ಕೂಡಿಗೆ, ನ. 10: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಶಿನಗುಪ್ಪೆ ಗ್ರಾಮದ ಅರಣ್ಯ ಪ್ರದೇಶವನ್ನು ಪ್ರಭಾವಿಗಳು ಒತ್ತುವರಿ ಮಾಡಲು ಮುಂದಾಗಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅರಶಿನಗುಪ್ಪೆ ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತೊರೆನೂರು ಗ್ರಾಮ ಪಂಚಾಯಿತಿಯ ಅರಣ್ಯ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಯೋರ್ವರು ಅಂದಾಜು ಮೂವತ್ತು ಏಕರೆಯಷ್ಟು ಜಾಗಕ್ಕೆ ಬೇಲಿ ನಿರ್ಮಿಸಿ ಅರಣ್ಯ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅರಶಿನಗುಪ್ಪೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತೊರೆನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರವಿ ಮಾತನಾಡಿ, ವ್ಯಕ್ತಿಯೋರ್ವರು ಅರಣ್ಯ ಪ್ರದೇಶದ ಜಾಗಕ್ಕೆ ಬೇಲಿ ಹಾಕಿ ಅತಿಕ್ರಮಣಕ್ಕೆ ಮುಂದಾಗಿದ್ದಾರೆ. ಪ್ರಮುಖವಾಗಿ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಅಧಿಕವಾಗಿದ್ದು, ಕಾಡಾನೆಗಳು ರೈತರ ಬೆಳೆ ನಾಶ ಮಾಡಿ ತೊಂದರೆ ನೀಡುತ್ತವೆ. ಖಾಸಗಿ ವ್ಯಕ್ತಿಗಳು ಅರಣ್ಯ ಪ್ರದೇಶವನ್ನು ಕಬಳಿಸುತ್ತಿದ್ದು, ಕಾಡಾನೆಗಳು ನೇರವಾಗಿ ಊರಿಗೆ ನುಗ್ಗುತ್ತವೆ. ಇದರಿಂದ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಭಾರೀ ತೊಂದರೆಯಾಗುತ್ತದೆ. ಯಾರ ಅನುಮತಿಯೂ ಇಲ್ಲದೇ ಸೋಲಾರ್ ತಂತಿಯನ್ನು ಅಳವಡಿಸಿದ್ದಾರೆ. ಅನಾಹುತಗಳು ಸಂಭವಿಸಿದರೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.

ಗ್ರಾಮಸ್ಥ ಉದಯ್ ಮಾತನಾಡಿ, ಅರಣ್ಯದಲ್ಲಿ ಸೋಲಾರ್ ತಂತಿಯನ್ನು ಹಾಕಿ ಅರಣ್ಯ ಒತ್ತುವರಿಗೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಿ, ಅರಣ್ಯವನ್ನು ಉಳಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ವ್ಯಾಪ್ತಿಯ ಗ್ರಾಮಸ್ಥರು ಅರಣ್ಯ ಸಚಿವರಿಗೆ, ಜಿಲ್ಲಾಧಿಕಾರಿಯವರಿಗೆ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗೆ, ಮತ್ತು ಕ್ಷೇತ್ರದ ಶಾಸಕರಿಗೆ ತಾಲೂಕು ತಹಶೀಲ್ದಾರರಿಗೆ ಅರಣ್ಯ ಒತ್ತುವರಿ ಬಗ್ಗೆ ಲಿಖಿತವಾಗಿ ದೂರು ನೀಡಲು ಸಿದ್ದರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಿರಣ್, ಎಸ್.ಡಿ.ಉದಯ್, ಉಮೇಶ್, ಬೇಬಿ, ವಾಸು, ಸೌಮೇಗೌಡ ಸತೀಶ್, ಕಿಶೋರ್, ವಾಸು, ಕಂಬು, ಧನಂಜಯ್, ಮಹೇಶ್, ಸ್ವಾಮಿ ಹಾಗೂ ಮೂವತ್ತಕ್ಕೂ ಹೆಚ್ಚು ಗ್ರಾಮಸ್ಥರು ಇದ್ದರು.