ಗೋಣಿಕೊಪ್ಪಲು, ನ. 10: ಶಾಲೆಯ ಹಳೆಯ ವಿದ್ಯಾರ್ಥಿಗಳು ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಸಂಗ್ರಹಿಸಿದ ರೂ. 11 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿ ರುವ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಮೈದಾನಕ್ಕೆ ಭೂಮಿ ಪೂಜೆ ನೆರವೇರಿ ಸಲಾಯಿತು. ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಕೆ. ಪ್ರವೀಣ್ ಅಧ್ಯಕ್ಷತೆಯಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೋಣಿಕೊಪ್ಪಲುವಿನ ಸಂತ ಥಾಮಸ್ ಶಾಲೆಯು ಇತ್ತೀಚೆಗೆ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದೆ.

ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಸುವರ್ಣ ಮಹೋತ್ಸವ ನೆನಪಿಗಾಗಿ ಶಾಲೆಯ ಆವರಣದಲ್ಲಿ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಮೈದಾನ ನಿರ್ಮಿಸಲು ತೀರ್ಮಾನಿಸಿದ್ದರು. ಕೋವಿಡ್ -19 ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಮೈದಾನವನ್ನು ಆದಷ್ಟು ಬೇಗನೇ ನಿರ್ಮಿಸಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣ ಗೊಳಿಸಲು ತೀರ್ಮಾನಿಸಿದ್ದಾರೆ ಎಂದರು.

ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕ ಕೇಶವ್ ಕಾಮತ್ ಮಾತನಾಡಿ ಶಾಲೆಯ ಹಳೆಯ ವಿದ್ಯಾರ್ಥಿ ಸಂಘ ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲೆಯಲ್ಲಿಯೇ ಮೊದಲ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಮೈದಾನವನ್ನು ನಿರ್ಮಿಸಲು ವಿದ್ಯಾರ್ಥಿ ಗಳೇ ಹಣವನ್ನು ಕ್ರೋಢೀಕರಿಸಿದ್ದಾರೆ. ಈ ಹಣದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿರುವ ರೀತಿಯಲ್ಲಿ ಮೈದಾನ ನಿರ್ಮಾಣ ಗೊಳ್ಳಲಿದೆ. ಇದರಿಂದ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಲು ಸಹಕಾರಿಯಾಗಲಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಗಳನ್ನು ಹೊರಸೂಸಲು ಇದರಿಂದ ಅನುಕೂಲವಾಗಲಿದೆ ಎಂದರು.

ಶಾಲೆಯ ವ್ಯವಸ್ಥಾಪಕ ಫಾ. ಅಲೆಕ್ಸ್ ಶಾಲೆಯ ಹಳೆಯ ವಿದ್ಯಾರ್ಥಿ ಗಳು ಇಂತಹ ದೊಡ್ಡ ಸಾಧನೆಯನ್ನು ಶಾಲೆಯ ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಕಲ್ಪಿಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಾಸ್ಕೆಟ್ ಬಾಲ್‍ನ ಕ್ರೀಡೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲವಾಗಲಿದೆ ಎಂದರು. ಭೂಮಿ ಪೂಜೆ ಸಂದರ್ಭ ಶಾಲೆಯ ಪ್ರಾಂಶುಪಾಲ ರೆ.ಫಾ. ಜಾರ್ಜ್, ಆಡಳಿತ ಅಧಿಕಾರಿ ಫ್ರಾನ್ಸಿಸ್, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮನೆಯಪಂಡ ಧೀರಜ್ ಮಾಚಯ್ಯ, ಉಪಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಖಜಾಂಚಿ ಚಂದನ್ ಕಾಮತ್, ನಿರ್ದೇಶಕರಾದ ಡಾಡು ಜೋಸೆಫ್, ಶರತ್‍ಕಾಂತ್, ಅಬ್ದುಲ್ ಸಮ್ಮದ್, ಸೇರಿದಂತೆ ಇಂಜಿನಿಯರ್ ಸುರೇಶ್ ಹಾಜರಿದ್ದರು.

-ಹೆಚ್.ಕೆ. ಜಗದೀಶ್