ರೂ. 577.84 ಕೋಟಿ ಮಳೆ ಪರಿಹಾರ ಮಂಜೂರು

ನವದೆಹಲಿ, ನ. 13: ಈ ದೀಪಾವಳಿ ಸಮಯದಲ್ಲಿ ಕೇಂದ್ರವು ರಾಜ್ಯಕ್ಕೆ ಶುಭಸುದ್ದಿ ಕೊಟ್ಟಿದೆ. ನೆರೆ, ಅತಿವೃಷ್ಟಿಯಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿ ರೂ. 577.84 ಕೋಟಿ ಪರಿಹಾರ ಮಂಜೂರು ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದ ಸಭೆಯಲ್ಲಿ ಕರ್ನಾಟಕವೂ ಸೇರಿ ಆರು ರಾಜ್ಯಗಳಿಗೆ ಒಟ್ಟೂ ರೂ. 4381.88 ಕೋಟಿ ನೆರವಿಗೆ ಒಪ್ಪಿಗೆ ಸೂಚಿಸ ಲಾಗಿದೆ. ಇದರಲ್ಲಿ ಪಶ್ಚಿಮ ಬಂಗಾಳಕ್ಕೆ ರೂ. 2707.77 ಕೋಟಿ ಒಡಿಶಾಗೆ ರೂ. 128.33, ಮಧ್ಯಪ್ರದೇಶಕ್ಕೆ ರೂ. 611.61, ಕೋಟಿ ಕರ್ನಾಟಕಕ್ಕೆ ರೂ. 577 ಕೋಟಿ ಸೇರಿದೆ. ಕಳೆದ ಮೇ-ಜೂನ್ ಮಾಹೆಯಲ್ಲಿ ರಾಜ್ಯದಲ್ಲಿ ಉಂಟಾಗಿದ್ದ ಮಳೆ, ಪ್ರವಾಹದಿಂದಾಗಿ ಸುಮಾರು ರೂ. 24,941 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಕೇಂದ್ರದಿಂದ ಹತ್ತು ಸಾವಿರ ಕೋಟಿ ರೂಪಾಯಿ ನೆರವು ಕೇಳಿತ್ತು.

ಪಾಕ್ ಸೇನೆಯ 8 ಸೈನಿಕರ ಹತ್ಯೆ

ಶ್ರೀನಗರ, ನ. 13: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿಯಲ್ಲಿ) ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಪ್ರತಿ ದಾಳಿ ನಡೆಸಿದ ಭಾರತೀಯ ಸೇನಾಪಡೆ ಪಾಕ್ ಸೇನೆಯ ಎಸ್‍ಎಸ್‍ಜಿ ಕಮಾಂಡೋ ಸೇರಿದಂತೆ 8 ಮಂದಿ ಸೈನಿಕರನ್ನು ಹತ್ಯೆ ಮಾಡಿದೆ. ಪಾಕ್ ಸೇನೆಯ ಅಪಾರ ಪ್ರಮಾಣದ ಬಂಕರ್‍ಗಳು, ಇಂಧನ ಡಂಪಿಂಗ್ ಮತ್ತು ಕಾರ್ಯ ಸ್ಥಳಗಳನ್ನು ಭಾರತೀಯ ಸೇನೆ ನಾಶಪಡಿಸಿದ್ದು, ಘಟನೆಯಲ್ಲಿ 10-12 ಪಾಕ್ ಯೋಧರು ಗಾಯಗೊಂಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೂ ಮುನ್ನ ನೆರೆಯ ರಾಷ್ಟ್ರದಿಂದ ಕದನ ವಿರಾಮ ಉಲ್ಲಂಘನೆ ಹಾಗೂ ಪಾಕ್ ಮೂಲದ ಉಗ್ರರ ಒಳನಸುಳುವಿಕೆ ತಡೆಯುವ ಪ್ರಯತ್ನದಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮರಾದರು. ಉರಿ ವಲಯದಲ್ಲಿ ಇಬ್ಬರು ಹಾಗೂ ಗುರೆಜ್ ಸೆಕ್ಟರ್‍ನಲ್ಲಿ ಒಬ್ಬರು ಹುತಾತ್ಮರಾಗಿರುವುದಾಗಿ ಸೇನಾ ಮೂಲಗಳು ಮಾಹಿತಿ ನೀಡಿವೆ.

