ಕೂಡಿಗೆ, ನ. 13: ಕರ್ನಾಟಕ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ವತಿಯಿಂದ ಹಾರಂಗಿಯಲ್ಲಿ ಆರಂಭಿಸಿರುವ, ರಾಜ್ಯದ ಏಕೈಕ ಹಾರಂಗಿಯ ಮಹಶೀರ್ ಮೀನು ಮರಿಗಳ ಉತ್ಪಾದನಾ ಕೇಂದ್ರದ ಮೀನು ಮರಿಗಳಿಗೆ ಕೇರಳ ರಾಜ್ಯದಲ್ಲಿ ಭಾರೀ ಬೇಡಿಕೆ ಇದ್ದು, ಈಗಾಗಲೇ ಕೇರಳ ಸರಕಾರದ ಮೀನುಗಾರಿಕೆ ಇಲಾಖೆಯ ಬೇಡಿಕೆ ಮೇರೆಗೆ ಮಹಶೀರ್ ಮೀನು ಮರಿಗಳನ್ನು ನೀಡುವ ಸಿದ್ಧತೆಗಳು ನಡೆಯುತ್ತಿದೆ.

ಈ ಕೇಂದ್ರವು ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿರುವ ಈ ಕೇಂದ್ರದಲ್ಲಿ ವರ್ಷಕ್ಕೆ 30 ಸಾವಿರದಷ್ಟು ಮಹಶೀರ್ ಮೀನು ಮರಿಗಳನ್ನು ಉತ್ಪತ್ತಿ ಮಾಡಲಾಗುತ್ತಿದೆ.

ಈ ಕೇಂದ್ರದಲ್ಲಿ ಉತ್ಪಾದನೆಯಾದ ಮಹಶೀರ್ ಮೀನು ಮರಿಗಳನ್ನು ನಂಜರಾಯಪಟ್ಟಣದಿಂದ ಗುಡ್ಡೆಹೊಸೂರುವರೆಗಿನ ಕಾವೇರಿ ನದಿಗೆ ಬಿಡಲಾಗುತ್ತದೆ. ಅಲ್ಲದೆ ಹಾರಂಗಿ ಅಣೆಕಟ್ಟೆಯ ಮುಂಭಾಗದ ಹಾರಂಗಿ ನದಿಗೂ ಈ ಮೀನು ಮರಿಗಳನ್ನು ಬಿಡಲಾಗಿದೆ ಹಾರಂಗಿಯಿಂದ ಕೂಡಿಗೆವರೆಗೆ ಮತ್ತು ಕಾವೇರಿ ನದಿಯಲ್ಲಿ ಯಾರೂ ಮೀನು ಹಿಡಿಯದಂತೆ ಇಲಾಖೆ ನಿರ್ಬಂಧ ವಿಧಿಸಿದೆ. ರಾಜ್ಯದ ಮೀನುಗಾರಿಕೆ ಇಲಾಖೆ ಹಾರಂಗಿಯಲ್ಲಿರುವ ಮಹಶೀರ್ ಮೀನು ಮರಿ ಉತ್ಪಾದನಾ ಕೇಂದ್ರದಿಂದ ಕೇರಳ ಮೀನುಗಾರಿಕೆ ಇಲಾಖೆಗೆ 20 ಸಾವಿರ ಮೀನು ಮರಿಗಳನ್ನು ನೀಡಲು ಆದೇಶಿಸಿರುವುದಾಗಿ ತಿಳಿದುಬಂದಿದೆ.

-ಕೆ.ಕೆ.ಎನ್.