ಸುಂಟಿಕೊಪ್ಪ,ನ.12: ಐಗೂರು ಗ್ರಾಮ ಪಂಚಾಯಿತಿಯ 2020-21ನೇ ಸಾಲಿನ ಗ್ರಾಮ ಸಭೆಗೆ ಅರಣ್ಯ ಹಾಗೂ ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ್ದರಿಂದ ಸಭೆಗೆ ಬಂದಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಹಿರಿಯ ಅಧಿಕಾರಿಗಳು ಬಂದ ನಂತರವೇ ಸಭೆಯನ್ನು ಆರಂಭಿಸಿ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆ ಮುಂದೂಡಲ್ಪಟ್ಟಿತು. ಐಗೂರು ಪ್ರಾಥಮಿಕ ಕೃಷಿಪತ್ತಿನ ಸಭಾಂಗಣದಲ್ಲಿ ಐಗೂರು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ಸೋಮವಾರಪೇಟೆ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನು ಆರಂಭಿಸಲು ಅಧ್ಯಕ್ಷತೆ ವಹಿಸಿದ್ದ ಹೇಮಂತ್ ಕುಮಾರ್ ಮುಂದಾದಾಗ ಗ್ರಾ.ಪಂ.ಮಾಜಿ ಅಧ್ಯಕ್ಷ ರಮೇಶ್, ಮಾಜಿ ಸದಸ್ಯ ಕೆ.ಪಿ.ದಿನೇಶ್, ಲಿಂಗೇರಿ ರಾಜೇಶ್, ಬಿ.ಡಿ ರಮೇಶ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಗೆ ಆಗಮಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ಆಹಾರ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಗೈರಾದ ಬಗ್ಗೆ ಬೊಟ್ಟು ಮಾಡಿದ ಗ್ರಾಮಸ್ಥರು 2 ಪ್ರಮುಖ ಇಲಾಖೆಯ ಅಧಿಕಾರಿಗಳು ಬಾರದೆ ಸಭೆ ನಡೆಸುವುದು ಬೇಡ ಇಲಾಖೆಗಳಿಂದ ಗ್ರಾಮಸ್ಥರಿಗೆ ಗಂಭೀರ ಸಮಸ್ಯೆ ತಲೆದೊರಿದ್ದು, ಅದು ಇಲ್ಲಿ ಚರ್ಚೆಯಾಗಬೇಕು ಎಂದು ಹೇಳಿದರು.
ಆಡಳಿತ ಅಧಿಕಾರಿ ಹೇಮಂತ್ ಕುಮಾರ್ ಅರಣ್ಯ ಇಲಾಖೆ ಅಧಿಕಾರಿಗೆ ಮೊಬೈಲ್‍ಗೆ ಕರೆ ಮಾಡಿದಾಗ ಸ್ವೀಚ್ ಆಫ್ ಆಗಿತ್ತು. ಆಹಾರ ಇಲಾಖೆಯ ಪ್ರಭಾರ ಅಧಿಕಾರಿ ದಾಮೋದರ ಅವರಿಗೆ ಕರೆ ಮಾಡಿದಾಗ ಕಚೇರಿಯಲ್ಲಿ ತಾನು ಒಬ್ಬನೇ ಕರ್ತವ್ಯ ನಿರ್ವಹಿಸುತ್ತಿದ್ದು ಬರಲು ಸಾಧ್ಯವಾಗುವುದಿಲ್ಲವೆಂದು ಉತ್ತರ ನೀಡಿದರು. ಉಳಿದ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಲಿ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದಾಗ ತಮ್ಮ ಕಳೆದ ಗ್ರಾಮ ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರ? ಅವರಿಗೆ ನೋಟೀಸ್ ಕಳುಹಿಸಿ ಕೈತೊಳೆದುಕೊಂಡರೆ ಸಾಕೆ? ಎಲ್ಲಾ ಅಧಿಕಾರಿಗಳು ಬಂದ ನಂತರ ಸಭೆ ಮುಂದುವರೆಸಿ, ಕೃಷಿ ಬೆಳೆ ಕಾಡಾನೆ ಪಾಲಾಗುತ್ತಿದೆ. ಸೆಸ್ಕ್ ಇಲಾಖೆಯಿಂದ ಕೃಷಿಕರಿಗೆ ಕಿರುಕುಳ ಆಗುತ್ತಿದೆ. ಆದಿವಾಸಿಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ 1ವರ್ಷ ಕಳೆದರೂ ಇನ್ನೂ ಲಭ್ಯವಾಗಿಲ್ಲ ಎಂದು ಆರೋಪಿಸಿದರು.
ಪಿಡಿಓ ಯಾದವ್ ಮಾತನಾಡಿ ಒಂದಿಬ್ಬರು ಅಧಿಕಾರಿಗಳು ಗ್ರಾಮ ಸಭೆಗೆ ಬಾರದಿದ್ದರೆ ಸಭೆ ಮುಂದೂಡಬೇಕು ಎಂದೇನು ಕಾನೂನು ಇಲ್ಲ ಎಂದು ತಿಳಿಸಿದಾಗ ದಿನೇಶ್ ಸಿಡಿಮಿಡಿಗೊಂಡು ಕಳೆದ ಅನುಪಾಲನಾ ವರದಿ ಬಿಡುಗಡೆ ಮಾಡಿ ಜನರ ಸಮಸ್ಯೆಗೆ ಇಲಾಖಾಧಿಕಾರಿಗಳೇ ಉತ್ತರ ಕೊಡಬೇಕು ನೋಡಲ್ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಸಾಧ್ಯವಾದರೆ ಸಭೆಯನ್ನು ಮುಂದುವರೆಸಿ ಎಂದು ಒತ್ತಾಯಿಸಿದರು.
ಅಧ್ಯಕ್ಷರಾಗಿದ್ದಾಗ ನೀವು ಏನು ಅಭಿವೃದ್ಧಿ ಕೆಲಸ ಮಾಡಿದ್ದೀರ ಬಡವರಿಗೆ ಪಡಿತರ ಚೀಟಿ ಸಿಕ್ಕಿಲ್ಲ ಎಂದು ಹೇಳುತ್ತಿದ್ದೀರ ಎಂದು ಡಿ.ಎಸ್.ಚಂಗಪ್ಪ ವಿರುದ್ಧ ಅಪ್ಪು, ವಿಜಯ, ವಿನು ತಿರುಗಿಬಿದ್ದರು. ಕೊನೆಗೂ ಕೆಲ ಗ್ರಾಮಸ್ಥರ ವಿರೋಧದ ನಡುವೆಯೂ ನೋಡಲ್ ಅಧಿಕಾರಿಯವರು ಗ್ರಾಮಸಭೆಯನ್ನು ಮುಂದೂಡಿದರು.