ಆಯುರ್ವೇದ ಔಷಧಗಳ ಸಂಶೋಧನೆಯ ಬಲವರ್ಧನೆ

ನವದೆಹಲಿ, ನ. 13: ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಸಾಂಪ್ರದಾಯಿಕ ಔಷಧಿಯ ಮೇಲೆ ಡಬ್ಲ್ಯುಎಚ್‍ಒ ಗ್ಲೋಬಲ್ ಸೆಂಟರ್‍ನ್ನು ಸ್ಥಾಪಿಸುತ್ತಿದ್ದು, ಇಲ್ಲಿನ ಸಾಂಪ್ರದಾಯಿಕ, ಆಯುರ್ವೇದ ಔಷಧಗಳ ಮೇಲೆ ಸಂಶೋಧನೆಯ ಬಲವರ್ಧನೆಯಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ಆಯುರ್ವೇದ ದಿನದ ಅಂಗವಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‍ನ ಜಮ್ನಗರದಲ್ಲಿ ಮತ್ತು ರಾಜಸ್ತಾನದ ಜೈಪುರದಲ್ಲಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆಗಳನ್ನು ಉದ್ಘಾಟಿಸಿ ಮಾತನಾಡಿದರು. ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆಗೆ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಹೆಮ್ಮೆಯ ಸಂಗತಿ, ಭಾರತದಲ್ಲಿ ತಲೆಯೆತ್ತಲಿರುವ ಸಾಂಪ್ರದಾಯಿಕ ಔಷಧಿ ಕೇಂದ್ರ ಜಾಗತಿಕ ಮಟ್ಟದಲ್ಲಿ ಬಹಳ ದೊಡ್ಡ ಕೇಂದ್ರವಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಹೇಳಿದರು.

ಡಿ. 1 ರಿಂದ ಮೆಡಿಕಲ್ ಕಾಲೇಜು ಆರಂಭ

ಬೆಂಗಳೂರು, ನ. 13: ರಾಜ್ಯದಲ್ಲಿ ಡಿ. 1 ರಿಂದ ಮೆಡಿಕಲ್ ಕಾಲೇಜು ಆರಂಭ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಕೊರೊನಾ ಕಾರಣದಿಂದ ಬಾಗಿಲು ಮುಚ್ಚಿದ್ದ ರಾಜ್ಯದ ವೈದ್ಯಕೀಯ ಕಾಲೇಜುಗಳು ಮತ್ತೆ ಆರಂಭವಾಗಲಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಮೆಡಿಕಲ್, ಡೆಂಟಲ್, ಆಯುಷ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುಧಾಕರ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಎಲ್ಲಾ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳನ್ನು ಡಿ. 1 ರಿಂದ ಪುನರಾರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕಾಲೇಜುಗಳ ಆಡಳಿತ ಮಂಡಳಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

2 ಗಂಟೆ ಮಾತ್ರ ಹಸಿರು ಪಟಾಕಿ ಸಿಡಿಸಿ

ನವದೆಹಲಿ, ನ. 13: ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ತೆಲಂಗಾಣದಲ್ಲಿ 2 ಗಂಟೆ ಮಾತ್ರ ಹಸಿರು ಪಟಾಕಿ ಹೊಡೆಯಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಈ ಹಿಂದೆ ಎಲ್ಲ ರೀತಿಯ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ತೆಲಂಗಾಣ ಸರ್ಕಾರ ನಿಷೇಧ ಹೇರಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ತೆಲಂಗಾಣ ಪಟಾಕಿ ಮಾರಾಟಗಾರರ ಸಂಘ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರಾದ ಎಎಂ ಖಾನ್ವಿಲ್ಕರ್ ಮತ್ತು ಸಜೀವ್ ಖನ್ನಾ ನೇತೃತ್ವ ದ್ವಿಸದಸ್ಯ ಪೀಠ 2 ಗಂಟೆ ಮಾತ್ರ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಅವಕಾಶ ನೀಡಿದೆ.

ಪತ್ರಕರ್ತ ರವಿ ಬೆಳಗೆರೆ ನಿಧನ

ಬೆಂಗಳೂರು, ನ. 13: ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಹೃದಯಾಘಾತದಿಂದ ನಿಧನರಾಗಿದ್ದ ರವಿ ಬೆಳಗೆರೆ ಅವರ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಪದ್ಧತಿಯಂತೆ ನೆರವೇರಿಸಲಾಗಿದೆ. ಪುತ್ರರಾದ ಕರ್ಣ ಹಾಗೂ ಹಿಮವಂತ ರವಿ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಶಿವರಾಂ ಅಂತ್ಯ ಸಂಸ್ಕಾರದ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಗುರುವಾರ ತಡರಾತ್ರಿ ನಿಧನರಾಗಿದ್ದ ಪತ್ರಕರ್ತ ರವಿ ಬೆಳಗೆರೆ ಅವರ ಪ್ರಾರ್ಥಿವ ಶರೀರವನ್ನು ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಗೆ ತಂದು ಬಳಿಕ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಪದ್ಮನಾಭ ನಗರದಲ್ಲಿರುವ ಪ್ರಾರ್ಥನಾ ಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಮೂವರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ

