ಮಡಿಕೇರಿ, ನ. 12: ದೇಶದಾದ್ಯಂತ ‘ಲವ್ ಜಿಹಾದ್’ನ ಪ್ರಕರಣಗಳು ವಿಪರೀತವಾಗಿ ಹೆಚ್ಚುತ್ತಿದ್ದು, ಮುಗ್ಧ ಅಮಾಯಕ ಹಿಂದೂ ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಸಮಾಜಕ್ಕೆ ಆತಂಕವನ್ನುಂಟು ಮಾಡಿದೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಹೆಚ್. ಚೇತನ್ ತಿಳಿಸಿದ್ದಾರೆ.
ಅದೇ ರೀತಿ ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಲವ್ ಜಿಹಾದಿನ ಪ್ರಕರಣಗಳು ವ್ಯವಸ್ಥಿತ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಹಿಂದೂ ಸಮಾಜದ ಎಲ್ಲಾ ಜಾತಿ - ವರ್ಗಗಳ ಮುಗ್ಧ ಹೆಣ್ಣು ಮಕ್ಕಳು ಈ ಸಂಚಿಗೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ರಾಜ್ಯದಲ್ಲಿ ಕೋಮು ಸಂಘರ್ಷ, ಆತ್ಮಹತ್ಯೆ ಹಾಗೂ ಹಲ್ಲೆ, ಕೊಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅವರು ಜಿಲ್ಲಾಧಿಕಾರಿ ಮೂಲಕ ಸರಕಾರದ ಗಮನ ಸೆಳೆದಿದ್ದಾರೆ.
ಕಾಲೇಜಿನ ಕ್ಯಾಂಪಸ್‍ಗಳು, ಮಹಿಳಾ ಹಾಸ್ಟೆಲ್‍ಗಳು, ಹೊಟೇಲ್, ಸಿನಿಮಾಗಳು, ಬ್ಯೂಟಿಪಾರ್ಲರ್‍ಗಳು, ಮೊಬೈಲ್ ಸೆಂಟರ್‍ಗಳು, ಮಹಿಳೆಯರು ಹೆಚ್ಚಾಗಿ ಬರುವ ವ್ಯಾಪಾರ ಕೇಂದ್ರಗಳು ಮುಂತಾದವುಗಳನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಿ, ಯುವತಿಯರನ್ನು ಪ್ರೇಮಪಾಶಕ್ಕೆ ಬಲಿಯಾಗುವಂತೆ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
‘ಲವ್ ಜಿಹಾದ್’ ತಡೆಗಟ್ಟಲು ಕಠಿಣ ಕಾನೂನು ರೂಪಿಸಿ ಮುಗ್ಧ ಯುವತಿಯರನ್ನು ಸಂರಕ್ಷಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.