ಸಿದ್ದಾಪುರ, ನ. 12: ನಬಾರ್ಡ್, ಒಡಿಪಿ ಸಂಸ್ಥೆ ಮತ್ತು ಮಹಿಳೋದಯ ಮಹಿಳಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನೆಲ್ಲಿಹುದಿಕೇರಿಯ ಪಟ್ಟಣದಲ್ಲಿ ಗ್ರಾಮೀಣ ರೈತ ಹಾಗೂ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಆರಂಭಿಸಲಾಯಿತು.

ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ನಬಾರ್ಡ್‍ನ ಮುಖ್ಯ ಮಹಾ ಪ್ರಬಂಧಕ ನೀರಜ್ ಕುಮಾರ್ ವರ್ಮಾ, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸಾಲ ನೀಡುವ ಸೌಕರ್ಯವಿದ್ದು, ಎಲ್ಲಾ ಮಹಿಳೆಯರು ಈ ಸೌಲಭ್ಯವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆನೀಡಿದರು.

ಮಹಿಳೆಯರೇ ಸಮಾಜದ ಬೆನ್ನೆಲುಬಾಗಿದ್ದು, ಯಾವುದೇ ಕಾರಣಕ್ಕೂ ಎದೆಗುಂದದೆ, ಸ್ವಾವಲಂಬನಾ ಬದುಕು ಕಟ್ಟಿಕೊಳ್ಳಲು ಪಣತೊಡಬೇಕೆಂದ ಅವರು, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಬಾರ್ಡ್ ಸಂಸ್ಥೆಯ ನಿವೃತ್ತ ಅಭಿವೃದ್ಧಿ ಅಧಿಕಾರಿ ಮುಂಡಂಡ ನಾಣಯ್ಯ, ಒಡಿಪಿ ಸಂಸ್ಥೆಯು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುತ್ತಿದ್ದು, ತರಬೇತಿ ಪಡೆದ ಸಾಕಷ್ಟು ಮಹಿಳೆಯರು ಇಂದು ಸ್ವಾವಲಂಬಿ ಬದುಕು ಕಟ್ಟಿಕೊಂಡಿ ದ್ದಾರೆ. ಇದೇ ರೀತಿ ಗ್ರಾಮೀಣ ಭಾಗದ ಮಹಿಳೆಯರು ವಿವಿಧ ಕೌಶಲ್ಯಗಳನ್ನು ಕಲಿತುಕೊಂಡು ತಾವೂ ಸ್ವಾವಲಂಬಿ ಗಳಾಗುವುದರೊಂದಿಗೆ ಇತರರಿಗೂ ಪ್ರೇರಣೆಯಾಗಬೇಕು ಎಂದು ಕರೆನೀಡಿದರು. ಮಹಿಳೆಯರು ಆರ್ಥಿಕವಾಗಿ ಸಬಲರಾಗು ವುದರೊಂದಿಗೆ ಸಮಾಜದ ಮುಂಚೂಣಿಗೆ ಬರಬೇಕೆಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಯೋಜನಾ ಅಧಿಕಾರಿ ಅಣ್ಣಯ್ಯ ಮಾತನಾಡಿ, ಸ್ತ್ರೀಶಕ್ತಿ ಸಂಘಟನೆಗಳು ಬಂದ ನಂತರ ಮಹಿಳೆಯರು ಶೀಘ್ರದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಾ ಆರ್ಥಿಕವಾಗಿ ಸಬಲರಾಗಿದ್ದಾರೆ. ಅಲ್ಲದೆ, ಅವರು ಪಡೆದ ಸಾಲಗಳನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಕೂಡ ಆರ್ಥಿಕ ಸಂಚಯನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪಿ.ವಿ. ಶ್ರೀನಿವಾಸ್, ಮಹಿಳಾ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಕೊಂಡು ನಬಾರ್ಡ್ ಸಂಸ್ಥೆಯು ಹಲವಾರು ಪ್ರಗತಿಪರ ಯೋಜನೆ ಗಳನ್ನು ಜಾರಿಗೆ ತಂದಿದ್ದು, ಇದೆಲ್ಲವನ್ನೂ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಹಿಳೆಯರು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಜೇನು ಕೃಷಿಗೆ ಸಾಕಷ್ಟು ಬೇಡಿಕೆಯಿದ್ದು, ನಬಾರ್ಡ್ ವತಿಯಿಂದ ಉಚಿತ ತರಬೇತಿಯನ್ನೂ ನೀಡಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಒಡಿಪಿ ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮಹಿಳೆಯರು ಹೆಚ್ಚು ಸಂಕಷ್ಟಕ್ಕೆ ತುತ್ತಾಗಿದ್ದು, ಅವರಿಗೆ ಒಡಿಪಿ ಸಂಸ್ಥೆ ಮತ್ತು ನಬಾರ್ಡ್ ಸಾಕಷ್ಟು ಸಹಕಾರ ನೀಡಿದೆ ಎಂದು ತಿಳಿಸಿದರು. ಮಹಿಳೆಯರು ಉತ್ಪನ್ನಗಳನ್ನು ಕೇವಲ ನಾಮಮಾತ್ರಕ್ಕೆ ಮಾರಾಟಮಾಡದೆ, ತಾವು ಬೆಳೆದ ಉತ್ಪಗಳನ್ನು ಮಾರ್ಕೆಟಿಂಗ್ ಮಾಡುವ ಮೂಲಕ ಉತ್ಪನ್ನದ ವಿಶೇಷತೆಯನ್ನು ಪರಿಚಯಿಸುವುದರೊಂದಿಗೆ ಹೆಚ್ಚೆಚ್ಚು ಪ್ರಚಾರ ಆಗುವ ರೀತಿಯಲ್ಲಿ ನೋಡಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸಫಿಯಾ, ಮೈಸೂರು ಒಡಿಪಿ ಸಂಸ್ಥೆಯ ಮಹಿಳಾ ಅಭಿವೃದ್ಧಿ ಯೋಜನಾ ಸಂಯೋಜಕರಾದ ಮೋಲಿ ಪುಡ್ತಾದೊ, ಮಹಿಳೋದಯ ಮಹಿಳಾ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ಬಿ.ಎನ್. ಭಾರತಿ, ಜಿಲ್ಲಾ ಒಡಿಪಿ ಸಂಸ್ಥೆಯ ಸಂಯೋಜಕಿ ಜಾಯ್ಸ್ ಮಿನೇಜಸ್, ಒಡಿಪಿ ಸದಸ್ಯರಾದ ವಿಜಯ್ ನಾರಾಯಣ, ಧನು ಕುಮಾರ್ ಮತ್ತಿತರರು ಹಾಜರಿದ್ದರು.

ನಬಾರ್ಡ್‍ನ ಮುಖ್ಯ ಮಹಾ ಪ್ರಬಂಧಕ ನೀರಜ್ ಕುಮಾರ್ ವರ್ಮಾ ಅವರನ್ನು ಒಡಿಪಿ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು.