷರ ಲೋಕದ ಸಾಮ್ರಾಟನನ್ನು ನಾಡು ಕಳೆದುಕೊಂಡಿದೆ. ರವಿ ಬಗ್ಗೆ ಅಭಿಪ್ರಾಯ ಬೇಧಗಳು, ಸಿಟ್ಟು, ದ್ವೇಷಗಳು ಹಲವರಲ್ಲಿ ಸಹಜವಾಗಿಯೇ ಇರಬಹುದು. ಆದರೆ ಅವರೊಳಗಿನ ಬರವಣಿಗೆಯ ಶಕ್ತಿಯನ್ನು ಮಾತ್ರ ಯಾರಿಂದಲೂ ದ್ವೇಷಿಸಲು ಅಸಾಧ್ಯ.,

ಅಕ್ಷರ ಲೋಕದ ಬಾನಂಗಣದಿಂದ ರವಿ ಅಸ್ತಂಗತ... ಕೊಡಗಿನಲ್ಲಿ ಮತ್ತೆ ಮಳೆ ಬರಬಹುದು... ಆದರೆ ಈ ಮಳೆಯ ಬಗ್ಗೆ ಬರೆಯಲು ರವಿ ಇನ್ನು ಬರಲಾರ... ಅನೇಕರ ಜೀವನದ ಲವಲವಿಕೆಗೆ..ಚಂದದ ಕನಸುಗಳ ಹುಟ್ಟಿಗೆ ಕಾರಣನಾಗುತ್ತಿದ್ದ ರವಿ ಬೆಳಗೆರೆ ಎಂಬ ಅದ್ಭುತ ಕನಸುಗಾರನಿಗೆ ವಿದಾಯ... - ಅನಿಲ್ ಎಚ್.ಟಿ.