ಗೋಣಿಕೊಪ್ಪಲು, ನ. 11: ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ಹರಿಶ್ಚಂದ್ರಪುರದ ಚೇಂಬರ್‍ನ ಸಭಾಂಗಣದಲ್ಲಿ ಅಧ್ಯಕ್ಷರಾದ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆಯು ನಡೆಯಿತು. ಸಭೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಠಾಣಾಧಿಕಾರಿ ಹೆಚ್.ಸುಬ್ಬಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ನಗರದ ಟ್ರಾಫಿಕ್ ವ್ಯವಸ್ಥೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಸಭೆಯಲ್ಲಿ ಮುಖ್ಯ ರಸ್ತೆಯ ಏಕಮುಖ ಸಂಚಾರ, ಬೈಪಾಸ್ ರಸ್ತೆಯಲ್ಲಿ ವಾಹನ ನಿಲುಗಡೆ, ಪ್ರಮುಖ ಸ್ಥಳಗಳಲ್ಲಿ ನಾಮಫಲಕ ಅಳವಡಿಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಚೇಂಬರ್‍ನ ಉಪಾಧ್ಯಕ್ಷರಾದ ಪೊನ್ನಿಮಾಡ ಸುರೇಶ್ ಪ್ರಸ್ತಾವಿಕ ವಾಗಿ ಮಾತನಾಡಿ ನಗರಕ್ಕೆ ಆಗಮಿಸುವ ಪೊಲೀಸ್ ಅಧಿಕಾರಿ ಗಳನ್ನು ಆರಂಭದಲ್ಲಿ ಚೇಂಬರ್ ವತಿಯಿಂದ ಬರಮಾಡಿಕೊಂಡು ಇಲ್ಲಿಯ ವಸ್ತು ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪೊಲೀಸ್ ಹಾಗೂ ವರ್ತಕರ

(ಮೊದಲ ಪುಟದಿಂದ) ನಡುವೆ ಉತ್ತಮ ಬಾಂಧವ್ಯ ವೃದ್ದಿಸಲು ಇಂತಹ ಸಭೆಗಳು ಅವಶ್ಯಕವಾಗಿದೆ. ನಗರದಲ್ಲಿ ಇರುವ ಕೆಲವೇ ಕೆಲವು ಸಮಸ್ಯೆಗಳನ್ನು ಬಗೆಹರಿಸುವತ್ತ ಪೊಲೀಸರು ವಿಶೇಷ ಕಾಳಜಿ ವಹಿಸಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಾನೀಯ ಸಮಿತಿ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಕಳೆದ 13 ವರ್ಷಗಳಿಂದ ಚೇಂಬರ್ ಆಫ್ ಕಾಮರ್ಸ್ ಉತ್ತಮ ಸಂಸ್ಥೆಯಾಗಿ ಮುಂದುವರೆಯುತ್ತಿದೆ. ವರ್ತಕರಿಗಾಗುವ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಲಾಗುತ್ತಿದೆ. ನಗರದಲ್ಲಿ ವಾರದ ಕೆಲವು ದಿನಗಳಲ್ಲಿ ಮಾತ್ರವೇ ವಾಹನ ಸಂಚಾರ ದಟ್ಟಣೆ ಕಂಡುಬರುತ್ತಿದೆ. ನಿಗದಿತ ಸ್ಥಳದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು, ಆಟೋಚಾಲಕರು ಅಡ್ಡಾದಿಡ್ಡಿಯಾಗಿ ಓಡಾಟ ನಡೆಸುವುದಕ್ಕೆ ಕಡಿವಾಣ ಬೀಳಬೇಕು. ನಿಗದಿತ ಸ್ಥಳಗಳಲ್ಲಿಯೇ ವಾಹನ ನಿಲುಗಡೆಯಾದಲ್ಲಿ ಟ್ರಾಫಿಕ್ ಸಮಸ್ಯೆ ಉದ್ಬವಿಸುವುದಿಲ್ಲ ಎಂದರು.

