ಮಡಿಕೇರಿ, ನ. 13: ಭಾಗಮಂಡಲದ ಚೇರಂಗಾಲ ಗ್ರಾಮದ ಶ್ರೀ ಈಶ್ವರ ಭಗವತಿ ದೇವಾಲಯಕ್ಕೆ ಶ್ರೀ ಈಶ್ವರ ಭಗವತಿಯ ಬೆಳ್ಳಿಯ ಮುಖವಾಡ, ಬೆಳ್ಳಿಯ ಶಿವಲಿಂಗದ ಮುಖವಾಡ, ದೇವಿಗೆ ಚಿನ್ನದ ತಾಳಿಸರ, ಒಂದು ಜೊತೆ ಚಿನ್ನದ ಓಲೆ ಹಾಗೂ ಚಿನ್ನದ ಮೂಗುತಿಯನ್ನು ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ತಲಕಾವೇರಿ ದೇವಾಲಯದ ದೇವತಕ್ಕ ಕುಟುಂಬಸ್ಥರಾದ ಹೊಟೇಲ್ ಉದ್ಯಮಿ ಕೋಡಿ ಪ್ರಕಾಶ್ ಹಾಗೂ ಪತ್ನಿ ಕೋಡಿ ಜಯಂತಿ ಗ್ರಾಮದ ದೇವಾಲಯದಲ್ಲಿ ಅರ್ಪಿಸಿದರು.

ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥ ಶಿರಕಜೆ ಸುಂದರ, ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ, ಕಾರ್ಯದರ್ಶಿ ಮತ್ತಾರಿ ಎಂ. ರಾಜ, ದೇವಾಲಯದ ನಿರ್ದೇಶಕರುಗಳು, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೋಡಿ ಕುಟುಂಬಸ್ಥರು, ತಲಕಾವೇರಿ ದೇವಾಲಯದ ವ್ಯವಸ್ಥಾಪಕ ಕೋಡಿ ಮಹೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು. ಇದಕ್ಕೂ ಮೊದಲು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಕುಟುಂಬಸ್ಥರು ಸೇರಿ ವಿಶೇಷ ಪೂಜೆ ಸಲ್ಲಿಸಿ ಭಾಗಮಂಡಲದ ಪಟ್ಟಣದಲ್ಲಿ ಶ್ರೀ ಈಶ್ವರ ಭಗವತಿ ಮತ್ತು ಶಿವಲಿಂಗದ ಬೆಳ್ಳಿಯ ಮುಖವಾಡವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಇವರು ಈ ಹಿಂದೆ ಶ್ರೀ ತಲಕಾವೇರಿಯ ಅಗಸ್ತ್ಯೇಶ್ವರನ ಶಿವಲಿಂಗಕ್ಕೆ ಬೆಳ್ಳಿಯ ಮುಖವಾಡ ಮಾಡಿಕೊಟ್ಟಿದ್ದರು. ಕುಶಾಲನಗರದ ವಾಸುದೇವ ತಂಡದಿಂದ ದೇವಾಲಯದ ಆವರಣದಲ್ಲಿ ನಾದಸ್ವರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.