ಚೆಟ್ಟಳ್ಳಿ, ನ. 12: ಆಧುನಿಕ ಕಾಲಘಟ್ಟದಲ್ಲಿ ದೃಶ್ಯ ಮಾಧ್ಯಮಗಳ ನಾಗಾಲೋಟದಿಂದ ನಾಳಿನ ಸುದ್ದಿ ಅಂದೇ ದೊರೆಯುತ್ತಿದೆ. ಇದರಿಂದ ಪತ್ರಿಕಾ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಎಸ್. ಚಂದ್ರಮೌಳಿ ಅಭಿಪ್ರಾಯಪಟ್ಟರು. ಎಸ್.ಕೆ.ಎಸ್. ಎಸ್.ಎಫ್. ಹಾಗೂ ಎಸ್.ಕೆ.ಎಸ್. ಎಸ್. ಜಿಸಿಸಿ ಕೊಡಗು ಘಟಕದ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದಲ್ಲಿ ಬಿಡುಗಡೆಗೊಂಡ "ಸ್ನೇಹಧಾರ" ನೂತನ ಮಾಸ ಪತ್ರಿಕೆಯ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪತ್ರಿಕೆಯನ್ನು ಮುನ್ನಡಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಹಲವಾರು ಸವಾಲುಗಳನ್ನು ಎದುರಿಸಿ ಪತ್ರಿಕೆಯನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಮಾತನಾಡಿ, ಸ್ನೇಹಧಾರ ಮಾಸ ಪತ್ರಿಕೆ ಎಲ್ಲರ ಕೈಗಳಿಗೆ ಮುಂದಿನ ದಿನಗಳಲ್ಲಿ ತಲುಪುವಂತಾಗಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ಲಾ ಫೈಝಿ, ಹಲವಾರು ವರ್ಷಗಳ ಕನಸು ನನಸಾಗಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಸಮಿತಿ ಅಧ್ಯಕ್ಷ ತಮ್ಲಿಕ್ ದಾರಿಮಿ, ಎಸ್.ಕೆ.ಎಸ್.ಎಸ್.ಎಫ್. ಕಳೆದ ಹಲವಾರು ವರ್ಷಗಳಿಂದ ಸೌಹಾರ್ದಯುತ ಸಮಾಜವನ್ನು ಸೃಷ್ಟಿಸಲು ಕಾರ್ಯನಿರ್ವಹಿಸುತ್ತಿದೆ ಎಂದರು. ಯುವ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಮಾತನಾಡಿ, ಎಲ್ಲಾ ಸವಾಲುಗಳನ್ನು ಸ್ವೀಕರಿಸಿ, ಎಸ್.ಕೆ.ಎಸ್.ಎಸ್.ಎಫ್. ಬಳಗ ಸ್ನೇಹಧಾರ ಮಾಸ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗ ಬೇಕಾಗಿದೆ ಎಂದರು.

ಸ್ನೇಹಧಾರ ಮಾಸ ಪತ್ರಿಕೆಯ ಪರಿಚಯವನ್ನು ಸಿ.ಎಂ. ಹಮೀದ್ ಮುಸ್ಲಿಯಾರ್ ಮಾಡಿದರು. ಎಸ್.ಕೆ.ಎಸ್.ಎಸ್.ಎಫ್. ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ ಕೊಳಕೇರಿ ಸ್ವಾಗತಿಸಿದರು. ಬಾದ್ಶಾ ಶಮ್ಲಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಫೀಕ್ ಸುಂಟಿಕೊಪ್ಪ, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ. ಯಾಕೂಬ್, ಹಾಗೂ ನೌಷಾದ್ ಜನ್ನತ್, ಉಮ್ಮರ್ ಫೈಜಿ, ಉಸ್ಮಾನ್ ಫೈಜಿ, ಅಶ್ರಫ್ ಮಿಸ್ಬಾಹಿ, ಹಾರೂನ್, ಇಕ್ಬಾಲ್, ಝೈನುದ್ದೀನ್ ಫೈಜಿ ಇದ್ದರು.