ಠಾಣಾಧಿಕಾರಿ ಹೆಚ್.ಸುಬ್ಬಯ್ಯ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಲು ಇರುವ ಸೌಕರ್ಯದಲ್ಲಿ ಕೆಲವು ಮಾರ್ಪಾಡುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಗರದ ವರ್ತಕರ ಸಹಕಾರ ಅಮೂಲ್ಯವಾಗಿದೆ. ಸದಾ ಒತ್ತಡದಲ್ಲಿರುವ ಬೈಪಾಸ್ ರಸ್ತೆಯ ಒಂದೆ ಬದಿಯಲ್ಲಿ ವಾಹನ ನಿಲುಗಡೆಗೆ ಅಲ್ಲಿಯ ವರ್ತಕರೊಂದಿಗೆ ಚೇಂಬರ್‍ನ ಮುಖಂಡರು ಸಭೆ ನಡೆಸಿ ಒಮ್ಮತದ ತೀರ್ಮಾನದ ಮೇರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಗರದಲ್ಲಿ ಗಾಂಜಾ ಪ್ರಕರಣಗಳು ಮರುಕಳಿಸದಂತೆ ವರ್ತಕರು ಇಲಾಖೆಯೊಂದಿಗೆ ಸಹಕರಿಸಬೇಕು. ದಂಧೆ ನಡೆಸುವವರ ಬಗ್ಗೆ ಮಾಹಿತಿಗಳನ್ನು ನೀಡುವಂತಾಗಬೇಕು. ನೀಡುವ ಮಾಹಿತಿಗಳನ್ನು ಇಲಾಖೆಯು ಗೌಪ್ಯತೆ ಕಾಪಾಡಿಕೊಳ್ಳಲಿದೆ. ಯಾವುದೇ ಸಂದರ್ಭದಲ್ಲಿ ಪೊಲೀಸರು ಲಭ್ಯವಿದ್ದು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವರ್ತಕರ ಸಹಾಯ ಬಹುಮುಖ್ಯವಾಗಿದೆ ನಗರದಲ್ಲಿ ಮುಖ್ಯ ರಸ್ತೆಯು ಒಂದೂವರೆ ಕಿ.ಮೀ. ಉದ್ದವಿದೆ. ಸರಿಸುಮಾರು ನಾನೂರು ವಾಹನಗಳನ್ನು ನಿಲುಗಡೆ ಮಾಡಬಹುದು. ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸ್ಥಳದ ಅಭಾವ ಎದುರಾಗುತ್ತಿದೆ. ಈ ಬಗ್ಗೆ ವಾಹನದ ಮಾಲೀಕರೇ ಎಚ್ಚೆತ್ತುಕೊಂಡು ತಮ್ಮ ವಾಹನಗಳನ್ನು ನಿಲುಗಡೆ ಮಾಡಿದಲ್ಲಿ ನಗರದಲ್ಲಿ ವಾಹನದ ನಿಲುಗಡೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದರು.

ಸಭೆಯಲ್ಲಿ ಚೇಂಬರ್‍ನ ಉಪಾಧ್ಯಕ್ಷರಾದ ಕೇಶವ್ ಕಾಮತ್, ಪ್ರಭಾಕರ್ ನೆಲ್ಲಿತ್ತಾಯ, ಚೇಂಬರ್‍ನ ಮಾಜಿ ಜಿಲ್ಲಾಧ್ಯಕ್ಷ ಬಿ.ಎನ್.ಪ್ರಕಾಶ್,ನಿರ್ದೇಶಕರಾದ ಅಜಿತ್ ಅಯ್ಯಪ್ಪ,ಮುಂತಾದವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಇವರ ವಿಷಯಗಳಿಗೆ ನೂತನ ಠಾಣಾಧಿಕಾರಿ ಸುಬ್ಬಯ್ಯ ಸಮಜಾಯಿಸಿಕೆ ನೀಡಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ತೆಕ್ಕಡ ಕಾಶಿ, ನಿರ್ದೇಶಕರಾದ ಆಲೀರ ಉಮ್ಮರ್, ಮಲ್ಚೀರ ಗಾಂಧಿ ದೇವಯ್ಯ, ಅರವಿಂದ್ ಕುಟ್ಟಪ್ಪ, ಪಿ.ಜಿ. ರಾಜಶೇಖರ್, ಅಜಿತ್ ಅಯ್ಯಪ್ಪ, ಮಾಚಿಮಂಡ ಅನಿತಾ, ಕೃಷ್ಣಪ್ಪ, ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿರ್ದೇಶಕರಾದ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಸ್ವಾಗತಿಸಿ, ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು. -ಹೆಚ್.ಕೆ. ಜಗದೀಶ್