ಶನಿವಾರಸಂತೆ, ನ. 12: ಪ್ರವಾದಿ ಮಹಮ್ಮದ್ ಅವರ ಜೀವನ ಸಮಗ್ರ ಹಾಗೂ ಸಂಪೂರ್ಣವೂ ಆಗಿದ್ದು, ಅವರ ಜೀವನದ ಹಾದಿಯನ್ನು ಪ್ರತಿಯೊಬ್ಬರೂ ಜೀವನದ ಆದರ್ಶವಾಗಿಸಿಕೊಳ್ಳಬೇಕು ಎಂದು ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಅಧ್ಯಕ್ಷ ತಮ್ಲೀಕ್ ಧಾರಿಮಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆಯ ನೂರ್ ಮಹಲ್‍ನಲ್ಲಿ ಎಸ್.ಕೆ.ಎಸ್. ಎಸ್.ಎಫ್. ಕುಶಾಲನಗರ ವಲಯ ಸಮಿತಿ ಆಯೋಜಿಸಿದ್ದ ಮದೀನಾ ಫ್ಯಾಷನ್ ನಾಯಕತ್ವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರವಾದಿಯವರ ಮೇಲಣ ಪ್ರೇಮದಿಂದ ಕಾನೂನಿನ ಚೌಕಟ್ಟನ್ನು ಮೀರಬಾರದು. ದಾರಿ ತಡೆದು ಹಿಂಸಾತ್ಮಕ ಕೃತ್ಯ ಎಸಗುವುದು ಹಾಗೂ ಆಸ್ತಿ- ಪಾಸ್ತಿಗಳಿಗೆ ಹಾನಿ ಮಾಡುವುದು ಪ್ರವಾದಿಯವರ ಆದರ್ಶವಲ್ಲ. ದಾರಿಯಲ್ಲಿರುವ ಕಲ್ಲು - ಮುಳ್ಳನ್ನು ನೀಗಿಸುವುದು ಕೂಡ ದಾನವಾಗಿದೆ. ಅವರ ಆದರ್ಶ ಅನುಕರಣೀಯವಾಗಿದ್ದು, ಸಿದ್ಧಾಂತವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಲಯಾಧ್ಯಕ್ಷ ರಝಾಕ್ ಫೈಝಿ ಮಾತನಾಡಿ, ಪ್ರವಾದಿ ಮಹಮ್ಮದ್ ಅವರ ಜನ್ಮ ಮಾಸಾಚರಣೆ ಪ್ರಯುಕ್ತ ರಾಜ್ಯ ಸಮಿತಿ ನಿರ್ದೇಶನದ ಮೇರೆಗೆ ಮದೀನಾ ಫ್ಯಾಷನ್ ಎಂಬ ಕಾರ್ಯಕ್ರಮವನ್ನು ಶಾಖಾ ಸಮಿತಿ ನಾಯಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ವಯನಾಡ್‍ನ ಸಮಸ್ತ ಮುದರ್ರಿಬ್ ಮಹಮ್ಮದ್ ಆಲಿ ಫೈಝಿ ಹಾಗೂ ಮಸ್ಜಿದುನ್ನೂರ್ ಕಾರ್ಯದರ್ಶಿ ಮಹಮ್ಮದ್ ಹನೀಫ್ ಮಾತನಾಡಿದರು. ಕೊಡ್ಲಿಪೇಟೆ ಯೂನಿಟ್ ಅಧ್ಯಕ್ಷ ಇಬ್ರಾಹಿಂ ಮಲ್ಲಳ್ಳಿ ಧ್ಜಜಾರೋಹಣ ನೆರವೇರಿಸಿದರು. ಮಸ್ಜಿದುನ್ನೂರ್ ಖತೀಬ್ ಹಾರೀಸ್ ಬಾಖವಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು.

ಮಸ್ಜಿದುನ್ನೂರ್ ಅಧ್ಯಕ್ಷ ಸುಲೈಮಾನ್, ಗೌರವಾಧ್ಯಕ್ಷ ಬಿ.ಐ. ಮಹಮ್ಮದ್, ಜಿಲ್ಲಾ ಖಜಾಂಚಿ ಜಿ.ಎಂ. ಸಿದ್ದೀಕ್ ಹಾಜಿ, ವಲಯ ಸಮಿತಿ ಕಾರ್ಯದರ್ಶಿ ಸಿದ್ದೀಖ್ ವಾಫಿ, ವಿಖಾಯ ಕಾರ್ಯದರ್ಶಿ ಜಿ.ಎ. ಅಬ್ದುಲ್ ರಹಮಾನ್, ಪ್ರಮುಖರಾದ ಝಹೀರ್ ನಿಝಾಮಿ, ರಫೀಕ್ ಬಾಖವಿ, ತೌಫಿಕ್ ಧಾರಿಮಿ, ನಾಸರ್ ಧಾರಿಮಿ, ಶುಹೈಲ್ ಫೈಝಿ, ಮಹಮ್ಮದ್ ಷರೀಫ್ ಉಪಸ್ಥಿತರಿದ್ದರು.

ಕುಶಾಲನಗರ, ಕೂಡಿಗೆ, ಸುಂಟಿಕೊಪ್ಪ, ಏಳನೇ ಹೊಸಕೋಟೆ, ಶನಿವಾರಸಂತೆ, ಸೋಮವಾರಪೇಟೆ, ಬಜೆಗುಂಡಿ, ಕೊಡ್ಲಿಪೇಟೆ ಶಾಖಾ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.