ಬೆಂಗಳೂರು, ನ. 13: ಮೂವರು ಮಕ್ಕಳನ್ನು ನೇಣು ಬಿಗಿದು ಬಳಿಕ ತಂದೆಯೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಗರದ ಮೈಕೋ ಲೇಔಟ್‍ನ ರಮಣಶ್ರೀ ಎನ್‍ಕ್ಲೇವ್ ಬಳಿ ಶುಕ್ರವಾರ ನಡೆದಿದೆ. ಸರಸ್ವತಿ (14), ಹೇಮತಿ (11), ರಾಜ್‍ಕುಮಾರ್ (3) ಮೃತ ಮಕ್ಕಳು. 32 ವರ್ಷದ ಜನಕರಾಜ್ ಬಿಸ್ತಾ ಎಂಬುವವರು ತಮ್ಮ ಮೂವರು ಮಕ್ಕಳನ್ನು ನೇಣು ಬಿಗಿದು ಬಳಿಕ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಜನಕರಾಜ್ ಬಿಸ್ತಾ ಅವರು ರಮಣಶ್ರೀ ಎನ್‍ಕ್ಲೇವ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಎರಡು ತಿಂಗಳ ಹಿಂದಷ್ಟೇ ಜನಕರಾಜ್ ಅವರ ಪತ್ನಿ ನಂದಾದೇವಿ ಆತ್ಮಹತ್ಯೆಗೆ ಶರಣಾಗಿದ್ದರು. ಮಕ್ಕಳನ್ನು ನೋಡಿಕೊಳ್ಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ಜನಕರಾಜ್ ತಮ್ಮ ಮಕ್ಕಳನ್ನು ನೇಣಿಗೆ ಹಾಕಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ

ಕಾರವಾರ, ನ. 13: ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಭಾರತೀಯ ನೌಕಾದಳಕ್ಕೆ ಸೇರಿದ ಎನ್-741 ಹೆಲಿಕಾಪ್ಟರ್, ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಎಪಿಎಂಸಿ ಮೈದಾನದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಬೆಂಗಳೂರಿನಿಂದ ಗೋವಾದತ್ತ ಹೆಲಿಕಾಪ್ಟರ್ ತೆರಳುತಿದ್ದು, ಈ ವೇಳೆ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ನಂತರ ಪೈಲೆಟ್ ದಾಸನಕೊಪ್ಪದ ಮೈದಾನದಲ್ಲಿ ಜೀವರಕ್ಷಣೆಗಾಗಿ ಹೆಲಿಕಾಪ್ಟರ್‍ಅನ್ನು ಕೆಳಗಿಳಿಸಿದ್ದಾರೆ. ಇಬ್ಬರು ಪೈಲಟ್, ಓರ್ವ ಕಮಾಂಡಿಂಗ್ ಆಫೀಸರ್ ಈ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಪೈಲೆಟ್ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಏಕಾಏಕಿ ಹೆಲಿಕಾಪ್ಟರ್ ಇಳಿದಿದ್ದು ಕಂಡು ಗ್ರಾಮಸ್ಥರು ದಿಗ್ಭ್ರಮೆಗೊಳಗಾಗಿದ್ದು, ಪೈಲಟ್‍ಗಳು ಹೊರಬರುತ್ತಿದ್ದಂತೆ ಹೆಲಿಕಾಪ್ಟರ್ ನೋಡಲು ನೂರಾರು ಜನ ಜಮಾಯಿಸಿದ್ದರು. ಹೆಲಿಕಾಪ್ಟರ್‍ನಲ್ಲಿ ದೋಷವಿದ್ದಿದ್ದರಿಂದ ಸರಿಪಡಿಸಲು ಗೋವಾದಿಂದ ಶಿರಸಿಗೆ ತಾಂತ್ರಿಕ ತಜ್ಞರು ಹೆಲಿಕಾಪ್ಟರ್ ಮೂಲಕ ಆಗಮಿಸುತಿದ್ದು, ನಂತರ ಹೆಲಿಕಾಪ್ಟರಿನ ಯಾವ ಭಾಗದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ತಿಳಿದು ಬರಲಿದೆ.